ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಪಪಂ ಕ್ರಮ

| Published : Nov 23 2025, 02:45 AM IST

ಸಾರಾಂಶ

ಮಕ್ಕಳು ಮನೆಯಿಂದ ಶಾಲೆಗೆ ಹೋಗುವಾಗ ಬೀದಿ ನಾಯಿಗಳ ತೀವ್ರ ಭಯದ ವಾತಾವರಣ ಸೃಷ್ಟಿಯಾಗಿತ್ತು.

ಯಲಬುರ್ಗಾ: ಬೀದಿನಾಯಿಗಳ ಹಾವಳಿ ನಿಯಂತ್ರಿಸಲು ಪಪಂ ಕಟ್ಟುನಿಟ್ಟಿನ ಕ್ರಮ ವಹಿಸಿದ್ದು, ಬೀದಿನಾಯಿಗಳ ಕಾಟಕ್ಕೆ ಕಡಿವಾಣ ಬೀಳಲಿದೆ.

ಪಟ್ಟಣದ ನಿವಾಸಿಗಳು ಬೀದಿ ನಾಯಿಗಳ ಕಾಟದಿಂದ ರೋಸಿ ಹೋಗಿದ್ದರು. ಶಾಲಾ, ಕಾಲೇಜು ವಿದ್ಯಾರ್ಥಿಗಳು, ವಯೋವೃದ್ಧರು, ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ನಡೆದಾಡಲು ಬೀದಿ ನಾಯಿಗಳ ಕಿರಕಿರಿ ಅನುಭವಿಸುವಂತಾಗಿತ್ತು.

ಮಕ್ಕಳು ಮನೆಯಿಂದ ಶಾಲೆಗೆ ಹೋಗುವಾಗ ಬೀದಿ ನಾಯಿಗಳ ತೀವ್ರ ಭಯದ ವಾತಾವರಣ ಸೃಷ್ಟಿಯಾಗಿತ್ತು. ಈಗ ಸುಪ್ರೀಂ ಕೋರ್ಟ್ ಆದೇಶದಂತೆ ಬೀದಿ ನಾಯಿಗಳನ್ನು ಸೆರೆ ಹಿಡಿದು ರೇಬಿಸ್ ಲಸಿಕೆ ನೀಡುವ ಮೂಲಕ ನಿಯಂತ್ರಿಸಲು ಪಪಂ ಮುಂದಾಗಿದೆ.

ನಾಯಿಗಳಿಗೆ ಪ್ರತ್ಯೇಕ ಜಾಗ: ಬೀದಿ ನಾಯಿಗಳನ್ನು ಸೆರೆ ಹಿಡಿದು ರೇಬಿಸ್ ಲಸಿಕೆ ನೀಡುವ ಮೂಲಕ ಅವುಗಳನ್ನು ಒಂದೆಡೆ ಸೇರಿಸಲು ಆಶ್ರಯ ತಾಣವನ್ನಾಗಿ ನಿರ್ಮಿಸಲು ಸ್ಥಳೀಯ ಪಶು ಚಿಕಿತ್ಸಾಲಯ ಕಚೇರಿ ಹಿಂಭಾಗದಲ್ಲಿ ಪ್ರತ್ಯೇಕ ಜಾಗ ಗುರುತಿಸಲಾಗಿದೆ. ನಾಯಿಗಳ ಸಮೀಕ್ಷೆ ಕಾರ್ಯ ನಡೆಸಲು ನಾನಾ ಇಲಾಖೆ ಅಧಿಕಾರಿಗಳನ್ನು ಬಳಸಿಕೊಂಡು ತಂಡ ರಚಿಸಲಾಗಿದೆ.

೨೦೦ ಬೀದಿ ನಾಯಿಗಳಿಗೆ ಲಸಿಕೆ:ಈ ಹಿಂದೆ ಪಟ್ಟಣದಲ್ಲಿ ೨೦೦ಕ್ಕೂ ಅಧಿಕ ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ ನೀಡಲಾಗಿದೆ. ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ನೀಡಲು ಪಪಂ ಸಹಯೋಗದಲ್ಲಿ ಪಶು ವೈದ್ಯರಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು.

೩೨೦ ಬೀದಿ ನಾಯಿಗಳು: ಪಟ್ಟಣವು ೧೮ ಸಾವಿರ ಜನಸಂಖ್ಯೆ ಹೊಂದಿದೆ. ೧೮ ಸಾವಿರ ಜನಸಂಖ್ಯೆಗೆ ಅನುಗುಣವಾಗಿ ಶೇ. ೨ರಷ್ಟು ನಾಯಿಗಳ ಪ್ರಮಾಣ ಇರಬೇಕು ಎನ್ನುವುದಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಸದ್ಯ ಬೀದಿ ನಾಯಿಗಳ ಸಮೀಕ್ಷಾ ಕಾರ್ಯ ಪ್ರಗತಿಯಲ್ಲಿದೆ. ಪಟ್ಟಣದಲ್ಲಿ ಒಟ್ಟು ೩೬೦ ಬೀದಿ ನಾಯಿಗಳು ಇರುವುದು ಖಚಿತವಾಗಿದೆ.

ಹಾವಳಿ ತಪ್ಪಿಸಲು ಕಾಂಪೌಂಡ್ ನಿರ್ಮಿಸಿ: ಬೀದಿ ನಾಯಿಗಳು ಸಾರ್ವಜನಿಕ ಇಲಾಖೆ ಕಚೇರಿಗಳ ಒಳಗಡೆ ಪ್ರವೇಶಿಸದಂತೆ ಸೂಕ್ತ ರೀತಿಯಲ್ಲಿ ಕಾಂಪೌಂಡ್ ನಿರ್ಮಿಸಬೇಕು. ಈ ಕುರಿತು ಎಲ್ಲ ಇಲಾಖೆಗಳಿಗೆ ಪತ್ರ ಬರೆಯಲಾಗಿದೆ. ಜತೆಗೆ ಇಲಾಖೆಗೆ ಒಬ್ಬರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಿಕೊಳ್ಳಲು ಸೂಚಿಸಲಾಗಿದೆ. ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಅಧಿಕಾರಿಗಳ ನೇತೃತ್ವದಲ್ಲಿ ವಿವಿಧ ಹಂತದ ಸಭೆ ನಡೆಸಲಾಗಿದೆ.

ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಸುಪ್ರೀಂ ಕೋರ್ಟ್ ಹೊರಡಿಸಿದ ಆದೇಶ ಯತಾವತ್ತಾಗಿ ಪಾಲಿಸಲಾಗುತ್ತಿದೆ. ಮಾಂಸ ಮಾರಾಟ ಮಾಡುವ ಅಂಗಡಿಕಾರರ ಸಭೆ ನಡೆಸಿ ತ್ಯಾಜ್ಯ ಎಲ್ಲೆಂದರಲ್ಲಿ ಎಸೆಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸಾರ್ವಜನಿಕರಿಗೆ ಅಪಾಯಕಾರಿ ನಾಯಿಗಳು ಕಂಡು ಬಂದರೆ ಪಪಂ ಗಮನಕ್ಕೆ ತರಬೇಕು ಎಂದು ಯಲಬುರ್ಗಾ

ಪಪಂ ಮುಖ್ಯಾಧಿಕಾರಿ ನಾಗೇಶ ತಿಳಿಸಿದ್ದಾರೆ.