ಕನ್ನಡಪ್ರಭ ವಾರ್ತೆ ಮೇಲುಕೋಟೆ

ಪ್ರಸಿದ್ಧ ಶ್ರೀಚೆಲುವನಾರಾಯಣಸ್ವಾಮಿ ಸಮೂಹ ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಸಮಾಜ ಸೇವಕ ಕನಗೋನಹಳ್ಳಿ ಪರಮೇಶಗೌಡ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ವಜ್ರಾಂಗ್ರಿ ಅವ್ಯವಹಾರದ ಪ್ರಕರಣದಲ್ಲಿ ವಜಾ ಆಗಿದ್ದ 12 ವರ್ಷಗಳ ನಂತರ ವ್ಯವಸ್ಥಾಪನಾ ಸಮಿತಿ ಅಸ್ಥಿತ್ವಕ್ಕೆ ಬಂದಂತಾಗಿದೆ. ದೇವಾಲಯದ ಆಡಳಿತ ಕಚೇರಿಯಲ್ಲಿ ಸಭೆ ಸೇರಿದ್ದ ವ್ಯವಸ್ಥಾಪನಾ ಸಮಿತಿಯ ಪ್ರಥಮ ಸಭೆಯಲ್ಲಿ ದೇವಾಲಯದ ಅಭಿವೃದ್ಧಿ ಟ್ರಸ್ಟ್‌ನಿಂದ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೀಡಿದ ಸಲಹೆಯಂತೆ ಸಮಾಜ ಸೇವಕ ಪರಮೇಶ್‌ಗೌಡರನ್ನು ಆಯ್ಕೆಮಾಡಲಾಗಿದೆ.

ಕೊರಂ ಕೊರತೆಯಿಂದ ಕಳೆದ ಸಲ ಮುಂದೂಡಿದ್ದ ಸಮಿತಿಯ ಪ್ರಥಮ ಸಭೆ ಬುಧವಾರ ನಡೆದು 8 ಮಂದಿ ಸದಸ್ಯ ಬಲದ ಸಮಿತಿ ಸಭೆಯಲ್ಲಿ ಹಿರಿಯ ಸದಸ್ಯ, ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ಡಾ.ವೆಂಕಟರಾಮೇಗೌಡರು ಪರಮೇಶ್‌ಗೌಡರ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಸೂಚಿಸಿದ ನಂತರ ಮತ್ತೋರ್ವ ಸದಸ್ಯೆ ಡಾ.ಪ್ರೀತಿ ಮಹದೇವ್ ಅನುಮೋದಿಸಿದರು.

ಉಳಿದ ಎಲ್ಲಾ ಸದಸ್ಯರು ಪರಮೇಶ್‌ಗೌಡರ ಆಯ್ಕೆಗೆ ಸರ್ವಾನುಮತದ ಒಪ್ಪಿಗೆ ನೀಡಿದರು. ಅಧ್ಯಕ್ಷರ ಆಯ್ಕೆಯ ಸಭೆಯಲ್ಲಿ ಸದಸ್ಯರಾದ ಬಳಿಘಟ್ಟ ಗ್ರಾಮದ ವೆಂಕಟೇಶ್, ಮೈಸೂರಿನ ಡಾ.ಪ್ರೀತಿ ಮಹದೇವ್, ಕಾಡೇನಹಳ್ಳಿಯ ವಕೀಲರಾದ ಸತೀಶ್, ಜಕ್ಕನಹಳ್ಳಿಯ ಕೆ.ಎಚ್.ಪುಟ್ಟಸ್ವಾಮಿ, ಬ್ರಹ್ಮದೇವರಹಳ್ಳಿಯ ರಾಜು ಭಾಗವಹಿಸಿ ಪರಮೇಶಗೌಡರ ಆಯ್ಕೆಗೆ ಒಪ್ಪಿಗೆ ಸೂಚಿಸಿದರು.


ಈ ಮೊದಲು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಡಾ.ವೆಂಕಟರಾಮೇಗೌಡರು ತಮ್ಮ ನಿಲುವಿನಿಂದ ಹಿಂದೆ ಸರಿದು ತಮ್ಮ ಶಿಷ್ಯನಿಗೆ ಅವಕಾಶ ಮಾಡಿಕೊಟ್ಟದ್ದು ವಿಶೇಷವಾಗಿತ್ತು. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ಕಾರ್ಯದರ್ಶಿಯಾಗಿ ಕರ್ತವ್ಯನಿರ್ವಹಿಸಿ ಅಧ್ಯಕ್ಷರ ಆಯ್ಕೆಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದಾಗಿ ಮಾಹಿತಿ ನೀಡಿದರು.

ಸಮಿತಿ ಸದಸ್ಯತ್ವಕ್ಕೆ ಅರ್ಚಕರ ಆಯ್ಕೆ ಕುತೂಹಲ ಮೂಡಿಸಿದೆ. ಸಮಿತಿಗೆ 8 ಸದಸ್ಯರನ್ನು ಆಯ್ಕೆ ಮಾಡಿದ್ದ ಸರ್ಕಾರ ಅರ್ಚಕರ ಹೆಸರನ್ನು ಅಂತಿಮಗೊಳಿಸಿಲ್ಲ. ಪೂರ್ಣ ಪ್ರಮಾಣದ ವ್ಯವಸ್ಥಾಪನಾ ಸಮಿತಿಗೆ ಅರ್ಚಕರೊಬ್ಬರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಬೇಕಿದ್ದು, ದೇವಾಲಯದಲ್ಲಿರುವ ವಿವಿಧ ಸನ್ನಿಧಿಗಳ ಪೈಕಿ ಯಾವ ಅರ್ಚಕರು ಸದಸ್ಯರಾಗುತ್ತಾರೆ ಎಂಬ ಕುತೂಹಲ ಮೂಡಿಸಿದೆ. ಆಯ್ಕೆ ನಿಯಮ ಹಾಗೂ ಕಾನೂನಿನಲ್ಲಿ ಸಲ್ಪತಪ್ಪಾದರೂ ಪ್ರಕರಣ ಹೈಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ.

ಈ ನಡುವೆ ಮಾರ್ಚ್ 28 ರಂದು ನಡೆಯುವ ವಿಶ್ವವಿಖ್ಯಾತ ವೈರಮುಡಿ ಉತ್ಸವದ ವ್ಯವಸ್ಥೆಯ ಜವಾಬ್ದಾರಿ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಜೊತೆಗೆ ಪ್ರಮುಖವಾಗಿ ವ್ಯವಸ್ಥಾಪನಾ ಸಮಿತಿ ಮೇಲಿದೆ. ಭಕ್ತಸ್ನೇಹಿಯಾಗಿ ಅಚ್ಚುಕಟ್ಟಾದ ವ್ಯವಸ್ಥೆಗಳು ಮತ್ತು ಚೆಲುವನಾರಾಯಣಸ್ವಾಮಿಯ ಬ್ರಹ್ಮೋತ್ಸವದ ಎಲ್ಲಾ ಉತ್ಸವಗಳು ವೈಭವದಿಂದ ನಡೆಯಲು ಸಿದ್ಧತೆಗಳು ನಡೆಯಬೇಕಿದೆ.