ಸಾರಾಂಶ
ಶಿವಕುಮಾರ ಕುಷ್ಟಗಿ ಗದಗ
ಗದಗ- ಬೆಟಗೇರಿ ಅವಳಿ ನಗರಕ್ಕೆ ಬೇಸಿಗೆಯಲ್ಲಿ ಕುಡಿವ ನೀರು ಪೂರೈಕೆ ಮಾಡುವ ಕೆರೆ ನಿರ್ಮಾಣ ಯೋಜನೆ ನನೆಗುದಿಗೆ ಬಿದ್ದು 8 ವರ್ಷಗಳೇ ಕಳೆದಿದೆ. ಸರ್ಕಾರದ ಮಾರ್ಗಸೂಚಿಯಡಿಯಲ್ಲಿ ಕೆರೆ ನಿರ್ಮಾಣ ಕಾಮಗಾರಿ ಪ್ರಗತಿಯಾಗಿದ್ದರೆ. ಕೆರೆ ನಿರ್ಮಾಣವಾಗಿ 4 ವರ್ಷವೇ ಪೂರ್ಣಗೊಂಡು ಅಲ್ಲಿಂದಲೇ ನೀರು ಪೂರೈಕೆ ಆಗಬೇಕಿತ್ತು.ಈ ಕೆರೆ ನಿರ್ಮಾಣಕ್ಕಾಗಿ ಸರ್ಕಾರ 2017ರಲ್ಲಿಯೇ ₹ 10 ಕೋಟಿ ಮಂಜೂರಾತಿ ನೀಡಿ ಕೆಯುಐಡಿಎಫ್ಸಿ ಕಾರ್ಯಾದೇಶ ನೀಡಲಾಗಿದೆ. ನಂತರ ಕೆಯುಐಡಿಎಫ್ಸಿ ಹೆಚ್ಚುವರಿಯಾಗಿ ₹13.66 ಕೋಟಿ ಭೌತಿಕ ಕಾಮಗಾರಿ, ₹ 6.55 ಕೋಟಿ ಭೂ ಸ್ವಾಧೀನ ಪರಿಹಾರಕ್ಕಾಗಿ ಎಂದು ಸರ್ಕಾರಕ್ಕೆ ಮನವಿ ಮಾಡಿತ್ತು. ಇದಕ್ಕೂ ಒಪ್ಪಿಗೆ ಸಿಕ್ಕಿತ್ತು, ಇನ್ನುಳಿದ ₹ 3.55 ಕೋಟಿಯನ್ನು ನಗರಸಭೆ ಭರಿಸಬೇಕಿತ್ತು. ಎರಡೂ ಇಲಾಖೆಗಳು ಸೇರಿ ಸರ್ಕಾರದೊಂದಿಗೆ ಸಮನ್ವಯತೆ ಇಲ್ಲದೇ ನನೆಗುದಿಗೆ ಬಿದ್ದಿದೆ.
ಸರ್ಕಾರದ ಬಳಿಯೇ ಸ್ಪಷ್ಟತೆ ಇಲ್ಲ: ಅವಳಿ ನಗರದ ಕುಡಿವ ನೀರಿನ ಬವಣೆ ನೀಗಿಸುವ ಮಹತ್ವದ ಯೋಜನೆ ಉತ್ತಮವಾಗಿದೆ. ಇದಕ್ಕೆ ಯಾವುದೇ ಪೂರ್ವ ಸಿದ್ಧತೆ ಇಲ್ಲದೇ ಹಣಕಾಸಿನ ಹೊಂದಾಣಿಕೆ ಇಲ್ಲದೇ ಯೋಜನೆ ಪ್ರಾರಂಭಿಸಲಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ. 2019 ರಲ್ಲಿಯೇ ಯೋಜನೆ ಪ್ರಾರಂಭವಾಗಿದ್ದರೂ ಕೋವಿಡ್ ಹಿನ್ನೆಲೆ (2020) ಒಂದು ವರ್ಷ ಪೂರ್ಣ ಪ್ರಮಾಣದಲ್ಲಿ ಹಿನ್ನೆಡೆಯಾಗಿದೆ. 23-6-2021 ರಂದು ಗದಗ ಬೆಟಗೇರಿ ನಗರಸಭೆಯ ಅಧಿಕಾರಿಗಳು ತಮ್ಮ ಪಾಲಿನ ₹3.55 ಕೋಟಿ ಭರಿಸುವುದಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದರೂ ಸರ್ಕಾರಕ್ಕೆ ಈ ಯೋಜನೆಯ ಬಗ್ಗೆ ಯಾವುದೇ ಸ್ಪಷ್ಟತೆ ಬಾರದ ಹಿನ್ನೆಲೆಯಲ್ಲಿ 2021 ರಿಂದ 2024 ರವರೆಗೂ ಕೇವಲ ಪತ್ರ ವ್ಯವಹಾರದಲ್ಲಿಯೇ ಕಾಲಹರಣ ಮಾಡಿದ್ದು ಇದುವರೆಗೂ ಸರ್ಕಾರ, ಕೆಯುಐಡಿಎಫ್ಸಿ, ಹಣಕಾಸು ಇಲಾಖೆ, ಗದಗ ನಗರಸಭೆಯ ನಡುವೆ 35 ಕ್ಕೂ ಹೆಚ್ಚು ಬಾರಿ ಪತ್ರ ವ್ಯವಹಾರ ನಡೆದಿರುವುದೇ ಸಾಕ್ಷಿಯಾಗಿದೆ.ಯಾವ ಯೋಜನೆಯಡಿ ಕಾಮಗಾರಿ
ಈ ಮಹತ್ವದ ಯೋಜನೆ ಎಷ್ಟೊಂದು ಗೊಂದಲದ ಗೂಡಾಗಿದೆ ಎಂದರೆ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು 16-4-2021 ರಂದು ವ್ಯವಸ್ಥಾಪಕರು ಕೆಯುಐಡಿಎಫ್ಸಿ ಬೆಂಗಳೂರು ಇವರಿಗೆ ಪತ್ರ ಬರೆದು ಆರ್ಥಿಕ ಇಲಾಖೆಯ ಹಿಂಬರಹ ಸಂಖ್ಯೆ ಎಫ್.ಡಿ. 65, ಇಎಕ್ಸಪಿ 9, 2019 ದಿನಾಂಕ 3-7-2020 ಅಡಿಯಲ್ಲಿ ಗದಗ ಬೆಟಗೇರಿ ಅವಳಿ ನಗರಗಳಿಗೆ ಕುಡಿವ ನೀರಿನ ಉದ್ದೇಶಕ್ಕಾಗಿ ಜಲಸಂಗ್ರಹಗಾರ ನಿರ್ಮಿಸುವ ಕಾಮಗಾರಿ ಆರ್ಥಿಕ ಇಲಾಖೆಯೂ ಭೂ ಸ್ವಾಧೀನ ಪರಿಹಾರವು ಒಳಗೊಂಡಂತೆ ₹ 16.66 ಕೋಟಿಗಳ ವೆಚ್ಚದಲ್ಲಿ ಕೈಗೊಳ್ಳಲು ಅನುಮೋದನೆ ನೀಡಿದೆ, ಆದರೆ ಈ ಪ್ರಸ್ತಾವನೆಯನ್ನು ಸಚಿವ ಸಂಪುಟದ ಅನುಮೋದನೆಗೆ ಸಲ್ಲಿಸಬೇಕಿದೆ. ಅದಕ್ಕಾಗಿ ಈ ಯೋಜನೆಯ ಒಟ್ಟು ವೆಚ್ಚವನ್ನು ಯಾವ ಮೂಲದಿಂದ ಭರಿಸಲಾಗುವುದು ಹಾಗೂ ಯಾವ ಯೋಜನೆಯಡಿಯಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗುವುದು ಎಂದು ಎಂಬುದರ ಬಗ್ಗೆ ಸಂಪೂರ್ಣ ವಿವರಗಳೊಂದಿಗೆ ಮಾಹಿತಿ ನೀಡುವಂತೆ ಪತ್ರ ಬರೆದಿದ್ದನ್ನು ಗಮನಿಸಿದಲ್ಲಿ ಆಶ್ಚರ್ಯಕ್ಕೆ ಕಾರಣವಾಗಿದೆ.ಕುಡಿವ ನೀರಿಗಾಗಿ ಕೆರೆ ನಿರ್ಮಾಣದಂತಹ ಮಹತ್ವದ ಕೆಲಸ ಪ್ರಾರಂಭಿಸುವ ಪೂರ್ವದಲ್ಲಿ ಅಗತ್ಯ ಸಿದ್ಧತೆಗಳಿಲ್ಲದೆ ಮಾಡಿರುವ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಇದು ಉತ್ತಮ ಉದಾಹರಣೆಯಾಗಿದೆ. ಯಾರೋ ಮಾಡಿದ ತಪ್ಪಿಗೆ ಇನ್ನಾರಿಗೋ ಶಿಕ್ಷೆ ಎನ್ನುವ ರೀತಿಯಲ್ಲಿ ತಮ್ಮ ಅಮೂಲ್ಯ ಬೆಲೆಬಾಳುವ ಜಮೀನು ಕಳೆದುಕೊಂಡಿರುವ ರೈತರು ಇತ್ತ ಹೊಲಕ್ಕೂ ಹೋಗಲು ಆಗದೇ ಅತ್ತ ಪರಿಹಾರದ ಹಣವೂ ಸಿಗದೇ ತತ್ತರಿಸಿ ಹೋಗಿದ್ದಾರೆ.
ಯಾರೇ ತಪ್ಪು ಮಾಡಲಿ, ಯಾರೇ ಗೊಂದಲ ಸೃಷ್ಟಿ ಮಾಡಲಿ, ವಾಸ್ತವದಲ್ಲಿ ನಮ್ಮ ಜಮೀನು ಪಡೆದುಕೊಂಡು 8 ವರ್ಷಗಳೇ ಕಳೆದಿದೆ,ಇದುವರೆಗೂ ಒಂದು ಪೈಸಾ ಪರಿಹಾರ ಬಂದಿಲ್ಲ, ಜಿಲ್ಲಾಡಳಿತ, ಸರ್ಕಾರ ಇದೇ ರೀತಿಯಲ್ಲಿ ನಿರ್ಲಕ್ಷ್ಯ ಮಾಡಿದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ಅನಿವಾರ್ಯವಾಗುತ್ತದೆ ಎಂದು 48 ಎಕರೆ ಜಮೀನು ಕಳೆದುಕೊಂಡಿರುವ 10 ಜನ ರೈತರು ತಿಳಿಸಿದ್ದಾರೆ.