ಸಾರಾಂಶ
ಕನ್ನಡಪ್ರಭ ವಾರ್ತೆ ಸವದತ್ತಿ ಗ್ರಾಮೀಣ ಮಟ್ಟದ ರಂಗಭೂಮಿ ಕಲೆಗಳು ಇಂದು ನಶಿಸುತ್ತಿವೆ. ಅವುಗಳನ್ನು ಉಳಿಸಿ ಬೆಳೆಸುತ್ತಿರುವ ರಂಗ ಆರಾಧನಾ ಸಂಘಟನೆ ಜೊತೆಗೆ ನಾವೆಲ್ಲರೂ ಕೈಜೋಡಿಸಬೇಕಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಪಟ್ಟಣದ ದೇಸಾಯಿ ಕೋಟೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ, ರಂಗ ಆರಾಧನಾ ಸಂಸ್ಕೃತಿಕ ಸಂಘಟನೆ ಸವದತ್ತಿಯ ಸಂಯುಕ್ತ ಆಶ್ರಯದಲ್ಲಿ ನಡೆದ 27ನೇ ಪರಸಗಡ ನಾಟಕೋತ್ಸವ-2024ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದ ಅವರು, ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯ ಕಾರ್ಯ ಎಲ್ಲರ ಮೆಚುಗೆಗೆ ಪಾತ್ರವಾಗಿದ್ದು, ಈ ಸಂಘಟನೆಗೆ ಅವಶ್ಯವಾಗಿರುವ ಜಾಗೆ ಕೊಡಿಸುವುದರ ಜೊತೆಗೆ ಬರುವಂತ ದಿನಗಳಲ್ಲಿ ಅದರ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಮಾಡಿ ಕಡ್ಡಡ ಪೂರ್ಣಗೊಳ್ಳಲು ಸೂಕ್ತ ಸಹಾಯ ನೀಡುವುದಾಗಿ ಭರವಸೆ ನೀಡಿದರು. ದೇಸಾಯಿ ಕೋಟೆಯ ಕೆಲವು ಭಾಗ ಕುಸಿದು ಬೀಳುತ್ತಿದ್ದು, ಪ್ರವಾಸೋದ್ಯಮ ಇಲಾಖೆಯಿಂದ ಈ ಕೋಟೆ ಅಭಿವೃದ್ಧಿಗೆ ಈಗಾಗಲೆ ಪ್ರಸ್ತಾವಣೆ ಸಲ್ಲಿಸಲಾಗಿದೆ. ಬರುವಂತ ದಿನಗಳಲ್ಲಿ ಕೋಟೆಯನ್ನು ಸುಂದರ ತಾಣವನ್ನಾಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.ಯ.ರು.ಪಾಟೀಲ ಮಾತನಾಡಿ, ಸುಮಾರು ಮೂರು ದಶಕಗಳಿಂದ ಈ ಭಾಗದಲ್ಲಿ ರಂಗಭೂಮಿ ಕಲಾವಿದರು ಮಾಡುತ್ತಿರುವ ರಂಗ ಚಟುವಟೆಕೆಗಳಿಗೆ ಸರಿಯಾದ ಸಂಪನ್ಮೂಲಗಳು ಇಲ್ಲದಾಗಿವೆ. ಕಲಾವಿದರಿಗೆ ಅವಶ್ಯಕವಾಗಿರುವ ರಂಗ ಮಂದಿರದ ಜೊತೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಜನಪ್ರತಿನಿಧಿಗಳು ಆಸಕ್ತಿ ತೋರಬೇಕು. ಸವದತ್ತಿಯ ದೇಸಾಯಿ ಕೋಟೆಯ ಪ್ರಮುಖ ದ್ವಾರದ ಬಳಿ ಗೋಡೆಗಳು ಬಿರುಕು ಬಿಟ್ಟು ಕುಸಿದು ಬೀಳುವ ಹಂತದಲ್ಲಿರುವದರಿಂದ ಕೋಟೆಯ ಪುನರುತ್ಥಾನದ ಕಡೆಗೆ ಶಾಸಕರು ವಿಶೇಷ ಗಮನಹರಿಸಬೇಕೆಂದರು.
ಡಾ.ಎ.ಸಿ.ಕಬ್ಬಿಣ ಮಾತನಾಡಿ, ರಂಗ ಆರಾಧನಾ ಸಂಘಟನೆ ಕಲಾವಿದರು ಪ್ರತಿವರ್ಷ ರಂಗ ಚಟುವಟಿಕೆಗಳ ಮುಖಾಂತರ ಜನರನ್ನು ರಂಜಿಸುತ್ತಾ ಬಂದಿದ್ದು, ಅವರ ಕಾರ್ಯವು ಎಲ್ಲರಲ್ಲಿ ರಂಗಭೂಮಿ ಅಭಿರುಚಿ ಹೆಚ್ಚಿಸುತ್ತಿದೆ ಎಂದರು.ಪ್ರಶಸ್ತಿ ಪುರಸ್ಕೃತ ಬಿ.ರಾಜು ಮತ್ತು ಬಾಬಾಸಾಹೇಬ ಕಾಂಬಳೆ ಮಾತನಾಡಿದರು. ಪ್ರಗತಿ ಪರ ರೈತ ರುದ್ರಪ್ಪ ಶಿಂಧೆ ಇವರಿಂದ ಕೊಡಲ್ಪಡುವ ರಂಗ ಆರಾಧಕ ಪ್ರಶಸ್ತಿಯನ್ನು ಧಾರವಾಡದ ಖ್ಯಾತ ಪ್ರಸಾಧನಕಾರ ಸಂತೋಷ ಗಜಾನನ ಮಹಾಲೆಯವರಿಗೆ ನೀಡಲಾಯಿತು.
ಹಿರಿಯ ನ್ಯಾಯವಾದಿ ದಿ.ವಿ.ಆರ್.ಕಾರದಗಿಯವರ ಸ್ಮರಣಾರ್ಥ ನೀಡುವ ಮತ್ತೊಂದು ರಂಗ ಆರಾಧಕ ಪ್ರಶಸ್ತಿಯನ್ನು ಸಾಣೆ ಹಳ್ಳಿಯ ರಂಗಕರ್ಮಿ ಶಿವ ಸಂಚಾರದ ಸಂಚಾಲಕ ಬಿ. ರಾಜುರವರಿಗೆ ನೀಡಲಾಯಿತು. ರಂಗಪ್ರೇಮಿ ದಿ.ಚಂದ್ರಕಾಂತ ಸುಳ್ಳದರವರ ಸ್ಮರಣಾರ್ಥ ನೀಡುವ ರಂಗಚಂದ್ರ ಪ್ರಶಸ್ತಿ ಬೆಳಗಾವಿ ನಾಟಕಕಾರ, ರಂಗ ನಿರ್ದೇಶಕ ಬಾಬಾಸಾಹೇಬ ಕಾಂಬಳೆ ಅವರಿಗೆ ನೀಡಲಾಯಿತು.ಚಂದ್ರಣ್ಣ ಶಾಮರಾಯನವರ, ಶ್ರೀಧರ ಗಸ್ತಿ, ಅರುಣ ಸುಳ್ಳದ, ಸಿದ್ದಯ್ಯ ವಡಿಯರ, ರುದ್ರಪ್ಪ ಶಿಂಧೆ, ಡಾ.ವೈ.ಎಂ. ಯಾಕೊಳ್ಳಿ, ಡಾ.ಎ.ಬಿ.ವಗ್ಗರ, ಭಾರತಿ ಕಡೇಮನಿ ಇದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಹಿರಿಯ ನ್ಯಾಯವಾದಿ ದಿ.ವಿ.ಆರ್. ಕಾರದಗಿ, ದಿ.ಮೋಹನದಾಸ ಕಡೇಮನಿ, ದಿ.ಕೆ.ಸಂಕಪ್ಪ ಮಾಸ್ತರ ಹಿರೇಕೊಪ್ಪ, ಯಲ್ಲವ್ವ ಯಾಕೊಳ್ಳಿ, ಹನಮವ್ವ ವಗ್ಗರವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಝಕೀರ ನದಾಫ ಸ್ವಾಗತಿಸಿದರು. ಶಿವಾನಂದ ತಾರೀಹಾಳ ನಿರೂಪಿಸಿದರು. ಗೋಪಾಲ ಪಾಸಲಕರ ವಂದಿಸಿದರು.