ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಲು, ಬೆಳವಣಿಗೆ ಕಾಣಲು ಶಿಕ್ಷಕರ ಶ್ರಮದ ಜೊತೆಗೆ ಪೋಷಕರ ಸಹಕಾರವು ಅತಿಮುಖ್ಯವಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.ಸಮೀಪದ ಮಠದದೊಡ್ಡಿಯಲ್ಲಿ ಜಿಲ್ಲಾ ಪಂಚಾಯ್ತಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಚೇರಿ ಮದ್ದೂರು ವತಿಯಿಂದ ಆಯೋಜಿಸಿದ್ದ ಚಿಕ್ಕರಸಿನಕೆರೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಂದು ಮಕ್ಕಳಲ್ಲಿ ಹಲವು ಪ್ರತಿಭೆಗಳಿವೆ. ಅವುಗಳನ್ನು ಬೆಳಕಿಗೆ ತರುವಲ್ಲಿ ತಂದೆ-ತಾಯಿ ಜೊತೆಗೆ ಶಿಕ್ಷಕರು ಕೈ ಜೋಡಿಸಿದಾಗ ಮಾತ್ರ ಮಕ್ಕಳ ಪ್ರತಿಭೆ ಅನಾವರಣಗೊಳ್ಳುತ್ತದೆ. ಮಕ್ಕಳನ್ನು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳುವಂತೆ ಇಬ್ಬರು ಸಹಕಾರ ನೀಡುವುದು ಅಗತ್ಯ ಎಂದು ಸಲಹೆ ನೀಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಧನಂಜಯ್ ಮಾತನಾಡಿ, ಮಕ್ಕಳಲ್ಲಿನ ಪ್ರತಿಭೆಗಳು ಕಾರಂಜಿಯಂತಾಗಲು ವಿವಿಧ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗುತ್ತದೆ. ಮಕ್ಕಳಿಗೆ ಅಗತ್ಯ ತಯಾರಿಯನ್ನು ಸರ್ಕಾರ ಮಾಡುತ್ತಿದೆ. ಮಕ್ಕಳು ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರ ಹಾಕಲು ಪ್ರತಿಭಾ ಕಾರಂಜಿಯಂತಹ ವೇದಿಕೆಯನ್ನು ಬಳಸಿಕೊಳ್ಳಬೇಕು ಎಂದರು.
ಶಿಕ್ಷಣ ಇಲಾಖೆ ನಡೆಸುವ ಕಾರ್ಯಕ್ರಮಗಳಲ್ಲಿ ಮಕ್ಕಳು ಭಾಗವಹಿಸಿದರೆ ಬುದ್ಧಿಶಕ್ತಿ ಹೆಚ್ಚಾಗುತ್ತದೆ. ಸಾಹಿತ್ಯ, ಸಂಸ್ಕೃತಿಯು ಮೇಲೈಸಲು ಸಾಧ್ಯವಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಶ್ರೀಹರಿಹರೇಶ್ವರ ಕೂಡಲ ಸಂಗಮ ಶಿವ ಕ್ಷೇತ್ರ ಮಠದ ಮಠಾಧಿಪತಿ ದೊಡ್ಡ ಸಂಗೇ ಒಡೆಯರ್ ಸಾನಿಧ್ಯ ವಹಿಸಿದ್ದರು. ಈ ವೇಳೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ರಾಜೇಶ್ವರಿ, ಜಿಪಂ ಮಾಜಿ ಸದಸ್ಯ ಎ.ಎಸ್.ರಾಜೀವ್, ಎಸ್ ಡಿಎಂಸಿ ಅಧ್ಯಕ್ಷ ನಂಜುಂಡ, ಗ್ರಾಪಂ ಅಧ್ಯಕ್ಷ ಶಿವನಂಜು, ಮುಖಂಡರಾದ ಅಜ್ಜಹಳ್ಳಿ ಮನು, ಶಿವಲಿಂಗ, ಮಠದದೊಡ್ಡಿ ವೀರೇಂದ್ರ, ಮಧು ಕುಮಾರ್ ಸೇರಿದಂತೆ ಹಲವರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))