ಸಾರಾಂಶ
----ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ ಜಿಲ್ಲಾಡಳಿತವು ಶುಕ್ರವಾರ ಆಯೋಜಿಸಿದ್ದ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ವಿವಿಧ ಪೊಲೀಸ್ ತುಕಡಿಗಳು ಹಾಗೂ ವಿದ್ಯಾರ್ಥಿಗಳಿಂದ ಆಕರ್ಷಕ ಹಾಗೂ ಶಿಸ್ತುಬದ್ಧ ಪಥಸಂಚಲನವು ಸ್ವಾತಂತ್ರ್ಯ ಸಂಭ್ರಮಕ್ಕೆ ಮೆರುಗು ಹೆಚ್ಚಿಸಿದವು.ಸಮಾಜ ಕಲ್ಯಾಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ತೆರೆದ ಜೀಪ್ ನಲ್ಲಿ ತೆರಳಿ ಪಥಸಂಚಲನಕ್ಕಾಗಿ ಮೈದಾನದಲ್ಲಿ ನೆರೆದಿದ್ದ ವಿವಿಧ ತುಕಡಿಗಳನ್ನು ವೀಕ್ಷಿಸಿದರು. ನಂತರ ಪಥಸಂಚಲನದ ಪ್ರಧಾನ ದಳಪತಿ ಎಸ್.ಡಿ. ಸಾಸನೂರು ಅವರ ನೇತೃತ್ವದಲ್ಲಿ ಶಿಸ್ತುಬದ್ಧ ಪಥಸಂಚಲನದಲ್ಲಿ 24 ವಿವಿಧ ಪೊಲೀಸ್ ತುಕಡಿಗಳ ಹಾಗೂ ವಿದ್ಯಾರ್ಥಿ ತಂಡಗಳು ಪಾಲ್ಗೊಂಡಿದ್ದವು.
ಅಶ್ವರೋಹಿದಳ, ಕೆಎಸ್‌ಆರ್ ಪಿಯ 2 ತಂಡಗಳು, ಸಿಎಆರ್, ಡಿಎಆರ್, ಕೆ.ಆರ್. ವಿಭಾಗ, ದೇವರಾಜ ವಿಭಾಗ, ಎನ್.ಆರ್. ವಿಭಾಗ, ವಿಜಯನಗರ ವಿಭಾಗ, ಮಹಿಳಾ ನಾಗರೀಕ ಪೊಲೀಸ್ ಪಡೆ, ನಗರ ಸಂಚಾರ ವಿಭಾಗ, ಗೃಹರಕ್ಷಕ ದಳ ಪುರುಷರು ಮತ್ತು ಮಹಿಳೆಯರ ತಂಡ, ಅಬಕಾರಿ, ಅಗ್ನಿಶಾಮಕ ದಳ ಮತ್ತು ತುರ್ತು ಸೇವೆ ಸಿಬ್ಬಂದಿ ಪಥಸಂಚಲನದಲ್ಲಿ ಶಿಸ್ತುಬದ್ಧವಾಗಿ ಸಾಗಿದರು.ಹಾಗೆಯೇ, ಎನ್.ಸಿ.ಸಿ ಭೂ ಸೇನೆ, ನೌಕಪಡೆ, ವಾಯುದಳ, ಪೊಲೀಸ್ ಪಬ್ಲಿಕ್ ಹಾಗೂ ಜವಾಹರ್ ನವೋದಯ ವಿದ್ಯಾಲಯ, ಗೈಡ್ಸ್ ವಿಭಾಗ, ಕೇಂದ್ರಿಯ ವಿದ್ಯಾಲಯ, ಭಾರತ್ ಸೇವಾ ದಳದ ಬಾಲಕ ಮತ್ತು ಬಾಲಕಿಯರ ತಂಡವು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು. ಇವರಿಗೆ ಡಿಎಆರ್, ಕೆಎಸ್‌ಆರ್ ಪಿ ಮತ್ತು ಡಿಎಆರ್ ಪೊಲೀಸ್ ಬ್ಯಾಂಡ್ ಗಳು ಸಾಥ್ ನೀಡಿದವು.
ಬಹುಮಾನ ವಿತರಣೆಸ್ವಾತಂತ್ರ್ಯ ದಿನಾಚರಣೆಯ ಪಥಸಂಚಲನದಲ್ಲಿ ಪಾಲ್ಗೊಂಡಿದ್ದ ತಂಡಗಳಿಗೆ 3 ವಿಭಾಗದಲ್ಲಿ ಬಹುಮಾನ ನೀಡಲಾಯಿತು. ಸಶಸ್ತ್ರ ದಳ- ಕೆಎಸ್ಆರ್ ಪಿ(ಪ್ರಥಮ), ಡಿಎಆರ್(ದ್ವಿತೀಯ), ನಗರ ಸಂಚಾರ ವಿಭಾಗ (ತೃತೀಯ). ನಿಶಸ್ತ್ರದಳ- ಎನ್ ಸಿಸಿ ಭೂ ಸೇನೆ (ಪ್ರಥಮ), ಎನ್ ಸಿಸಿ ನೌಕ ಪಡೆ (ದ್ವಿತೀಯ) ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವೆ (ತೃತೀಯ). ಶಾಲಾ ವಿಭಾಗ- ಪೊಲೀಸ್ ಪಬ್ಲಿಕ್ ಶಾಲೆ (ಪ್ರಥಮ), ಕೇಂದ್ರಿಯ ವಿದ್ಯಾಲಯ (ದ್ವಿತೀಯ) ಮತ್ತು ಜವಾಹರ್ ನವೋದಯ ವಿದ್ಯಾಲಯ (ತೃತೀಯ) ಬಹುಮಾವ ಪಡೆದರು. ವಿಜೇತ ತಂಡಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಬಹುಮಾನ ವಿತರಿಸಿದರು.