ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಲೋಕಸಭಾ ಚುನಾವಣೆ ಹಿನ್ನೆಲೆ ಚಡಚಣ ತಾಲೂಕಿನ ಇಂಚಗೇರಿಯಲ್ಲಿ ಮೇ 4ರಂದು ಕಾಂಗ್ರೆಸ್ ಬೆಂಬಲಿತ ಪಂಚಮಸಾಲಿ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಪಂಚಮಸಾಲಿ ಸಮಾಜಕ್ಕೆ ಬಿಜೆಪಿಯಿಂದ ಆಗಿರುವ ಅನ್ಯಾಯ ಹಾಗೂ ಕಾಂಗ್ರೆಸ್ನಿಂದ ಆಗಿರುವ ಅನುಕೂಲತೆಗಳ ಬಗ್ಗೆ ಜನರಿಗೆ ತಿಳಿಸಲಾಗುವುದು ಎಂದು ಕಾಂಗ್ರೆಸ್ ಬೆಂಬಲಿತ ಪಂಚಮಸಾಲಿ ಸಮಾಜದ ಮುಖಂಡ ಎಂ.ಆರ್.ಪಾಟೀಲ್ ಹೇಳಿದರು.ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಪಂಚಮಸಾಲಿ ಸಮುದಾಯದ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿತ ಇರುವ ಜನರನ್ನು ಇಂಚಗೇರಿಯಲ್ಲಿ ಸೇರಿಸಿ ಮೇ 4ರಂದು ಸಂಜೆ 6ಗಂಟೆಗೆ ಬೃಹತ್ ಸಮಾವೇಶ ನಡೆಸಲಾಗುತ್ತಿದೆ. ಪಂಚಮಸಾಲಿ ನಾಯಕರಾದ ವಿನಯ ಕುಲಕರ್ಣಿ, ವಿಜಯಾನಂದ ಕಾಶಪ್ಪನವರ, ಬಿ. ಆರ್.ಪಾಟೀಲ್ ಆಳಂದ, ಸಂಗಣ್ಣ ಕರಡಿ, ಅಶೋಕ ಮನಗೂಳಿ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ಕಾಂಗ್ರೆಸ್‌ಗೆ ನಾವು ಯಾಕೆ ಬೆಂಬಲಿಸಬೇಕು ಎಂದು ತಿಳಿಸಲಿದ್ದೇವೆ. ಕಾಂಗ್ರೆಸ್ ಗೆ ಬೆಂಬಲಿಸುವ ಸಮಾಜದ ಜನರಿಗೆ ಪ್ರೋತ್ಸಾಹ ಕೊಡಲು ಈ ಸಮಾವೇಶ ನಡೆಸಲಾಗುತ್ತಿದೆ. ಅಂದಿನ ಸಮಾವೇಶದಲ್ಲಿ ಜಿಲ್ಲೆಯ ಮೂಲೆ ಮೂಲೆಯಿಂದ 10 ಸಾವಿರಕ್ಕೂ ಅಧಿಕ ಜನ ಸಮಾಜದ ಮುಖಂಡರು ಸೇರಲಿದ್ದಾರೆ ಎಂದರು.
ಈಗ ಇರುವ ಸಂಸದರು ನಿಷ್ಕ್ರೀಯರಾಗಿದ್ದಾರೆ, ಕ್ರಿಯಾಶೀಲರಿಲ್ಲ, ಯಾವುದೇ ಅಭಿವೃದ್ಧಿ ಮಾಡಿಲ್ಲ, ಅವರದು ಒಡೆದು ಆಳುವ ನೀತಿ ಇರುವುದರಿಂದ ಅವರಿಗೆ ನಮ್ಮ ಬೆಂಬಲ ಇಲ್ಲ ಎಂದು ಹೇಳಿದರು.ಮುಖ್ಯವಾಗಿ ಬಿಜೆಪಿಯಲ್ಲಿ ಪಂಚಮಸಾಲಿ ಸಮಾಜದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರಿಗೂ ಅನ್ಯಾಯ ಆಗಿದೆ. ಅವರನ್ನು ಸಿಎಂ, ರಾಜ್ಯಾಧ್ಯಕ್ಷ, ವಿರೋಧಪಕ್ಷದ ನಾಯಕ ಮಾಡ್ತಿವಿ ಅಂದು ಮಾಡಲಿಲ್ಲ. ಅವರೂ ಪಕ್ಷದಲ್ಲಿ ಅನಿವಾರ್ಯವಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಪಂಚಮಸಾಲಿ ಸಮಾಜ ಮೀಸಲಾತಿಗಾಗಿ ಹೋರಾಟ ಮಾಡಿ, ಸಮಾಜದ ಜಗದ್ಗುರುಗಳಾದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು 1 ಸಾವಿರ ಕಿಲೊಮೀಟರ್ ಪಾದಯಾತ್ರೆ ಮಾಡಿದಾಗಲೂ ಸೌಜನ್ಯಕ್ಕೂ ಸಂಸದ ರಮೇಶ ಜಿಗಜಿಣಗಿ ಬೆಂಬಲ ಸೂಚಿಸಲು ಬರಲಿಲ್ಲ. ಮೊದಲೇ ಬಿಜೆಪಿಯಲ್ಲಿ ಎರಡು ಬಣಗಳಿವೆ. ಒಂದು ಪರವಾಗಿ ಇದ್ರೆ, ಮತ್ತೊಂದು ವಿರೋಧವಾಗಿರುತ್ತದೆ. ಪಕ್ಷದಲ್ಲಿ ಈಶ್ವರಪ್ಪಗೆ ಆದ ಪರಿಸ್ಥಿತಿ ಯತ್ನಾಳಗೂ ಆಗುವ ಕಾಲ ದೂರ ಇಲ್ಲ. ಯತ್ನಾಳ ಅವರನ್ನು ತುಳಿಯುವುದರಲ್ಲಿ ಜಿಗಜಿಣಗಿ ಅವರ ಪಾತ್ರವೂ ಇದೆ ಎಂದು ಅವರು ಆರೋಪಿಸಿದರು.
ಇನ್ನೋರ್ವ ಮುಖಂಡ ಸಂಗಮೇಶ ಬಬಲೇಶ್ವರ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಸಮಾಜದ ಕಾಂಗ್ರೆಸ್ ಬೆಂಬಲಿತ ಮುಖಂಡರಾದ ಈರಣ್ಣ ಪಟ್ಟಣಶೆಟ್ಟಿ, ಶಂಕರಗೌಡ ಪಾಟೀಲ್, ಈರಗೊಂಡ ಬಿರಾದಾರ, ಅಶೋಕಗೌಡ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.