ಮಹದಾಯಿ ಕುಡಿಯುವ ನೀರಿನ ಯೋಜನೆ, ಇದಕ್ಕೆ ಯಾರೂ ವಿರೋಧ ವ್ಯಕ್ತಪಡಿಸಬಾರದು ಎಂದು ರೈತ ಸೇನೆ ಕರ್ನಾಟಕದ ಅಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.

ಹುಬ್ಬಳ್ಳಿ: ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಮಹದಾಯಿ ಯೋಜನೆಯ ವಿರುದ್ಧ ಪರಿಸರವಾದಿಗಳು ಆಕ್ಷೇಪಿಸಿದ್ದಕ್ಕೆ ಪ್ರತಿಕ್ರಿಯೆ ನೀಡಲ್ಲ. ಆದರೆ, ಪರಿಸರವಾದಿಗಳು ಎಷ್ಟು ಮರ ಬೆಳೆಸಿದ್ದಾರೆ ಎಂಬುದನ್ನು ಉತ್ತರಿಸಬೇಕು. ಇದು ಕುಡಿಯುವ ನೀರಿನ ಯೋಜನೆ, ಇದಕ್ಕೆ ವಿರೋಧ ವ್ಯಕ್ತಪಡಿಸಬಾರದು ಎಂದು ರೈತ ಸೇನೆ ಕರ್ನಾಟಕದ ಅಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಹುಬ್ಬಳ್ಳಿ-ಧಾರವಾಡಕ್ಕೆ ಕುಡಿಯುವ ನೀರು ಬರುವವರೆಗೂ ನಾವು ಹೋರಾಟ ಮುಂದುವರಿಸುತ್ತೇವೆ ಎಂದರು.

ಮಹದಾಯಿ, ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಪರಿಸರ ಹಾಗೂ ವನ್ಯಜೀವಿ ಇಲಾಖೆ ಅನುಮತಿ ನೀಡಲು ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಭೂಪೇಂದ್ರ ಯಾದವ, ಪರಿಸರ, ವನ್ಯಜೀವಿ ಇಲಾಖೆ ಕಾರ್ಯದರ್ಶಿಯನ್ನು ಎದುರಾಳಿಗಳನ್ನಾಗಿ ಮಾಡಿ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ ಎಂದು ಇದೇ ವೇಳೆ ತಿಳಿಸಿದರು.

ಇದೇ ಹೋರಾಟದ ಮುಂದುವರಿದ ಭಾಗವಾಗಿ ರಾಷ್ಟ್ರಪತಿ ಭವನದ ಮುಂದೆ 500 ರೈತರ ಪರೇಡ್‌, ಪ್ರಧಾನಿಗೆ ನಿರಂತರ ಪತ್ರ ಚಳವಳಿ, ದಯಾಮರಣ ಅರ್ಜಿ ಹಾಗೂ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ ಎಂದರು.

ಕೇಂದ್ರ ಪರಿಸರ, ವನ್ಯಜೀವಿ ಇಲಾಖೆಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಅರ್ಜಿ ಬಂದರೂ, ಅದನ್ನು ತಿರಸ್ಕರಿಸುತ್ತಿಲ್ಲ, ಅನುಮತಿಯನ್ನೂ ನೀಡುತ್ತಿಲ್ಲ. ಸುಪ್ರೀಂಕೋರ್ಟ್‌ನಲ್ಲಿ ಇರುವುದರಿಂದ ಈಗಲೇ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ತೆಗೆದಿರಿಸುವ ಕೆಲಸ ಮಾಡುತ್ತಿದ್ದಾರೆ. ಅನುಮತಿಗೆ ಬೇಕಾದ ಎಲ್ಲ ದಾಖಲೆಗಳನ್ನು ರಾಜ್ಯ ಸರ್ಕಾರ ನೀಡಿದ್ದರೂ ಅನುಮತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಇದೇ ಕಾರಣಕ್ಕೆ ಪರಿಸರ ಇಲಾಖೆಗೆ ಸೂಕ್ತ ನಿರ್ದೇಶನ ನೀಡುವಂತೆ ಪಿಐಎಲ್‌ ಸಲ್ಲಿಸಲಾಗಿದೆ ಎಂದು ಹೇಳಿದರು.

ಯೋಜನೆ ಅನುಷ್ಠಾನಕ್ಕೆ ಈಗಾಗಲೇ ಟೆಂಡರ್‌ ಕರೆಯಲಾಗಿದೆ. ಆದರೂ ಪರಿಸರ ಹಾಗೂ ವನ್ಯಜೀವಿ ಮಂಡಳಿಯ ಅನುಮತಿ ನೀಡುತ್ತಿಲ್ಲ. ಇದರಿಂದ ಮಳೆಗಾಲದಲ್ಲಿ ಅಲ್ಲಿ ಕೆಲಸ ಮಾಡುವುದು ಸಾಧ್ಯವಿಲ್ಲ ಎಂದು ಟೆಂಡರ್‌ದಾರರು ಟೆಂಡರ್‌ ರದ್ದುಗೊಳಿಸಲು ಕೇಳುತ್ತಿದ್ದಾರೆ. ಟೆಂಡರ್‌ ರದ್ದುಗೊಂಡರೆ ಮತ್ತಷ್ಟು ವಿಳಂಬ ಆಗಲಿದೆ. ಆದಕಾರಣ ಕೂಡಲೇ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.

ಪ್ರಧಾನಿ ಮೋದಿ ಅವರು ಗೋವಾದಲ್ಲಿ ವಿದ್ಯುತ್‌ ಸರಬರಾಜು ಮಾಡುವ ಯೋಜನೆ ಅನುಷ್ಠಾನಕ್ಕೆ ಆಸಕ್ತಿ ವಹಿಸಿದಂತೆ ಮಹದಾಯಿ ಯೋಜನೆಗೆ ಏಕೆ ಆದ್ಯತೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗುರು ರಾಯನಗೌಡರ, ಬಸವರಾಜ ಗುಡಿ, ಗುರುಶಾಂತಪ್ಪ ಇದ್ದರು.