ಪಾಂಡವಪುರ ಪಿಎಲ್‌ಡಿ ಬ್ಯಾಂಕ್ ಆಡಳಿತ ಜೆಡಿಎಸ್ ತೆಕ್ಕೆಗೆ: 8 ಬೆಂಬಲಿತರು ಆಯ್ಕೆ

| Published : Mar 29 2025, 12:31 AM IST

ಪಾಂಡವಪುರ ಪಿಎಲ್‌ಡಿ ಬ್ಯಾಂಕ್ ಆಡಳಿತ ಜೆಡಿಎಸ್ ತೆಕ್ಕೆಗೆ: 8 ಬೆಂಬಲಿತರು ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಪಾಂಡವಪುರ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಎಲ್‌ಡಿ) ಬ್ಯಾಂಕ್‌ನ 14 ನಿರ್ದೇಶಕ ಸ್ಥಾನಗಳ ಚುನಾವಣೆಯಲ್ಲಿ ಜೆಡಿಎಸ್ 8 ಹಾಗೂ ರೈತಸಂಘ-ಕಾಂಗ್ರೆಸ್ ಬೆಂಬಲಿತ 6 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಎಲ್‌ಡಿ) ಬ್ಯಾಂಕ್‌ನ 14 ನಿರ್ದೇಶಕ ಸ್ಥಾನಗಳ ಚುನಾವಣೆಯಲ್ಲಿ ಜೆಡಿಎಸ್ 8 ಹಾಗೂ ರೈತಸಂಘ-ಕಾಂಗ್ರೆಸ್ ಬೆಂಬಲಿತ 6 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಕಳೆದ ಒಂದೂವರೆ ದಶಕಗಳಿಂದಲೂ ಜೆಡಿಎಸ್ ತೆಕ್ಕೆಯಲ್ಲಿದ್ದು ಪಿಎಲ್‌ಡಿ ಬ್ಯಾಂಕ್‌ ಅಧಿಕಾರವನ್ನು ಈ ಬಾರಿಯೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಬಹುಮತ ಸಾಧಿಸಿ ಮತ್ತೊಮ್ಮೆ ಅಧಿಕಾರವನ್ನು ಜೆಡಿಎಸ್ ತೆಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಪಿಎಲ್‌ಡಿ ಬ್ಯಾಂಕ್‌ನ 13 ಸಾಲಗಾರ ಕ್ಷೇತ್ರ ಹಾಗೂ 1 ಸಾಲಗಾರರಲ್ಲದ ಒಟ್ಟು 14 ಸ್ಥಾನಗಳ ಪೈಕಿ 8 ಸ್ಥಾನಗಳಲ್ಲಿ ಜೆಡಿಎಸ್ ಬೆಂಬಲಿತರು ಗೆಲುವು ಸಾಧಿಸಿದ್ದಾರೆ. ರೈತಸಂಘ-ಕಾಂಗ್ರೆಸ್ ಬೆಂಬಲಿತರು 6 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದಲ್ಲಿ ಎಂ.ಸಿ.ಯಶವಂತ್ ಕುಮಾರ್(463) ಸಾಲಗಾರರ ಮಾಣಿಕ್ಯನಹಳ್ಳಿ ಕ್ಷೇತ್ರ ನಾಗಶೆಟ್ಟಿ-144, ಸುಂಕಾತೊಣ್ಣೂರು ಕ್ಷೇತ್ರ ಶಿವಣ್ಣ-45, ಚಿಕ್ಕಾಡೆ ಕ್ಷೇತ್ರ ಎನ್.ಮುರುಳಿ-85, ಹಿರೇಮರಳಿ ಕ್ಷೇತ್ರ ಚಲುವೇಗೌಡ(ಬಕೋಡಿ)-116, ಹರವು ಕ್ಷೇತ್ರ ಸುನಂದ-52, ಬನ್ನಂಗಾಡಿ ಕ್ಷೇತ್ರ ನಂಜೇಗೌಡ ಜಿ.ಡಿ(ವಾಸು)-62, ನಾರಾಯಣಪುರ ಕ್ಷೇತ್ರ ಕೆ.ಕುಮಾರ್-181 ಜೆಡಿಎಸ್ ಬೆಂಬಲಿತರು ಆಯ್ಕೆಯಾಗಿದ್ದಾರೆ.

ಜಕ್ಕನಹಳ್ಳಿ ಕ್ಷೇತ್ರ ಕೆ.ಆರ್.ಸುರೇಶ್-117, ಹಳೇಬೀಡು ಕ್ಷೇತ್ರ ಎಚ್.ಎನ್.ದಯಾನಂದ-91, ಮಹದೇಶ್ವರಪುರ ಕ್ಷೇತ್ರ ಎಸ್.ಯೋಗಲಕ್ಷ್ಮಿ-59, ಪಾಂಡವಪುರ ಕ್ಷೇತ್ರ ಎಚ್.ಎಂ.ಆಶಾಲತಾ-116, ಕೆ.ಬೆಟ್ಟಹಳ್ಳಿ ಕ್ಷೇತ್ರ ಬಿ.ನರೇಂದ್ರಬಾಬು 105, ಚಿನಕುರಳಿ ಕ್ಷೇತ್ರ ಸಿ.ಎಂ.ಚಂದ್ರಶೇಖರ್-112 ರೈತಸಂಘ - ಕಾಂಗ್ರೆಸ್ ಬೆಂಬಲಿತರು ಗೆಲುವು ಸಾಧಿಸಿದ್ದಾರೆ.

ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಬಹುಮತ ಪಡೆದುಕೊಳ್ಳುತ್ತಿದ್ದಂತೆಯೇ ಜೆಡಿಎಸ್ ಬೆಂಬಲಿತರು ಜಯಘೋಷಣೆ ಮೊಳಗಿಸಿದರು. ಆಯ್ಕೆಯಾದಂ ಎಲ್ಲಾ ಅಭ್ಯರ್ಥಿಗಳನ್ನು ಅಭಿನಂದಿಸಲಾಯಿತು. ಕಾಂಗ್ರೆಸ್-ರೈತಸಂಘ ಬೆಂಬಲಿಗರು ಅಭ್ಯರ್ಥಿಗಳನ್ನು ಅಭಿನಂದಿಸಿದರು.

ನೂತನ ನಿರ್ದೇಶಕ ಎಂ.ಸಿ.ಯಶವಂತ್‌ಕುಮಾರ್ ಮಾತನಾಡಿ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಅಭಿವೃದ್ದಿ ಕಾರ್‍ಯ, ಜನಪರ ಆಡಳಿತ ಮೆಚ್ಚಿ ಷೇರುದಾರರು ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ 8 ಮಂದಿಯನ್ನು ಆಯ್ಕೆ ಮಾಡಿ ಮತ್ತೊಮ್ಮೆ ಅಧಿಕಾರವನ್ನು ಜೆಡಿಎಸ್ ತೆಕ್ಕೆಗೆ ನೀಡಿದ್ದಾರೆ ಎಂದರು.

ಟಿಎಪಿಸಿಎಂಎಸ್ ನಿರ್ದೇಶಕ ರಾಮಕೃಷ್ಣೇಗೌಡ ಮಾತನಾಡಿ, ಚುನಾವಣೆಯಲ್ಲಿ ಷೇರುದಾರರು ಸಿ.ಎಸ್.ಪುಟ್ಟರಾಜು ಅವರ ಕೈ ಬಲಪಡಿಸುವ ಕೆಲಸ ಮಾಡಿದ್ದಾರೆ. ಸತತ ಮೂರನೇ ಬಾರಿಗೆ ಜೆಡಿಎಸ್ ನವರು ಅಧಿಕಾರವನ್ನು ಹಿಡಿಯವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಕಳೆದ ಫೆಬ್ರವರಿ 8 ರಂದು ಪಿಎಲ್‌ಡಿ ಬ್ಯಾಂಕ್‌ನ 14 ಸ್ಥಾನಗಳಿಗೆ ಚುನಾವಣೆ ನಡೆದಿತ್ತು, ಅನರ್ಹ ಮತದಾರರಿಗೆ ಕೋರ್ಟ್ ಮತದಾನದ ಹಕ್ಕು ನೀಡಿದ್ದರಿಂದ ಅನರ್ಹ ಮತದಾರರ ಮತ ಎಣಿಕೆ ಮಾಡಬೇಕೋ? ಬ್ಯಾಡವೋ? ಎನ್ನುವ ವಿಚಾರವಾಗಿ ಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ ಫಲಿತಾಂಶ ತಡವಾಗಿತ್ತು. ಕೋರ್ಟ್ ಅನರ್ಹ ಮತದಾರರ ಮತಗಳನ್ನು ಎಣಿಕೆ ಮಾಡುವಂತೆ ಆದೇಶಿಸಿದ ಬಳಿಕ ಮಾ.28ರಂದು ಶುಕ್ರವಾರ ಚುನಾವಣಾಧಿಕಾರಿ ತಾಪಂ ಇಓ ಲೋಕೇಶ್‌ಮೂರ್ತಿ ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಮತ ಎಣಿಕೆ ಕಾರ್‍ಯ ನಡೆಸಿದರು.