ಸಂತ ಅಂತೋನಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಶಾಲಾವರಣದಲ್ಲಿ ಮಕ್ಕಳ ಕವಾಯತ್‌ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ವ್ಯಕ್ತಿತ್ವ ನಿರ್ಮಾಣದಲ್ಲಿ ಶಾಲೆ ಮತ್ತು ಶಿಕ್ಷಕರ ಜವಾಬ್ದಾರಿ ಬಹುದೊಡ್ಡದಿದ್ದು, ಕೇವಲ ಒಂದು ದಿನ, ಒಂದು ವರ್ಷ, ಸಾವಿರಾರು ದಿನಗಳಲ್ಲಿ ನಡೆಯುವ ಕಾರ್ಯವಲ್ಲ. ನಿರಂತರವಾಗಿ ನಡೆಯುವ ಕಾರ್ಯವಾಗಿದೆ. ಪೋಷಕರು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ವಾತಾವರಣವನ್ನು ತಮ್ಮ ಕುಟುಂಬಗಳಲ್ಲಿ ಒದಗಿಸಿದಲ್ಲಿ ಮಾತ್ರ ವ್ಯಕ್ತಿತ್ವ ವಿಕಸನಗೊಳ್ಳಲು ಸಾಧ್ಯ ಎಂದು ಸುಂಟಿಕೊಪ್ಪ ಸಂತ ಅಂತೋನಿ ದೇವಾಲಯದ ಧರ್ಮಗುರು ವಂ.ಗುರುಗಳಾದ ವಿಜಯಕುಮಾರ್ ಹೇಳಿದರು.ಸಂತ ಅಂತೋನಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಶಾಲಾವರಣದಲ್ಲಿ ಮಕ್ಕಳ ಕವಾಯತ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ನೆರವೇರಿತು.ಪೋಷಕರು ಮಕ್ಕಳನ್ನು ಒಮ್ಮೆ ಶಾಲೆಗೆ ಸೇರಿಸಿ ಬಿಟ್ಟರೆ ತಮ್ಮ ಜವಬ್ಧಾರಿ ಮುಗಿಯಿತು ಎಂಬ ಭಾವನೆಯನ್ನು ಹೊಂದಿರಬಾರದು. ಬದಲಾಗಿ ಮಕ್ಕಳ ಸರ್ವೋತೋಮುಖ ಬೆಳವಣಿಗೆಗೆ ಶಾಲೆ ಪೋಷಕರು ಮತ್ತು ಶಿಕ್ಷಕರ ಪಾತ್ರ ಬಹಳ ಮಹತ್ವದೆಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಮಾತನಾಡಿ, ತಾವು ಈ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದು ಈ ಶಾಲೆಯಲ್ಲಿ ನೀಡಿದ ಶಿಕ್ಷಣವು ತನ್ನನು ಸುಂಟಿಕೊಪ್ಪದ ಪ್ರಥಮ ಪ್ರಜೆಯನ್ನಾಗಿ ರೂಪಿಸಿದೆ. ಇತ್ತೀಚಿನ ವರ್ಷಗಳಲ್ಲಿ ಖಾಸಗಿ ಶಾಲೆಯ ವ್ಯಾಮೋಹದಿಂದ ಸರಕಾರಿ ಹಾಗೂ ಅನುದಾನಿತ ಶಾಲೆಗಳು ಮುಚ್ಚುವ ಸ್ಥಿತಿಗೆ ಬಂದಿದೆ ಎಂದು ಅವರು ಹೇಳಿದರು. ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ ಮಾತನಾಡಿ, ಸಂತ ಅಂತೋನಿ ಶಾಲೆಯು ತನ್ನ ಅತ್ಯುತ್ತಮ ಶಿಕ್ಷಣ ನೀಡುವಿಕೆಗೆ ಹೆಸರಾಗಿದೆ. ಇಲ್ಲಿ ಕಲಿತ ಮಕ್ಕಳು ವಿಶ್ವದ್ಯಂತ ಅತ್ಯುತ್ತಮ ಜೀವನವನ್ನು ರೂಪಿಸಿಕೊಂಡಿರುವುದನ್ನು ನಾನು ನೋಡಿದ್ದೇನೆ. ದುರಾದೃಷ್ಟವಶಾತ್ ಎಲ್ಲಾ ಖಾಸಗಿ ಶಾಲೆಗಳಲ್ಲಿ ಪ್ರವೇಶಾವಕಾಶ ದೊರೆಯದ ಮಕ್ಕಳು ಸರಕಾರಿ ಶಾಲೆಗಳಿಗೆ ಬರುವ ಪ್ರವೃತ್ತಿಯನ್ನು ನಾವು ನೋಡುತ್ತಿದ್ದೇವೆ. ಸಿಬ್ಬಂದಿ ಕೊರತೆ ಖಾಯಂ ಶಿಕ್ಷಕರ ನೇಮಕಾತಿ ಕೊರತೆ ಮೊದಲಾದ ಸಮಸ್ಯೆಗಳ ನಡುವೆಯೂ ಸಂತ ಅಂತೋನಿ ಶಾಲೆಯು ತನ್ನ ಅತ್ಯುತ್ತಮ ಶಿಕ್ಷಣವನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು. ಶಾಲಾ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಅರ್ಸುಲಾಯ್ನ್ ಫ್ರಾನ್ಸಿಸ್ಕನ್ ವಿದ್ಯಾಸಂಸ್ಥೆ, ಕಾರ್ಯದರ್ಶಿಗಳಾದ ವಂ.ಭ.ಫಿಲೋಮೆನ್ ನೊರೋನ್ಹಾ ಅವರು ವಹಿಸಿ ಮಾತನಾಡಿದ ಶಾಲೆಯಲ್ಲಿ ಮೌಲ್ಯಧಾರಿತ ಶಿಕ್ಷಣಕ್ಕೆ ಮೊದಲ ಒತ್ತು ನೀಡುವ ಮೂಲಕ ಮಕ್ಕಳನ್ನು ಸಮಾಜದ ಬಹುದೊಡ್ಡ ಆಸ್ತಿಯನ್ನಾಗಿ ರೂಪಿಸಬೇಕು ಎಂದು ಅವರು ಹೇಳಿದರು. ಮುಖ್ಯ ಅತಿಥಿಗಳಾಗಿ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ ಹೆಚ್.ಯು.ರಫೀಕ್‌ಖಾನ್, ಕೊಡಗು ಜಿಲ್ಲಾ ಸ್ಕೌಟ್-ಗೈಡ್ ಜಿಲ್ಲಾ ಆಯುಕ್ತರಾದ ಬೇಬಿ ಮಾಥ್ಯು, ಶಾಲೆಯ ಹಳೇ ವಿದ್ಯಾರ್ಥಿ, ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಸಹಕಾರ ಸಂಘ ಅಧ್ಯಕ್ಷ ಜೆರ್ಮಿ ಡಿಸೋಜ, ಸುಂಟಿಕೊಪ್ಪ ಲಯನ್ಸ್ ಕ್ಲಬ್ ಅಧ್ಯಕ್ಷ ಸಿ.ಕೆ. ರಕ್ಷಿತ್ ಮಾತನಾಡಿದರು. ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಗೊಂಡಿರುವ ಶಿಕ್ಷಕಿ ಮುತ್ತಮ್ಮ ಹಾಗೂ ಉತ್ತಮ ಶಾಲಾ ಮುಖ್ಯೋಪಾಧ್ಯಾಯನಿ ಪ್ರಶಸ್ತಿಗೆ ಭಾಜನರಾದ ಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ಜೋವಿಟಾವಾಸ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಾರಂಭದ ವೇದಿಕೆಯಲ್ಲಿ ವಂ.ಭ. ಜೆಸ್ಸಿಂತ ಪಿರೇರಾ, ವಂ.ಭ. ಬಿಂದು ಎಲಿಜಬೆತ್, ಕೊಡಗು ಜಿಲ್ಲಾ ಬುಲ್ಸ್ ಬುಲ್ಸ್ ಆಯುಕ್ತ ಎಂ.ಡೈಸಿ, ಸಂತ ಅಂತೋನಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಎಂ.ಹೀನಾ, ಸಂತ ಅಂತೋನಿ ಹಿರಿಯ ಪ್ರಾಥಮಿಕ ಶಾಲೆಯ ವ್ಯವಸ್ಥಾಪಕರಾದ ವಂ.ಭ.ಜೆಸ್ಸಿ ವೇಗಸ್, ಶಾಲಾ ಮುಖ್ಯೋಪಾದ್ಯಾಯನಿ ಸಿಸ್ಟರ್ ಜೋವಿಟಾವಾಸ್, ಪ್ರೀತಿ ಜಾಯ್ಸ್ ಕುಟೀನಾ, ಯಿವಾಬೆನ್ಸಿಸ್ ಸೇರಿದಂತೆ ಶಿಕ್ಷಕರು ಇದ್ದರು.