ಪಂಡಿತ ರಾವಸಾಹೇಬ ಮೋರೆ ಇನ್ನಿಲ್ಲ

| Published : Sep 29 2025, 03:02 AM IST

ಸಾರಾಂಶ

ಖ್ಯಾತ ಸಂಗೀತಗಾರ, ತಬಲಾ ಮಾಂತ್ರಿಕ ಪಂ.ರಾವಸಾಹೇಬ ಎಚ್.ಮೋರೆ (84) ಭಾನುವಾರ ಸಂಜೆ ವಯೋಸಹಜ ಕಾಯಿಲೆಯಿಂದ ಸ್ವಗೃಹದಲ್ಲಿ ಕೊನೆಯುಸಿರೆಳೆದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಖ್ಯಾತ ಸಂಗೀತಗಾರ, ತಬಲಾ ಮಾಂತ್ರಿಕ ಪಂ.ರಾವಸಾಹೇಬ ಎಚ್.ಮೋರೆ (84) ಭಾನುವಾರ ಸಂಜೆ ವಯೋಸಹಜ ಕಾಯಿಲೆಯಿಂದ ಸ್ವಗೃಹದಲ್ಲಿ ಕೊನೆಯುಸಿರೆಳೆದರು.

1941ರ ಜೂ.10ರಂದು ಜನಿಸಿದ ರಾವಸಾಹೇಬ ಮದುವೆಯಾಗದೇ ಸಂಗೀತಕ್ಕೆ ಜೀವನ ಮುಡುಪಾಗಿಟ್ಟ. ತಂದೆ ಹುಚ್ಚಪ್ಪ ಸರ್ಕಾರಿ ನೌಕರರಾಗಿದ್ದರೂ ಹಾರ್ಮೋನಿಯಂ ವಾದಕರಾಗಿದ್ದರು. ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಭದ್ರತಾ ಸಿಬ್ಬಂದಿಯೂ ಆಗಿದ್ದರು. ತಂದೆಯ ಕಲೆ ಬಳುವಳಿಯಾಗಿ ಚಿಕ್ಕ ವಯಸ್ಸಿನಲ್ಲಿಯೇ ರಾವಸಾಬೇಬ ಅವರಿಗೆ ಒಲೆದಿತ್ತು. ಸಂಗೀತ ಕಲೆಯಲ್ಲಿ ಮುಂದುವರೆಯಬೇಕು ಎನ್ನುವ ಆಸೆ ಮನೆ ಮಾಡಿ 6ನೇ ತರಗತಿಗೆ ಶಿಕ್ಷಣ ಮೊಟಕುಗೊಳಿಸಿದರು.

ಬಳಿಕ ಅಮೀನಗಢ ತೋಟಪ್ಪ ಅವರಿಂದ ಹಾಮೋನಿಯಂ ಅಭ್ಯಾಸ ಮಾಡಿದರು. ಮನಸ್ಸು ತಬಲಾ ವಾದನದತ್ತ ಸಾಗಿತ್ತು. ಹೀಗಾಗಿ ಗೋವಿಂದದಾಸ ಕಟ್ಟಿ ಅವರಿಂದ ತಬಲಾ ಕಲಿತರು. ಕೆ.ಎಸ್. ಹಡಪರ ಗುರುಗಳು ಮೋರೆ ಅವರಿಗೆ ತಬಲಾದಲ್ಲಿ ಜ್ಞಾನದ ಸಂಪತ್ತು ತುಂಬಿದರು. ಬನಾರಸಾ ಘರನಾ ವಾದನ ಉತ್ತರ ಕರ್ನಾಟಕದಲ್ಲಿ ಹೆಚ್ಚು ಪ್ರಚುರಗೊಳ್ಳಲು ಕಾರಣರಾದವರು ರಾವಸಾಹೇಬ ಮೋರೆ. ನಾಡಿನ ಖ್ಯಾತ ಸಂಗೀತ ಕಲಾವಿದರಾದ ದತ್ತ ವೀಣಾ ನುಡಿಸುತ್ತಿದ್ದ ಪರ್ವತಿಕರ ಮಹಾರಾಜ ಸೇರಿದಂತೆ ನಾಡಿನ ಅನೇಕ ಕಲಾವಿದರಿಗೆ ತಬಲಾ ಸಾಥ್ ನೀಡಿದ್ದಾರೆ.

1960ರಲ್ಲಿ ಕೆ.ಎಸ್. ಹಡಪದ ಅವರು ಬಾಗಲಕೋಟೆ ನಗರದಲ್ಲಿ ಸ್ಥಾಪಿಸಿದ್ದ ನಟರಾಜ ಸಂಗೀತ ವಿದ್ಯಾಲಯದ ಜವಾಬ್ದಾರಿಯನ್ನು 6 ದಶಕಗಳ ಕಾಲ ವಿದ್ಯಾಲಯ ಮುನ್ನಡೆಸಿದರು. 1979ರಲ್ಲಿ ಅಖಿತ ಭಾರತೀಯ ಗಂಧರ್ವ ಮಹಾವಿದ್ಯಾಲಯ ಪರೀಕ್ಷಾ ಕೇಂದ್ರ ನಟರಾಜ ಸಂಗೀತ ವಿದ್ಯಾಲಯ ಆರಂಭಿಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದರು. ರಾವಸಾಬೇಹ ಮೋರೆ ಅವರು ಪ್ರಶಸ್ತಿ ಹಾಗೂ ಸತ್ಕಾರಗಳ ಹಿಂದೆ ಹೋಗಲಿಲ್ಲ.2006-07ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ. ಗಣ್ಯರ ಸಂತಾಪ:

ರಾವಸಾಬೇಬ ಮೋರೆ ಅವರ ನಿಧನಕ್ಕೆ ಇವರ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ, ವಿ.ಪ ಸದಸ್ಯ ಪಿ.ಎಚ್.ಪೂಜಾರ, ಶಾಸಕರಾದ ಎಚ್.ವೈ.ಮೇಟಿ, ಜೆ.ಟಿ.ಪಾಟೀಲ, ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ, ಮಾಜಿ ಸಚಿವ ಎಸ್.ಆರ್.ಪಾಟೀಲ ಸೇರಿದಂತೆ ಸಂಗೀತ ಅಭಿಮಾನಗಳು ಸಂತಾಪ ವ್ಯಕ್ತಪಡಿಸಿದ್ದಾರೆ.