ಪುರಸಭೆ ಅಧ್ಯಕ್ಷರಾಗಿ ಪರಶುರಾಮ ಖಂಡೂನವರ ಅವಿರೋಧ ಆಯ್ಕೆ

| Published : Feb 02 2025, 01:01 AM IST

ಸಾರಾಂಶ

ಹಾನಗಲ್ಲ ಪುರಸಭೆಯ ಅಧ್ಯಕ್ಷರಾಗಿ ಪರಶುರಾಮ ಖಂಡೂನವರ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಪ್ರಸ್ತುತ ಅವಧಿಯ 5ನೇ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡರು.

ಹಾನಗಲ್ಲ: ಹಾನಗಲ್ಲ ಪುರಸಭೆಯ ಅಧ್ಯಕ್ಷರಾಗಿ ಪರಶುರಾಮ ಖಂಡೂನವರ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಪ್ರಸ್ತುತ ಅವಧಿಯ 5ನೇ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡರು. ಶನಿವಾರ ಹಾನಗಲ್ಲಿನ ಪುರಸಭೆ ಸಭಾಂಗಣದಲ್ಲಿ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಪರಶುರಾಮ ಖಂಡೂನವರ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ, ತಾಲೂಕು ತಹಸೀಲ್ದಾರ್‌ ಎಸ್. ರೇಣುಕಾ ಅವರು ಪರಶುರಾಮ ಖಂಡೂನವರ ಅವರ ಆಯ್ಕೆಯನ್ನು ಪ್ರಕಟಿಸಿದರು. ಪುರಸಭೆಯಲ್ಲಿ ಒಟ್ಟು 23 ಸದಸ್ಯರಿದ್ದಾರೆ. ಇದರಲ್ಲಿ ಕಾಂಗ್ರೆಸ್‌ನ 18 ಸದಸ್ಯರು, ಬಿಜೆಪಿಯ 4 ಸದಸ್ಯರು, ಒಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಈವರೆಗೆ ನಾಲ್ವರು ಕಾಂಗ್ರೆಸ್ ಸದಸ್ಯರಾದ ಖುರ್ಷಿದ ಅಹಮ್ಮದ್ ಹುಲ್ಲತ್ತಿ, ನಾಗಪ್ಪ ಸವದತ್ತಿ, ಅನಂತವಿಕಾಸ ನಿಂಗೋಜಿ, ಮಮತಾ ಆರೆಗೊಪ್ಪ ಅಧ್ಯಕ್ಷರಾಗಿದ್ದಲ್ಲದೆ, ಈ ನಡುವೆ ಹಂಗಾಮಿ ಅಧ್ಯಕ್ಷರಾಗಿ ವೀಣಾ ಗುಡಿ ಕಾರ್ಯ ನಿರ್ವಹಿಸಿದ್ದಾರೆ. 5ನೇ ಅಧ್ಯಕ್ಷರಾಗಿ ಪರಶುರಾಮ ಖಂಡೂನವರ ಅವಿರೋಧ ಆಯ್ಕೆಯಾದರು. ಕಾಂಗ್ರೆಸ್ ಹೈಕಮಾಂಡ್ ಅವಧಿ ಹಂಚಿಕೆಯ ಸರ್ವಸಮ್ಮತ ನಿರ್ಣಯದಂತೆ ಎಲ್ಲ ಸದಸ್ಯರೂ ಸಹಕರಿಸಿದ್ದಲ್ಲದೆ, ಐವರು ಅಧ್ಯಕ್ಷರ ಆಯ್ಕೆ ನಿರಾಯಾಸವಾಗಿ ಅವಿರೋಧವಾಗಿಯೇ ನಡೆದಿದೆ. ಇದೇ ಅವಧಿಯಲ್ಲಿ ರಾಧಿಕಾ ದೇಶಪಾಂಡೆ ಅವರು ಮುಂದಿನ ಅಧ್ಯಕ್ಷರಾಗುವರು ಎಂಬ ಚರ್ಚೆಯೂ ಇದೆ. ಹೈಕಮಾಂಡ್‌ ಹಿರಿಯರ ಸಮ್ಮುಖದಲ್ಲಿ ಮೊದಲೇ ಅವಧಿ ಹಂಚಿಕೆ ಮಾಡಿದೆ ಎಂದು ತಿಳಿದಿದೆ.