ಸಾರಾಂಶ
ಅಕ್ರಂಪಾಷ ತಲಕಾಡು
ಕನ್ನಡಪ್ರಭ ವಾರ್ತೆ ತಲಕಾಡುತಲಕಾಡು ಹೋಬಳಿಯಲ್ಲಿ ದಿನೇ ದಿನೇ ಪ್ರಖರವಾಗುತ್ತಿರುವ ರಣಬಿಸಿಸಲಲಿನ ತಾಪಕ್ಕೆ ಜನ ಹೈರಾಣಾಗಿದ್ದಾರೆ. ಮಳೆಗಾಗಿ ಆಗಸದತ್ತ ಮುಖ ಮಾಡಿರುವ ರೈತರು, ಸುಡು ಬೇಸಿಗೆಯಲ್ಲಿ ಬೆಳೆ ರಕ್ಷಣೆಗೆ ಕೊಳವೆ ಬಾವಿ ಪಂಪ್ ಸಟ್ ಗಳಲ್ಲಿ ಬರುವ ಸಣ್ಣ ಪ್ರಮಾಣದ ನೀರಿನಿಂದ ಬೆಳೆ ಸಂರಕ್ಷಿಸಿಕೊಳ್ಳಲು ಪರದಾಟ ನಡೆಸಿದ್ದಾರೆ.
ಬಿಸಿಲಿನ ತಾಪ ಎಷ್ಟು ಹೆಚ್ಚಾಗಿದೆ ಎಂದರೆ ಬೆಳಗ್ಗೆ 11ರ ನಂತರ ಡಾಂಬರು ರಸ್ತೆಯಲ್ಲಿ ಸಂಚರಿಸುವುದೇ ತ್ರಾಸದಾಯಕವಾಗಿದೆ. ದ್ವಿಚಕ್ರ ವಾಹನಗಳಲ್ಲಿ ಮಧ್ಯಾಹ್ನದ ಉರಿ ಬಿಸಿಲಲ್ಲಿ ಸಂಚರಿಸುವ ಪ್ರಯಾಣಿಕರಿಗೆ ರಸ್ತೆಯ ಬಿಸಿ ವಾಹನ ಪ್ರಯಾಣಿಕರಿಗೆ ಸುಡುವ ಅನುಭವ ನೀಡಿದೆ.ನಿವಾಸಗಳಲ್ಲಿ ಹಗಲು ರಾತ್ರಿ ಫ್ಯಾನ್ ಗಳು ನಿರಂತರವಾಗಿ ಓಡುತ್ತಿದ್ದರು, ತಂಪು ನೀಡಲು ಸಫಲವಾಗಿಲ್ಲ. ಫ್ಯಾನ್ ಗಳ ನಿರಂತರ ಬಳಕೆಯಿಂದ ಗೃಹ ಜ್ಯೋತಿ ಲಿಮಿಟ್ ದಾಟಿ, ದುಬಾರಿ ಕರೆಂಟ್ ಬಿಲ್ ಬರುತ್ತದೆ ಎಂದು ವಿದ್ಯುತ್ ಗ್ರಾಹಕರು ಚಿಂತೆ ವ್ಯಕ್ತಪಡಿಸಿದ್ದಾರೆ.
ಮಧ್ಯಾಹ್ನ ಮನೆಯಿಂದ ಹೊರಗಡೆ ಬರಲು ಹಿಂಜರಿಯುತ್ತಿರುವ ಜನರಿಂದಾಗಿ ರಸ್ತೆಗಳು ಬಿಸಿಲೇರಿದಂತೆ ಬಿಕೋ ಎನ್ನುತ್ತಿವೆ.ಕಾಡಲ್ಲಿ ಮಳೆಯಿಲ್ಲದೆ ಹಸಿರು ಮೇವಿನ ಕೊರತೆಯಿಂದ ಜಾನುವಾರುಗಳಿಗೆ ಹೊಟ್ಟೆ ತುಂಬಿಸಲು ಮನೆ ಒಣ ಮೇವು ಸೇರಿದಂತೆ ಮರಗಳ ಹಸಿರು ಸೊಪ್ಪಿಗೆ ಸಾಕಣೆದಾರರು ಮೊರೆಹೋಗಿದ್ದಾರೆ.
ಚಾವಣಿಗೆ ತೆಂಗಿನ ಗರಿ ಹಾಸಿದ್ದಾರೆವಿಪರೀತ ಧಗೆಯ ಕಾರಣ ತಂಪುಪಾನೀಯ ಎಳೆನೀರು, ಕಲ್ಲಂಗಡಿ, ಹಣ್ಣಿನ ಜ್ಯೂಸ್, ಮಜ್ಜಿಗೆ, ಮೊಸರು ಸೇವನೆಗೆ ಜನ ಮೊರೆ ಹೋಗಿದ್ದಾರೆ. ಶಾಲೆಗಳಿಗೆ ಬೇಸಿಗೆ ರಜೆ ಹಿನ್ನೆಲೆ ಇಲ್ಲಿನ ನದಿಗಿಳಿದು ನೀರಿನ ಆಟ ಆಡುವ ಯುವಕರು ದೇಹ ತಂಪಾಗಿಸಿ ಕೊಳ್ಳಲು ಪ್ರಯತ್ನಿಸಿದ್ದಾರೆ. ಕಲ್ನಾರು ಶೀಟಿನ ಮನೆ ಮೇಲ್ಚಾವಣಿ ಹೊಂದಿರುವ ನಿವಾಸಿಗಳ ಪಾಡಂತೂ ಬೇಸಿಗೆಯಲ್ಲಿ ಹೇಳ ತೀರದಾಗಿದೆ. ಮೇಲ್ಛಾವಣಿ ಮೇಲೆ ತೆಂಗಿನ ಗರಿಗಳ ಹಾಸಿ ಬೆಳಗ್ಗೆ ಸಂಜೆ ಗರಿಗಳಿಗೆ ನೀರು ಸುರಿದು ಮನೆ ತಂಪನ್ನಾಗಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ಹೊಲಗದ್ದೆಗಳಲ್ಲಿ ಕೆಲಸ ಮಾಡುವವರು ಮುಂಜಾನೆ ಬೇಗ ಕೆಲಸ ಪ್ರಾರಂಭಿಸಿ 11ಕ್ಕೆ ಮನೆ ಸೇರಿಕೊಳ್ಳುತ್ತಿದ್ದಾರೆ. ಎಲ್ಲರ ಚಿತ್ತವೂ ಮಳೆರಾಯನ ಮೇಲಿದ್ದು, ಬಾನಂಗಳದಿಂದ ಯಾವಾಗ ಮಳೆ ಸುರಿಯುತ್ತದೆ ಎಂದು ಇಂದು ಮಳೆ ಬರುತ್ತದೆ ನಾಳೆ ಬರುತ್ತದೆ ಆಗಸದಲ್ಲಿ ಮೋಡ ಕಟ್ಟಿದೆಯೇ ಇಲ್ಲವೇ ಎಂದು ನಿತ್ಯ ಆಸೆ ಕಂಗಳಿಂದ ನಿಲಾಕಾಶ ಗಮನಿಸುತ್ತಿದ್ದಾರೆ.-----
ಬಡಮಕ್ಕಳು ಹಸಿವಿನಿಂದ ಬಳಲಬಾರದು ಎಂಬ ಸದುದ್ದೇಶದಿಂದ ಶಾಲೆಗಳಲ್ಲಿ ಬೇಸಿಗೆ ರಜೆ ಇದ್ದರು, ಸರ್ಕಾರ ಮಧ್ಯಾಹ್ನದ ಬಿಸಿ ಯೂಟಕ್ಕೆ ವ್ಯವಸ್ಥೆ ಮಾಡಿದೆ. ಶಾಲಾ ಮಕ್ಕಳು ಇದರ ಪ್ರಯೋಜನ ಪಡೆದು ಕೊಳ್ಳುತ್ತಿದ್ದಾರೆ.- ಮಲ್ಲಿಕಾರ್ಜುನ ಗೌಡ, ಹಿರಿಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇದಿನಿ ಗ್ರಾಮ.