ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಕೊಲೆ ಆರೋಪಿ ನಟ ದರ್ಶನ್‌ಗೆ ರಾಜಾತಿಥ್ಯಕ್ಕೆ ಸ್ಥಳೀಯ ನಿವಾಸಿಗಳ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಬೆಂಗಳೂರು : ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಕೊಲೆ ಆರೋಪಿ ನಟ ದರ್ಶನ್‌ಗೆ ರಾಜಾತಿಥ್ಯಕ್ಕೆ ಸ್ಥಳೀಯ ನಿವಾಸಿಗಳ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕೇಂದ್ರ ಕಾರಾಗೃಹದಲ್ಲಿ ಯಾವುದೇ ಮೊಬೈಲ್‌ ಜಾಮರ್‌ ಕೆಲಸ ಮಾಡಲ್ಲ. ಕಾರಾಗೃಹದ ಸುತ್ತಮುತ್ತಲ ಬಡಾವಣೆಗಳಲ್ಲಿ ನೆಟ್‌ ವರ್ಕ್‌ ಸಿಗದೆ ಮೊಬೈಲ್‌ ಕರೆ ಮಾಡಲು ಸಾಧ್ಯವಾಗುತ್ತಿಲ್ಲ. ನೆಟ್‌ ವರ್ಕ್‌ ಸಮಸ್ಯೆ ಬಗ್ಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.

ಸ್ಥಳೀಯ ನಿವಾಸಿ ಲಕ್ಷ್ಮಣ್‌ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಕಾರಾಗೃಹದಲ್ಲಿ ಬೇಲಿಯೇ ಎದ್ದು ಹೊಲ ಮೇಯುತ್ತಿದೆ. ಕೈದಿಗಳ ಕಳ್ಳಾಟಕ್ಕೆ ಕಾರಾಗೃಹದ ಅಧಿಕಾರಿಗಳು, ಸಿಬ್ಬಂದಿಗಳೇ ಸಾಥ್‌ ನೀಡುತ್ತಿದ್ದಾರೆ. ನಮಗೆ ಇಲ್ಲಿ ಮೊಬೈಲ್ ನೆಟ್‌ ವರ್ಕ್‌ ಸಿಗುವುದಿಲ್ಲ. ಆದರೆ, ಜೈಲಿನಲ್ಲಿ ಕೊಲೆ ಆರೋಪಿ ನಟ ದರ್ಶನ್‌, ಕುಖ್ಯಾತ ರೌಡಿಗಳು ಮೊಬೈಲ್‌ ಬಳಸುತ್ತಾರೆ. ಕಾಫಿ ಕುಡಿಯುತ್ತಾ, ಸಿಗರೇಟ್ ಸೇದುತ್ತಾ ಆರಾಮವಾಗಿದ್ದಾರೆ. ಕಾರಾಗೃಹದಲ್ಲಿ ಕೈದಿಗಳು ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಕಾರಾಗೃಹದ ಸುತ್ತಮುತ್ತಲ ಬಡಾವಣೆಗಳಲ್ಲಿ ಮೊಬೈಲ್ ನೆಟ್‌ ವರ್ಕ್‌ ಸಮಸ್ಯೆ ಇರುವ ಬಗ್ಗೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಆದರೆ, ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ. ಆದರೆ, ಕಾರಾಗೃಹದೊಳಗೆ ಕೈದಿಗಳು ಫೋನ್‌ ಬಳಸಿ ವಿಡಿಯೋ ಕರೆಗಳನ್ನು ಮಾಡಿ ಮಾತನಾಡುತ್ತಾರೆ. ದುಡ್ಡು ಇದ್ದರೆ ಕಾರಾಗೃಹದಲ್ಲಿ ಏನು ಬೇಕಾದರೂ ಸಿಗುತ್ತದೆ. ಈ ಬಗ್ಗೆ ಸರ್ಕಾರ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಂದು ಆಗ್ರಹಿಸಿದ್ದಾರೆ.