2ಎ ಮೀಸಲಾತಿ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ: ಶಾಸಕ ಪ್ರಸಾದ ಅಬ್ಬಯ್ಯ

| Published : Dec 15 2024, 02:00 AM IST

2ಎ ಮೀಸಲಾತಿ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ: ಶಾಸಕ ಪ್ರಸಾದ ಅಬ್ಬಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಮೀಸಲಾತಿಗೆ ಅವಕಾಶ ಇಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಅಫಿಡೇವಿಟ್‌ ಸಹ ಸಲ್ಲಿಸಿದ್ದಾರೆ. ಆದರೆ, ಅವರೇ ಈಗ ಯೂಟರ್ನ್ ಹೊಡೆಯುವ ಮೂಲಕ ಮೀಸಲಾತಿಗೆ ಒತ್ತಾಯಿಸುತ್ತಿದ್ದಾರೆ.

ಹುಬ್ಬಳ್ಳಿ:

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ವಿಷಯದಲ್ಲಿ ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ. ಈ ವಿಷಯದಲ್ಲಿ ಬಿಜೆಪಿ ನಾಯಕರು ವಿನಾಕಾರಣ ರಾಜಕಾರಣ ಮಾಡುತ್ತಿದ್ದಾರೆ ಎಂದು ಶಾಸಕ, ಸ್ಲಂ ಬೋರ್ಡ್‌ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಆರೋಪಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಮೀಸಲಾತಿಗೆ ಅವಕಾಶ ಇಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಅಫಿಡೇವಿಟ್‌ ಸಹ ಸಲ್ಲಿಸಿದ್ದಾರೆ. ಆದರೆ, ಅವರೇ ಈಗ ಯೂಟರ್ನ್ ಹೊಡೆಯುವ ಮೂಲಕ ಮೀಸಲಾತಿಗೆ ಒತ್ತಾಯಿಸುತ್ತಿರುವುದು ಹಾಸ್ಯಾಸ್ಪದ ಸಂಗತಿ ಎಂದರು.

ಬೆಳಗಾವಿ ಸುವರ್ಣ ಸೌಧದ ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಹಾಗೂ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕು ಎಂಬ ಕಾರಣಕ್ಕೆ ಕೋಟ್ಯಂತ ರುಪಾಯಿ ವೆಚ್ಚ ಮಾಡಿ, ಅಧಿವೇಶನ ಮಾಡಲಾಗುತ್ತಿದೆ. ಆದರೆ, ಇಲ್ಲಿಯ ವರೆಗೂ ಒಂದೇ ಒಂದು ಆರೋಗ್ಯಕರ ಚರ್ಚೆ ಆಗದೇ ಇರುವುದು ದುರಂತದ ಸಂಗತಿ. ಬಿಜೆಪಿಯವರು ರಾಜ್ಯದ ಅಭಿವೃದ್ಧಿ ವಿಚಾರ ಇಟ್ಟುಕೊಂಡು ಚರ್ಚೆ ಮಾಡುತ್ತಿಲ್ಲ. ಕೇವಲ ಜಾತಿ, ಸಮುದಾಯವನ್ನು ಟಾರ್ಗೆಟ್ ಮಾಡಿ ಸದನದ ಸಮಯ ಹಾಳು ಮಾಡುತ್ತಿದ್ದಾರೆ. ಸರ್ಕಾರ ಎಲ್ಲದಕ್ಕೂ ಉತ್ತರ ಕೊಡಲು ತಯಾರಿದೆ, ಕೇಳುವ ತಾಳ್ಮೆ ಬಿಜೆಪಿಗಿಲ್ಲ ಎಂದು ಹರಿಹಾಯ್ದರು.

ಪ್ರಜಾಪ್ರಭುತ್ವದ ವಿರುದ್ಧವಾದುದು:

ಒಂದು ನೇಷನ್ ಒಂದು ಎಲೆಕ್ಷನ್ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿದ್ದು, ಅದರಲ್ಲಿ ಅನೇಕ ತಾಂತ್ರಿಕ ತೊಂದರೆಗಳಿವೆ. ಅವುಗಳ ಬಗ್ಗೆ ಕೇಂದ್ರ ಸರ್ಕಾರ ಚರ್ಚೆಗೆ ಅವಕಾಶ ನೀಡದೆ ಹಠ ಹಿಡಿದು ಅನುಷ್ಠಾನಕ್ಕೆ ತರುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ. ಈ ವಿಚಾರದಲ್ಲಿ ಕರ್ನಾಟಕ ಸೇರಿದಂತೆ ಯಾವ ರಾಜ್ಯವನ್ನು ಕೇಂದ್ರ ಸರ್ಕಾರ ಗಣನೆಗೆ ತೆಗೆದುಕೊಂಡಿಲ್ಲ. ಈ ಮೂಲಕ ಕೇಂದ್ರ ಸರ್ಕಾರ ರಾಜ್ಯಗಳ ಅಧಿಕಾರವನ್ನು ಸೆಂಟ್ರಲೈಜ್ ಮಾಡುವ ಹುನ್ನಾರ ನಡೆದಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಆರೋಪಿಸಿದರು.