ಪಾಂಡವಪುರ ಉಪವಿಭಾಗಾಧಿಕಾರಿ ಡಾ.ಕೆ.ಆರ್.ಶ್ರೀನಿವಾಸ್ ಪಟ್ಟಣದ ಹೊರವಲಯದ ಮಾತೃಭೂಮಿ ವೃದ್ಧಾಶ್ರಮದ ವಯೋವೃದ್ಧನಿಗೆ ಸ್ವತಃ ಶೇವಿಂಗ್ ಮಾಡಿ, ಕೇಶ ಮುಂಡನ ನಡೆಸಿ ಸ್ನಾನ ಮಾಡಿಸುವ ಮೂಲಕ ಗಮನ ಸೆಳೆದರು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಾಂಡವಪುರ ಉಪವಿಭಾಗಾಧಿಕಾರಿ ಡಾ.ಕೆ.ಆರ್.ಶ್ರೀನಿವಾಸ್ ಪಟ್ಟಣದ ಹೊರವಲಯದ ಮಾತೃಭೂಮಿ ವೃದ್ಧಾಶ್ರಮದ ವಯೋವೃದ್ಧನಿಗೆ ಸ್ವತಃ ಶೇವಿಂಗ್ ಮಾಡಿ, ಕೇಶ ಮುಂಡನ ನಡೆಸಿ ಸ್ನಾನ ಮಾಡಿಸುವ ಮೂಲಕ ಗಮನ ಸೆಳೆದರು.ಪಟ್ಟಣದ ಹೊರವಲಯದ ಚಿಕ್ಕೋನಹಳ್ಳಿ ಬಳಿ ಇರುವ ಮಾತೃಭೂಮಿ ಉಚಿತ ವೃದ್ಧಾಶ್ರಮಕ್ಕೆ ಕುಟುಂಬಸ್ಥರೊಂದಿಗೆ ಆಗಮಿಸಿದ ಉಪ ವಿಭಾಗಾಧಿಕಾರಿ ಡಾ.ಕೆ.ಆರ್.ಶ್ರೀನಿವಾಸ್ ದಂಪತಿ ಅನಾಥರೊಂದಿಗೆ ಬೆರೆತು ಯೋಗ ಕ್ಷೇಮ ವಿಚಾರಿಸಿದರು.
ಮಾತೃಭೂಮಿ ವೃದ್ಧಾಶ್ರದಲ್ಲಿ ಅಸಹಾಯಕ ವೃದ್ಧರು, ಅಪಾರ ಆಸ್ತಿ ಪಾಸ್ತಿ ಹೊಂದಿದ್ದರೂ ಇಳಿವಯಸ್ಸಿನಲ್ಲಿ ಮಕ್ಕಳು ಮತ್ತು ಕುಟುಂಬಸ್ಥರಿಗೆ ಬೇಡವಾಗಿರುವ ಅನಾಥ ವೃದ್ಧರಿದ್ದು, ಸಂಧ್ಯಾ ಕಾಲದಲ್ಲಿ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿರುವ ವಯೋ ವೃದ್ಧರೊಂದಿಗೆ ಕುಶಲೋಪರಿ ನಡೆಸಿದ ಡಾ.ಶ್ರೀನಿವಾಸ್ ತಮ್ಮ ಮಾವನ ಮನೆ ಊಚನಹಳ್ಳಿ ತೋಟದ ಮನೆಯಲ್ಲಿ ತಮ್ಮ ಪತ್ನಿ ತಯಾರಿಸಿ ತಂದಿದ್ದ ಮೊಸರನ್ನ, ಟಮೊಟೋ ಬಾತ್ ಹಾಗೂ ಕೇಸರಿ ಬಾತ್ ಬಡಿಸಿ ಅನಾಥರೊಂದಿಗೆ ತಾವೂ ಊಟ ಮಾಡಿದರು.ಈ ಸಮಯದಲ್ಲಿ ಪಾರ್ಶ್ವವಾಯು ರೋಗಕ್ಕೆ ತುತ್ತಾಗಿ ಕೈ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದ ವಯೋ ವೃದ್ಧನನ್ನು ಗಮನಿಸಿದ ಉಪ ವಿಭಾಗಾಧಿಕಾರಿಗಳು ಕೈಗವಚ ಧರಿಸಿ ವೃದ್ಧಾಶ್ರಮದ ಸಂಸ್ಥಾಪಕ ಜೈಹಿಂದ್ ನಾಗಣ್ಣ ಜೊತೆಗೂಡಿ ವಯೋವೃದ್ಧನಿಗೆ ಶೇವಿಂಗ್ ಹಾಗೂ ಕೇಶ ಮುಂಡನ ಮಾಡಿ ಸ್ನಾನ ಮಾಡಿಸಿದರು. ವಯೋವೃದ್ಧರೊಂದಿಗೆ ಮಾತನಾಡಿ ಅವರ ಕಷ್ಟಗಳನ್ನು ಆಲಿಸಿದರಲ್ಲದೆ ನಿಮ್ಮೊಂದಿಗೆ ನಾವಿದ್ದೇವೆ, ಧೈರ್ಯವಾಗಿರಿ ಎಂದು ಆತ್ಮವಿಶ್ವಾಸ ತುಂಬಿದರು.
ವೃದ್ಧಾಶ್ರಮದ ವ್ಯವಸ್ಥಾಪಕ ಜೈಹಿಂದ್ ನಾಗಣ್ಣ, ಸಮಾಜ ಸೇವಕರಾದ ಅರಕಲಗೂಡು ಡಾ.ಶ್ರೀನಿವಾಸ್, ಹಿರಿಯ ಆರೋಗ್ಯ ಪರಿವೀಕ್ಷಕ ಶೀಳನೆರೆ ಸತೀಶ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ಹಾಗೂ ನರ್ಸ್ ಗಳು ಉಪಸ್ಥಿತರಿದ್ದು ಆಶ್ರಮವಾಸಿಗಳ ಆರೋಗ್ಯ ತಪಾಸಣೆ ನಡೆಸಿ ಆರೋಗ್ಯ ಸಲಹೆ ಹಾಗೂ ಮಾರ್ಗದರ್ಶನ ನೀಡಿದರು.