ಅಂಗವಿಕಲರ ಕ್ರೀಡಾಕೂಟದ ಆಯ್ಕೆ ಟ್ರಯಲ್

| Published : Dec 23 2023, 01:45 AM IST

ಸಾರಾಂಶ

ಮುಂದಿನ 2024ನೇ ಜ. 9 ರಿಂದ 13 ರವರೆಗೆ ಗೋವಾದ ಪಣಜಿಯಲ್ಲಿ ನಡೆಯುವ 22 ನೇ ರಾಷ್ಟ್ರೀಯ ಪ್ಯಾರಾ ಒಲಂಪಿಕ್ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಕರ್ನಾಟಕ ತಂಡವನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಗಣದಲ್ಲಿ ಅಂಗವಿಕಲರ ಕ್ರೀಡಾಕೂಟದ ಆಯ್ಕೆ ಟ್ರಯಲ್ ನಡೆಯಿತು.

ಕನ್ನಡಪ್ರಭ ವಾರ್ತೆ ತುಮಕೂರು

ಮುಂದಿನ 2024ನೇ ಜ. 9 ರಿಂದ 13 ರವರೆಗೆ ಗೋವಾದ ಪಣಜಿಯಲ್ಲಿ ನಡೆಯುವ 22 ನೇ ರಾಷ್ಟ್ರೀಯ ಪ್ಯಾರಾ ಒಲಂಪಿಕ್ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಕರ್ನಾಟಕ ತಂಡವನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಗಣದಲ್ಲಿ ಅಂಗವಿಕಲರ ಕ್ರೀಡಾಕೂಟದ ಆಯ್ಕೆ ಟ್ರಯಲ್ ನಡೆಯಿತು.

ಕರ್ನಾಟಕ ರಾಜ್ಯ ಅಂಗವಿಕಲರ ಕ್ರೀಡಾಸಂಸ್ಥೆ ಹಾಗೂ ತುಮಕೂರು ಜಿಲ್ಲಾ ಅಂಗವಿಕಲರ ಕ್ರೀಡಾ ಸಂಸ್ಥೆಯ ಸಹಯೋಗದಲ್ಲಿ ನಡೆದ ಆಯ್ಕೆ ಟ್ರಯಲ್‌ನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳು ಸುಮಾರು 400 ಕ್ಕೂ ಹೆಚ್ಚು ಅಂಗವಿಕಲ ಕ್ರೀಡಾಪಟುಗಳು ಭಾಗವಹಿಸಿದ್ದರು. ಅಂಗವಿಕಲರ ರಾಷ್ಟ್ರೀಯ ಆಯ್ಕೆ ಟ್ರಯಲ್‌ಗೆ ಕರ್ನಾಟಕ ರಾಜ್ಯ ಅಂಗವಿಕಲರ ಕ್ರೀಡಾ ಸಂಸ್ಥೆಯ ರಾಜ್ಯ ಉಪಾಧ್ಯಕ್ಷ ಹಾಗೂ ಪ್ರದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೆ.ವೈ. ವೆಂಕಟೇಶ್ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಗೋವಾದ ಪಣಜಿಯಲ್ಲಿ ಜ.9 ರಿಂದ 13ರವರೆಗೆ ನಡೆಯುವ 22ನೇ ಪ್ಯಾರಾ ಒಲಂಪಿಕ್ ಅಥ್ಲೆಟಿಕ್ ಚಾಂಪಿಯನ್ ಶಿಫ್ 2023-24ಗೆ ಕರ್ನಾಟಕ ತಂಡವನ್ನು ಆಯ್ಕೆ ಮಾಡುವ ಸಂಬಂಧ ಟ್ರಯಲ್ ನಡೆಯುತ್ತಿದೆ. ಸುಮಾರು 28 ವಿವಿಧ ಅಂಗವೈಕಲ್ಯ ಹೊಂದಿರುವ ವಿಭಾಗಗಳಲ್ಲಿ ಕ್ರೀಡಾಪಟುಗಳು ಆಯ್ಕೆ ಬಯಸಿ ಬಂದಿದ್ದಾರೆ. ರಾಷ್ಟ್ರೀಯ ಪ್ಯಾರಾ ಒಲಂಪಿಕ್ ಕ್ರೀಡಾ ಸಂಸ್ಥೆ ನೀಡಿರುವ ಮಾನದಂಡದ ಅನ್ವಯ ಎಂ.ಕ್ಯೂ.ಎಸ್.(ಮಿನಿಮಮ್ ಕ್ವಾಲಿಫೀಕೇಷನ್ ಸ್ಕೇಲ್)ನ ಅನ್ವಯ ನಿಗದಿ ಪಡಿಸಿರುವ ಗುರಿಯನ್ನು ತಲುಪಿದವರನ್ನು ಕ್ರೀಡಾಕೂಟಕ್ಕೆ ಆಯ್ಕೆ ಮಾಡಬೇಕಿದೆ. ಹಾಗಾಗಿ ಶುಕ್ರವಾರ ಬೆಳಿಗ್ಗೆಯಿಂದ ಸಂಜೆಯವರಗೆ ಟ್ರಯಲ್ ನಡೆಯಲಿದೆ. ನಾನು ಮೊದಲನೆಯದಾಗಿ ಗುರಿ ಮುಟ್ಟಿದ್ದೇನೆ ಎಂಬ ಕಾರಣಕ್ಕೆ ಆಯ್ಕೆ ಮಾಡಲು ಬರುವುದಿಲ್ಲ. ನಿಗದಿತ ಸಮಯದೊಳಗೆ ಇಂತಿಷ್ಟು ಮೀಟರ್ ಒಡಬೇಕೆಂಬ ನಿಯಮವಿದೆ. ಅದನ್ನು ಪೂರೈಸಿದವರವನ್ನು ಮಾತ್ರ ಆಯ್ಕೆ ಮಾಡಲಾಗುವುದು. ಓಟ, ಜಾವಲಿನ್, ಶಾಟ್‌ಪೂಟ್ ಸೇರಿದಂತೆ ಹಲವು ಕ್ರೀಡೆಗಳಿಗೆ ಆಯ್ಕೆ ಟ್ರಯಲ್ ಇದಾಗಿದೆ. ನುರಿತ ಕ್ರೀಡಾಧಿಕಾರಿಗಳು ಎಲ್ಲಾ ರೀತಿಯಿಂದಲೂ ಪರಿಶೀಲಿಸಿ, ಅಂತಿಮ ಪಟ್ಟಿಯನ್ನು ಸಿದ್ದಪಡಿಸುತ್ತಾರೆ ಎಂದರು.

ಕರ್ನಾಟಕ ರಾಜ್ಯ ಅಂಗವಿಕಲರ ಕ್ರೀಡಾ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಮಹೇಶ್.ಎಂ.ಕೆ. ಮಾತನಾಡಿ, ಗೋವಾದ ಪಣಜಿಯಲ್ಲಿ ನಡೆಯುವ ೨೨ನೇ ಪ್ಯಾರಾ ಒಲಂಪಿಕ್ ಚಾಂಪಿಯನ್ ಶಿಫ್ 2023-24 ಕ್ಕೆ ರಾಷ್ಟ್ರದಾದ್ಯಂತ ಬರುವ ಕ್ರೀಡಾಪಟುಗಳಿಗೆ ಊಟ, ವಸತಿ ವ್ಯವಸ್ಥೆಯನ್ನು ಗೋವಾ ರಾಜ್ಯದ ಅಂಗವಿಕಲರ ಕ್ರೀಡಾ ಸಂಸ್ಥೆ ಮಾಡಿದೆ. ರೈಲಿನ ಪ್ರಯಾಣದ ದರವನ್ನು ಮಾತ್ರ ಕ್ರೀಡಾಪಟುಗಳು ಭರಿಸಬೇಕಾಗಿದೆ. ಇತ್ತೀಚಿಗೆ ನಡೆದ ಎಷ್ಯನ್ ಪ್ಯಾರಾಗೇಮ್, ಒಲಂಪಿಕ್ ಗೇಮಗಳಲ್ಲಿ ಭಾಗವಹಿಸಿ ಪದಕ ಪಡೆದ ಅಂಗವಿಕಲ ಕ್ರೀಡಾಪಟುಗಳಿಗೆ ಯಾವುದೇ ಅಯ್ಕೆ ಟ್ರಯಲ್ ಇಲ್ಲದೆ ನೇರವಾಗಿ ರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಹೊಸದಾಗಿ ಕ್ರೀಡಾ ಕ್ಷೇತ್ರಕ್ಕೆ ಬರುವ ಅಂಗವಿಕಲರ ಕ್ರೀಡಾಪಟುಗಳು ಅಯ್ಕೆ ಟ್ರಯಲ್‌ನಲ್ಲಿ ಎಂ.ಕ್ಯೂ.ಎಸ್ ನಂತೆ ಆಯ್ಕೆಯಾಗುವುದು ಕಡ್ಡಾಯ ಎಂದರು.

ಈ ವೇಳೆ ಆಯ್ಕೆ ಸಮಿತಿ ಅಧ್ಯಕ್ಷರಾದ ಎಂ. ಮಹದೇವ, ಸದಸ್ಯರಾದ ಜೆ. ಚಂದ್ರಶೇಖರ್, ಕೆ.ವೈ. ವೆಂಕಟೇಶ್, ಆರ್.ರಾಮಚಂದ್ರ, ಎಂ. ನೀಲಾಂಜನೆಯ್ಯ ಮತ್ತಿತರರು ಪಾಲ್ಗೊಂಡಿದ್ದರು.