ಮನಸೂರೆಗೊಂಡ ಪಂಡಿತ್ತ್‌ ಅನಂತ ಕುಲಕರ್ಣಿ ದಾಸವಾಣಿ

| Published : Oct 29 2025, 11:15 PM IST

ಸಾರಾಂಶ

ಶ್ರೀಶಾ ಸೌಹಾರ್ದ ಕೋಆಪರೇಟಿವ್ ಸೊಸೈಟಿಯ ಪ್ರಾಯೋಜಕತ್ವದಲ್ಲಿ ದಾಸಸಾಹಿತ್ಯ ಸೇವಾ ಪ್ರತಿಷ್ಠಾನವು ನಗರದ ರಾಮಕೃಷ್ಣ ಆಶ್ರಮದ ಸಭಾಂಗಣದಲ್ಲಿ ಪಂಡಿತ್ ಅನಂತ ಕುಲಕರ್ಣಿ ಅವರ ‘ದಾಸವಾಣಿ’ ಕಾರ್ಯಕ್ರಮ ಆಯೋಜಿಸಿತ್ತು.

ಮಂಗಳೂರು: ಶ್ರೀಶಾ ಸೌಹಾರ್ದ ಕೋಆಪರೇಟಿವ್ ಸೊಸೈಟಿಯ ಪ್ರಾಯೋಜಕತ್ವದಲ್ಲಿ ದಾಸಸಾಹಿತ್ಯ ಸೇವಾ ಪ್ರತಿಷ್ಠಾನವು ನಗರದ ರಾಮಕೃಷ್ಣ ಆಶ್ರಮದ ಸಭಾಂಗಣದಲ್ಲಿ ಆಯೋಜಿಸಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಾಯಕ ಪಂಡಿತ್ ಅನಂತ ಕುಲಕರ್ಣಿ ಅವರ ‘ದಾಸವಾಣಿ’ (ಹರಿದಾಸರ ಕೃತಿ ಕೀರ್ತನೆಗಳ ಗಾಯನ) ಕಾರ್ಯಕ್ರಮ ಶ್ರೋತೃಗಳ ಮನಸೂರೆಗೊಂಡಿತು.

ಪುರಂದರದಾಸರು, ಕನಕದಾಸರು, ವಿಜಯದಾಸರು, ಪ್ರಸನ್ನ ವೆಂಕಟದಾದರು ಮುಂತಾದ ಹರಿದಾಸರ ಕೃತಿಗಳನ್ನು ಸುಶ್ರಾವ್ಯವಾಗಿ ಹಾಡಿ, ಅವುಗಳ ರಚನೆಯ ಹಿನ್ನೆಲೆ ಹಾಗೂ ಅರ್ಥವನ್ನು ನೀಡಿದ್ದು ವಿಶೇಷವಾಗಿತ್ತು.

ದಾಸ ಸಾಹಿತ್ಯ ಸೇವಾ ಪ್ರತಿಷ್ಠಾನ ಹಾಗೂ ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ.ಎಸ್. ಗುರುರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ದಾಸಸಾಹಿತ್ಯ ನಮ್ಮೆಲ್ಲರ ಬಹು ದೊಡ್ಡ ಆಸ್ತಿ. ಭಕ್ತಿ ಮಾರ್ಗದ ಮೂಲಕ ಮೋಕ್ಷ ಪ್ರಾಪ್ತಿಯ ಜತೆಗೆ ಸಮಾಜದ ಅಂಕುಡೊಂಕುಗಳನ್ನ ತಿದ್ದಿ ತೀಡುವ ದಾಸ ಸಾಹಿತ್ಯದ ತಿರುಳನ್ನು ಮನೆ - ಮನಗಳಿಗೆ ತಲುಪಿಸುವ ಸದುದ್ದೇಶದಿಂದ ದಾಸಸಾಹಿತ್ಯ ಸೇವಾ ಪ್ರತಿಷ್ಠಾನ ಹಾಗೂ ಇಂತಹ ಕಾರ್ಯಗಳೂ ಒಳಗೊಂಡಂತೆ ಅನೇಕ ಸೇವಾ ಕಾರ್ಯಗಳ ಕಾರ್ಯರೂಪಕ್ಕೆ ತರಲು ನೆರವಾಗಲೆಂದೇ ಶ್ರೀಶಾ ಸೌಹಾರ್ದ ಸೊಸೈಟಿಯನ್ನು ಆರಂಭಿಸಲಾಯಿತು. ಕಳೆದ ಆರು ವರ್ಷಗಳಿಂದ ಇವೆರೆಡೂ ಸಂಸ್ಥೆಗಳು ನೂರಾರು ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿವೆ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ, ಭಕ್ತಿ ಮಾರ್ಗ ಮನುಷ್ಯನಿಗೆ ಸನ್ನಡತೆ, ಸಚ್ಚಾರಿತ್ರ್ಯವನ್ನು ಕಲಿಸುವುದು. ಇದು ಮೋಕ್ಷ ಪ್ರಾಪ್ತಿಯ ಸರಳ ಮಾರ್ಗ ಎಂದರು.ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ಇದರ ನಿರ್ದೇಶಕಿ ಭಾರತಿ ಜಿ. ಭಟ್ ಇದ್ದರು. ಶ್ರೀಶಾ ಸೌಹಾರ್ದ ಸೊಸೈಟಿ ಹಾಗೂ ದಾಸಸಾಹಿತ್ಯ ಸೇವಾ ಪ್ರತಿಷ್ಠಾನ ವತಿಯಿಂದ ಗಾಯಕ ಪಂಡಿತ್ ಅನಂತ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು. ಮಾಜಿ ಎಂಎಲ್ಸಿ ಕ್ಯಾ. ಗಣೇಶ್ ಕಾರ್ಣಿಕ್ ಇದ್ದರು.ಸಂಜನಾ ಭಟ್ ನಿರೂಪಿಸಿದರು. ರಂಜನಾ ಹೆಗಡೆ ಪ್ರಾರ್ಥಿಸಿದರು. ಶ್ರೀಶಾ ಸೊಸೈಟಿಯ ನಿರ್ದೇಶಕ ಪ್ರಸನ್ನ ಕುಮಾರ್ ವಂದಿಸಿದರು.