ಸಾರಾಂಶ
ಮದ್ದೂರು ಪುರಸಭೆ ನಗರಸಭೆಯಾಗಿ ಮೆಲ್ದರ್ಜೆಗೆರಿದ್ದು, ನಗರದಲ್ಲಿ ತುಂಬಾ ಕೆಲಸಗಳು ಆಗಬೇಕಾಗಿದೆ. ಕೆಲ ದಿನಗಳಲ್ಲೆ ಸ್ಥಳೀಯ ಸಂಸ್ಥೆ ಚುನಾವಣೆ ಎದುರಾಗಲಿದ್ದು, ಹೀಗಾಗಿ ಅತೀ ಜರೂರಾಗಿ ವಾರ್ಡ್ ಗಳ ವಿಂಗಡಣೆ ಕೆಲಸವಾಗಬೇಕಾಗಿದೆ. ಅ.2 ರಂದು ಗಾಂಧಿ ಜಯಂತಿ ಅಂಗವಾಗಿ ನಗರದಲ್ಲಿ ಸ್ವಚ್ಚತಾ ಅಭಿಯಾನ ಕೈಗೊಳ್ಳಲಾಗಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ನಗರಸಭೆ ಪ್ರಭಾರ ಪೌರಾಯುಕ್ತರಾಗಿ ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ಶನಿವಾರ ಅಧಿಕಾರ ವಹಿಸಿಕೊಂಡರು. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ನಗರಸಭೆ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ಪ್ರಭಾರ ಆಯುಕ್ತರಾಗಿ, ಪುರಸಭೆ ಮುಖ್ಯಾಧಿಕಾರಿ ವರ್ಗಾವಣೆಗೊಂಡಿದ್ದ ಹಿನ್ನೆಲೆಯಲ್ಲಿ ಕಚೇರಿ ವ್ಯವಸ್ಥಾಪಕ ಶ್ರೀಧರ್ ಪ್ರಭಾರ ಮುಖ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರಿಂದ ಅಧಿಕಾರ ಸ್ವೀಕಾರ ಮಾಡಿದರು.ನಂತರ ಜನಪ್ರತಿನಿಧಿಗಳು ಹಾಗೂ ಕಚೇರಿ ಸಿಬ್ಬಂದಿಯಿಂದ ಸನ್ಮಾನ ಸ್ವೀಕರಿಸಿದ ಪರಶುರಾಮ ಸತ್ತೀಗೇರಿ ಮಾತನಾಡಿ, ಚುನಾಯಿತ ಜನಪ್ರತಿನಿಧಿಗಳು, ಕಚೇರಿ ಸಿಬ್ಬಂದಿ, ಸಾರ್ವಜನಿಕರ ಸಹಕಾರದೊಂದಿಗೆ ನಗರದಲ್ಲಿ ಕುಡಿಯುವ ನೀರು, ನೈರ್ಮಲ್ಯಕ್ಕೆ ಮೊದಲ ಆದ್ಯತೆ ನೀಡಿ ಹಂತ ಹಂತವಾಗಿ ನಗರದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಮದ್ದೂರು ಪುರಸಭೆ ನಗರಸಭೆಯಾಗಿ ಮೆಲ್ದರ್ಜೆಗೆರಿದ್ದು, ನಗರದಲ್ಲಿ ತುಂಬಾ ಕೆಲಸಗಳು ಆಗಬೇಕಾಗಿದೆ. ಕೆಲ ದಿನಗಳಲ್ಲೆ ಸ್ಥಳೀಯ ಸಂಸ್ಥೆ ಚುನಾವಣೆ ಎದುರಾಗಲಿದ್ದು, ಹೀಗಾಗಿ ಅತೀ ಜರೂರಾಗಿ ವಾರ್ಡ್ ಗಳ ವಿಂಗಡಣೆ ಕೆಲಸವಾಗಬೇಕಾಗಿದೆ. ಅ.2 ರಂದು ಗಾಂಧಿ ಜಯಂತಿ ಅಂಗವಾಗಿ ನಗರದಲ್ಲಿ ಸ್ವಚ್ಚತಾ ಅಭಿಯಾನ ಕೈಗೊಳ್ಳಲಾಗಿದೆ ಎಂದರು.ತೆರಿಗೆ, ಇ-ಖಾತಾ ಹಾಗೂ ಪಟ್ಟಣದಲ್ಲಿ ರಸ್ತೆ ಗುಂಡಿಗಳ ಕಾಮಗಾರಿ ಸೇರಿದಂತೆ ಹಲವು ಅಭಿವೃದ್ಧಿ ಬಗ್ಗೆ ಸಚಿವರು, ಸಂಸದರು ಹಾಗೂ ಶಾಸಕರು, ನಗರಸಭಾ ಅಧ್ಯಕ್ಷರ ಜೊತೆಯಲ್ಲಿ ಚರ್ಚಿಸಿ ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರಸಭೆ ಕೆಲಸಗಳಿಗೆ ಕಚೇರಿ ಸಿಬ್ಬಂದಿ ಕೊರತೆ ಇದೆ. ಅದನ್ನು ನೀಗಿಸಲು ಸರ್ಕಾರ ಮತ್ತು ಜಿಲ್ಲಾಡಳಿತದ ಜೊತೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು.ಈ ವೇಳೆ ನಗರಸಭಾ ಅಧ್ಯಕ್ಷೆ ಕೋಕಿಲ ಅರುಣ್, ಉಪಾಧ್ಯಕ್ಷ ಟಿ.ಆರ್.ಪ್ರಸನ್ನ ಕುಮಾರ್, ತಾಯಿ ಸಮಿತಿ ಅಧ್ಯಕ್ಷೆ ವನಿತಾ, ಸೇರಿದಂತೆ ನಗರಸಭೆ ಕಂದಾಯ, ನೈರ್ಮಲ್ಯ ಸೇರಿದಂತೆ ವಿವಿಧ ವಿಭಾಗಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.