ಕನ್ನಡಪ್ರಭ ವಾರ್ತೆ ಹೊಸದುರ್ಗ
ಪರಸರ ಎಂದರೆ ಕೇವಲ ಗಿಡ ನೆಟ್ಟು ಸಂಭ್ರಮಾಚರಣೆ ಮಾಡಿ ಹೋಗುವುದಲ್ಲ, ತನ್ನ ಸುತ್ತಮುತ್ತ ಇರುವ ಎಲ್ಲಾ ಸಂಪನ್ಮೂಲಗಳನ್ನು ಸಂರಕ್ಷಣೆ ಮಾಡುವುದು ಎಂದು ತಹಸೀಲ್ದಾರ್ ತಿರುಪತಿ ಪಾಟೀಲ್ ಹೇಳಿದರು.ಪಟ್ಟಣದ ನಿಜಲಿಂಗಪ್ಪ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿಪರಿಸರದ ಪಾಠವನ್ನು ಕೇವಲ ಪುಸ್ತಕದಲ್ಲಿ ಮಾತ್ರ ಕಲಿಸುವುದಲ್ಲ ಮಕ್ಕಳಿಗೆ ಗಿಡಕೊಟ್ಟು ಅದನ್ನು ಮನೆಯಲ್ಲಿ ನೆಡೆಸಿ ಅದರ ಪೋಷಣೆ ಮಾಡುವ ಮೂಲಕ ಪ್ರಾಯೋಗಿಕ ಶಿಕ್ಷಣ ಬಹುಮುಖ್ಯ ಎಂದರು.
ಶಾಲಾ ಕಾಲೇಜುಗಳ ಸುತ್ತಾ ಗಿಡ ಮರ ಬೆಳೆಸುವುದು , ಅವುಗಳನ್ನು ಸಂರಕ್ಷಣೆ ಮಾಡುವುದು ಪರಿಸರ ಸಂರಕ್ಷಣೆಯ ದೊಡ್ಡ ಅಭಿಯಾನ. ಜನಸಂಖ್ಯೆ ಬೆಳೆದಂತೆ ಭೂಮಿ ಬೆಳೆಯಲ್ಲ ಹಾಗಾಗಿ ಇರುವ ಭೂಮಿಯಲ್ಲಿಯೇ ಉತ್ತಮ ಪರಿಸರವನ್ನು ಹೊಂದಬೇಕಿದೆ . ಇದೆ ರೀತಿ ಮರಗಳ ನಾಶವಾದರೆ ಮಕ್ಕಳು ಆಕ್ಸಿಜನ್ ಬ್ಯಾಗುಗಳನ್ನು ಹಾಕಿಕೊಂಡು ಶಾಲೆಗೆ ಬರುವ ದಿನಗಳು ದೂರವಿಲ್ಲ ಎಂದರು.ಕರಡಿ, ಚಿರತೆ ಸೇರಿದಂತೆ ಕೆಲವು ಕಾಡು ಪ್ರಾಣಿಗಳು ಪಟ್ಟಣದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುವುದು ಮನುಷ್ಯನ ದುರಾಸೆಯಿಂದ. ಕಾಡು ಪ್ರಾಣಿಗಳು ವಾಸಿಸುವ ಜಾಗವನ್ನು ನಾವು ಆಕ್ರಮಿಸಿರುವುದರಿಂದ ಅವು ನಮ್ಮ ಪ್ರದೇಶಕ್ಕೆ ಬರುತ್ತಿವೆ ಆದ್ದರಿಂದ ಇನ್ನು ಮುಂದೆ ಯಾರೇ ಪೋನ್ ಮಾಡಿ ಪಟ್ಟಣದಲ್ಲಿ ಕರಡಿ ಬಂದಿದೆ ಎಂದರೆ ಅದನ್ನು ಹಿಡಿಯಬೇಡಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಕೆ.ಎಸ್,ಕಲ್ಮಠ್ ಪ್ರಾಸ್ತಾವಿಕವಾಗಿ ಮಾತನಾಡಿಪರಿಸರ ಸಂರಕ್ಷಣೆ ಮಾಡುವ ಸದುದ್ದೇಶದಿಂದ ಈ ವರ್ಷ ನಮ್ಮ ಶಾಲೆಯ ಮಕ್ಕಳಿಂದ ಗ್ರಾಮಾಂತರ ಪ್ರದೇಶದಲ್ಲಿಒಂದು ಸಾವಿರ ಗಿಡಗಳನ್ನು ಬೆಳೆಸಲು ಯೋಜನೆ ಹಾಕಿಕೊಳ್ಳಲಾಗಿದೆ ಹಾಗೆಯೇ ಬೀದಿ ನಾಯಿಗಳ ಸಂರಕ್ಷಣೆ ನಮ್ಮ ಶಿಕ್ಷಣ ಸಂಸ್ಥೆಯಿಂದ ಆಹಾರದ ನೀಡುವ ವ್ಯವಸ್ಥೆ ಮಾಡಲು ಸಿದ್ದರಿದ್ದು ಪುರಸಭೆ ಅದಕ್ಕೆ ಅವಕಾಶ ನಿಡಬೇಕು ಎಂದರು.
ಹೈಕೋರ್ಟ ನ ನಿವೃತ್ತ ನ್ಯಾಯಾಧೀಶ ಎಚ್ ಬಿಲ್ಲಪ್ಪ ಉದ್ಗಾಟಿಸಿದರು. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಕೆ ಎಸ್ ಕಲ್ಮಠ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಕಾಡೆಮಿಕ್ ಡೈರೆಕ್ಟರ್ ಎಂಬಿ ತಿಪ್ಪೆಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ಕೆ ಎಸ್ ಕಲ್ಮಠ್, ಪ್ರಾಂಶುಪಾಲ ಬಸಪ್ಪ, ಡೈರೆಕ್ಟರ್ ವಿಜಯಶಿವಲಿಂಗಪ್ಪ ಮತ್ತಿತರರು ಹಾಜರಿದ್ದರು.