ಪೋಷಕರು ಮಕ್ಕಳೊಂದಿಗೆ ಹೊಂದಾಣಿಕೆ ಜೀವನದಿಂದ ಸಾಮರಸ್ಯ ಬದುಕು ಸಾಧ್ಯ: ನ್ಯಾ.ಎಸ್.ಸಿ.ನಳಿನ

| Published : Nov 21 2025, 01:30 AM IST

ಪೋಷಕರು ಮಕ್ಕಳೊಂದಿಗೆ ಹೊಂದಾಣಿಕೆ ಜೀವನದಿಂದ ಸಾಮರಸ್ಯ ಬದುಕು ಸಾಧ್ಯ: ನ್ಯಾ.ಎಸ್.ಸಿ.ನಳಿನ
Share this Article
  • FB
  • TW
  • Linkdin
  • Email

ಸಾರಾಂಶ

ಪೋಷಕರಿಗೆ ವಯಸ್ಸಾದ ಕಾಲದಲ್ಲಿ ಮಕ್ಕಳು ಆಸ್ತಿ, ಆಸೆ, ವ್ಯಾಮೋಹ ಬಿಟ್ಟು ಅವರ ಯೋಗ ಕ್ಷೇಮ ನೋಡಿಕೊಳ್ಳುವ ಮೂಲಕ ಆದರ್ಶ ಮಕ್ಕಳಾಗಿ ಬಾಳ್ವೆ ನಡೆಸಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ಪೋಷಕರು ಮಕ್ಕಳೊಂದಿಗೆ ಪ್ರೀತಿ, ವಿಶ್ವಾಸ, ಹೊಂದಾಣಿಕೆ ಜೀವನ ನಡೆಸಿದರೆ ಸಾಮರಸ್ಯ ಬದುಕು ಸಾಧ್ಯವಾಗುತ್ತದೆ ಎಂದು ಜೆಎಂಎಫ್ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಸ್.ಸಿ.ನಳಿನ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ ಮತ್ತು ತಾಪಂ ಸಹಯೋಗದಲ್ಲಿ ನಡೆದ ಪೋಷಕರು, ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾರ್ಯಕ್ರಮಗಳ ಕುರಿತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ವೃದ್ಧಾಪ್ಯ ಜೀವನದಲ್ಲಿ ನಮ್ಮ ಮಕ್ಕಳು ಊರುಗೋಲಾಗುತ್ತಾರೆ ಎಂಬ ಭಾವನೆಯಿಂದ ತಂದೆ ತಾಯಿಗಳು ತಮ್ಮ ಯೋಗ ಕ್ಷೇಮವನ್ನು ಮರೆತು ಮಕ್ಕಳ ಬೆಳವಣಿಗೆಗೆ ಸಹಕಾರ ನೀಡುತ್ತಾರೆ. ಆದರೆ, ತಾವೇ ಸಾಕಿ, ಸಲುಹಿದ ಮಕ್ಕಳಿಂದ ಇಂದು ಶೋಷಣೆಗೆ ಒಳಗಾಗುತ್ತಿರುವುದು ವಿಷಾದನೀಯ ಎಂದರು.

ಪೋಷಕರಿಗೆ ವಯಸ್ಸಾದ ಕಾಲದಲ್ಲಿ ಮಕ್ಕಳು ಆಸ್ತಿ, ಆಸೆ, ವ್ಯಾಮೋಹ ಬಿಟ್ಟು ಅವರ ಯೋಗ ಕ್ಷೇಮ ನೋಡಿಕೊಳ್ಳುವ ಮೂಲಕ ಆದರ್ಶ ಮಕ್ಕಳಾಗಿ ಬಾಳ್ವೆ ನಡೆಸಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಎಸ್. ಹರಿಣಿ ಮಾತನಾಡಿ, ಪೋಷಕರು ಮತ್ತು ಹಿರಿಯ ನಾಗರಿಕರು ತಮ್ಮ ರಕ್ಷಣೆಗಾಗಿ ಸರ್ಕಾರ ಜಾರಿಗೆ ತಂದಿರುವ ಕಾನೂನು ಕಾಯ್ದೆಗಳ ಮಾಹಿತಿ ಪಡೆದುಕೊಳ್ಳಬೇಕು, ಉಚಿತ ಕಾನೂನು ಸೇವಾ ಸಮಿತಿ ನೆರವು ಪಡೆದುಕೊಳ್ಳುವ ಮೂಲಕ ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಿರಿಯ ವಕೀಲ ಎಚ್.ಮಾದೇಗೌಡ ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಕಲ್ಯಾಣ ಕಾರ್ಯಕ್ರಮಗಳ ಕುರಿತು ಸಂಪನ್ಮೂಲ ಭಾಷಣ ಮಾಡಿದರು. ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಪಂ ಇಒ ರಾಮಲಿಂಗಯ್ಯ, ವಕೀಲರ ಸಂಘದ ಅಧ್ಯಕ್ಷ ಎಂ.ಎನ್.ಶಿವಣ್ಣ, ಕಾರ್ಯದರ್ಶಿ ಎಂ.ಜೆ.ಸುಮಂತ್ ಭಾಗವಹಿಸಿದ್ದರು.