ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಮಕ್ಕಳನ್ನು ಸುಸಂಸ್ಕೃತರನ್ನಾಗಿ, ಸರಿಯಾದ ದಾರಿಯಲ್ಲಿ ತರಲು ಶಿಕ್ಷಕರ ಜೊತೆಯಲ್ಲಿ ತಂದೆ ತಾಯಿಗಳ ಜವಾಬ್ದಾರಿಯು ಹೆಚ್ಚಾಗಿದೆ ಎಂದು ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ತಿಳಿಸಿದರು.ಪಟ್ಟಣದ ಎಂ.ಎಚ್.ಚೆನ್ನೇಗೌಡ ವಿದ್ಯಾನಿಲಯ, ಡಾ.ಎಚ್.ಕೆ.ಮರಿಯಪ್ಪ ಕಾನ್ವೆಂಟ್, ಡಾ.ಶಾಂತ ಮರಿಯಪ್ಪ ಪಬ್ಲಿಕ್ ಹೈಸ್ಕೂಲಿನ ಸಭಾಂಗಣದಲ್ಲಿ ನಡೆದ ಮಕ್ಕಳ ಅಕ್ಷರಾಭ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಭಾರತೀಯ ಸನಾತನ ಧರ್ಮದ ಸಂಪ್ರದಾಯವನ್ನು ಸಂಸ್ಥೆ ಪಾಲಿಸಿಕೊಂಡು ಬರುತ್ತಿದೆ. ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಶಾಸ್ತ್ರೋಕ್ತವಾಗಿ ಕಲಿಸುವ ಮೂಲಕ ಅವರ ವಿದ್ಯಾಭ್ಯಾಸಕ್ಕೆ ಮುನ್ನುಡಿ ಹಾಕಿದೆ. ಪ್ರತಿಯೊಬ್ಬ ಮಕ್ಕಳಿಗೂ ಕನ್ನಡ ಗಣಿತ ಇತ್ಯಾದಿ ವಿಷಯಗಳಲ್ಲಿ ಭದ್ರವಾದ ಅಡಿಪಾಯ ಅತ್ಯಂತ ಅವಶ್ಯಕವಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಎಂ.ಎಚ್.ಚನ್ನೇಗೌಡ ವಿದ್ಯಾ ಸಂಸ್ಥೆ ಅಧ್ಯಕ್ಷ ಸ್ವರೂಪ್ ಚಂದ್ ಮಾತನಾಡಿ, ಹಿಂದೂ ಸಂಪ್ರದಾಯದಂತೆ ಅಕ್ಷರಾಭ್ಯಾಸ ಮಾಡಿಸುವ ಮೂಲಕ ಮಕ್ಕಳಿಗೆ ಉತ್ತಮ ಜ್ಞಾನ ನೀಡುವುದು ತಂದೆ-ತಾಯಿ ಹಾಗೂ ಗುರುಗಳ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸಂಸ್ಥೆ ಸ್ವಾಮೀಜಿಗಳ ಸಮ್ಮುಖದಲ್ಲಿ ನೆರವೇರುತ್ತಿರುವುದು ನಮ್ಮೆಲ್ಲರ ಭಾಗ್ಯ ಎಂದರು.
ಮದ್ದೂರು ಕಾಶಿ ವಿಶ್ವನಾಥ ದೇವಾಲಯದ ಪುರೋಹಿತರಾದ ಶ್ರೀರಾಘವೇಂದ್ರರವರು ಅತ್ಯಂತ ಅರ್ಥಪೂರ್ಣವಾಗಿ ಅಕ್ಷರಾಭ್ಯಾಸ ಕಾರ್ಯಕ್ರಮ ನೆರವೇರಿಸಿಕೊಟ್ಟರು. ಹಲವಾರು ಪೋಷಕರು ತಮ್ಮ ಮಕ್ಕಳನ್ನು ತೊಡೆ ಮೇಲೆ ಕೂರಿಸಿಕೊಂಡು ಶ್ರೀಕಾರ, ಶ್ರೀಕಾರಗಳನ್ನು ಬರೆದು, ವರ್ಣಮಾಲೆಯ ಅಕ್ಷರಗಳ ಮೂಲಕ ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು.ಕಾರ್ಯಕ್ರಮದಲ್ಲಿ ಸಂಸ್ಥೆ ಕಾರ್ಯದರ್ಶಿ ಸಿ.ಅಪೂರ್ವಚಂದ್ರ, ಪುರಸಭೆ ಸದಸ್ಯರಾದ ಪ್ರಮೀಳ, ಅವ್ವೇರಹಳ್ಳಿ ಅಂಗ ಸಂಸ್ಥೆ ಕಾರ್ಯದರ್ಶಿ ಎಚ್.ಪಿ.ಹರೀಶ್, ಮುಖ್ಯ ಶಿಕ್ಷಕ ಚನ್ನಪ್ಪ, ಎಚ್.ಕೆ.ವೀರಣ್ಣಗೌಡ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲೆ ನಂದಿನಿ, ಮರಿಯಪ್ಪ ಕಾನ್ವೆಂಟ್ ನ ಮುಖ್ಯ ಶಿಕ್ಷಕ ಕೆ.ಎನ್.ವರದರಾಜು, ಆಡಳಿತ ಅಧಿಕಾರಿ ಯು.ಎಸ್. ರವಿ, ಬೋಧಕ ಬೋಧಕೇತರರು, ವಿದ್ಯಾರ್ಥಿಗಳು ಹಾಜರಿದ್ದರು.