ಪಂಚಮಸಾಲಿ ಮೀಸಲಾತಿ: ನಾಳೆ ಶಾಸಕರ ಮನೆ ಮುಂದೆ ಚಳವಳಿ

| Published : Jul 05 2024, 12:53 AM IST

ಸಾರಾಂಶ

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಸಮಾಜದ ವತಿಯಿಂದ ರಾಜ್ಯಾದ್ಯಂತ ಪತ್ರ ಚಳವಳಿ ಹಮ್ಮಿಕೊಂಡಿದ್ದು, ಜು. 6ರಂದು ಶಾಸಕರಾದ ಅರವಿಂದ ಬೆಲ್ಲದ ಹಾಗೂ ಎಂ.ಆರ್. ಪಾಟೀಲ ಮನೆ ಎದುರು ಪತ್ರ ಚಳವಳಿ ಸಂಘಟಿಸಲಾಗಿದೆ.

ಹುಬ್ಬಳ್ಳಿ:

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಸಮಾಜದ ವತಿಯಿಂದ ರಾಜ್ಯಾದ್ಯಂತ ಪತ್ರ ಚಳವಳಿ ಹಮ್ಮಿಕೊಂಡಿದ್ದು, ಜು. 6ರಂದು ಶಾಸಕರಾದ ಅರವಿಂದ ಬೆಲ್ಲದ ಹಾಗೂ ಎಂ.ಆರ್. ಪಾಟೀಲ ಮನೆ ಎದುರು ಪತ್ರ ಚಳವಳಿ ಸಂಘಟಿಸಲಾಗಿದೆ ಎಂದು ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿಯ ಶಕ್ತಿ ನಗರದಲ್ಲಿರುವ ಕುಂದಗೋಳ ಶಾಸಕ ಎಂ.ಆರ್. ಪಾಟೀಲ ಅವರ ಮನೆಯ ಮುಂದೆ ಬೆಳಗ್ಗೆ 9ಕ್ಕೆ ಹಾಗೂ ಮಧ್ಯಾಹ್ನ 12ಕ್ಕೆ ಗೋಕುಲ ರಸ್ತೆ ಅಕ್ಷಯ ಪಾರ್ಕ್‌ನಲ್ಲಿರುವ ಶಾಸಕ ಅರವಿಂದ ಬೆಲ್ಲದ ನಿವಾಸದ ಎದುರು ಪತ್ರ ಚಳವಳಿ ನಡೆಸಲಾಗುವುದು ಎಂದರು.

ಜು. 3ರಂದು ಧಾರವಾಡದ ಶಾಸಕ ವಿನಯ ಕುಲಕರ್ಣಿ ನಿವಾಸದ ಎದುರು ಪತ್ರ ಚಳವಳಿ ನಡೆಸಲಾಗಿತ್ತು. ರಾಜ್ಯ ಸರ್ಕಾರದ ಮಳೆಗಾಲದ ಅಧಿವೇಶನದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ಶಾಸಕರು ನಮ್ಮ ಮೀಸಲಾತಿ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲಿ ಎಂಬ ಉದ್ದೇಶದಿಂದ ಈ ಹೋರಾಟ ರೂಪಿಸಿದ್ದೇವೆ ಎಂದರು.

8ರಂದು ಬೆಳಗಾವಿ ಜಿಲ್ಲೆಯಲ್ಲಿ, 9ರಂದು ಬಾಗಲಕೋಟೆ, 10ರಂದು ಶಿವಮೊಗ್ಗ, ಗದಗ, 11ರಂದು ಕಲಬುರಗಿ ಹಾಗೂ 12ರಂದು ವಿಜಯಪುರ ಜಿಲ್ಲೆಗಳಲ್ಲಿ ಪತ್ರ ಚಳವಳಿ ನಡೆಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಶಶಿಶೇಖರ ಡಂಗನವರ, ಜಿ.ಜಿ. ದ್ಯಾವನಗೌಡ್ರ, ದೀಪಾ ಗೌರಿ, ಮೈಲಾರಿ ಧಾರವಾಡ, ಇತರರು ಇದ್ದರು.