ಅರಸೀಕೆರೆಯಲ್ಲಿ ಸರ್ಕಾರಿ ಶಾಲೆಗಳತ್ತ ಮುಖ ಮಾಡಿರುವ ಪೋಷಕರು

| Published : May 23 2024, 01:05 AM IST

ಅರಸೀಕೆರೆಯಲ್ಲಿ ಸರ್ಕಾರಿ ಶಾಲೆಗಳತ್ತ ಮುಖ ಮಾಡಿರುವ ಪೋಷಕರು
Share this Article
  • FB
  • TW
  • Linkdin
  • Email

ಸಾರಾಂಶ

ಶೈಕ್ಷಣಿಕ ವರ್ಷ ಇದೇ ತಿಂಗಳ 31 ರಿಂದ ಪ್ರಾರಂಭವಾಗಲಿದೆ. ಬೇಸಿಗೆಯ ರಜೆ ಗುಂಗಿನಿಂದ ಹೊರ ಬಂದಿರುವ ಮಕ್ಕಳನ್ನು ಮುಂದಿನ ಶಿಕ್ಷಣಕ್ಕಾಗಿ ಬೇರೆ ಶಾಲೆಗಳಿಗೆ ದಾಖಲಿಸುವ ಸಂಭ್ರಮದಲ್ಲಿ ಪೋಷಕರು ಇದ್ದಾರೆ. ಆರ್ಥಿಕ ಹೊರೆ ಇಲ್ಲದೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡಿಸಲು ಅವಕಾಶ ಇರುವುದನ್ನು ಅರಸೀಕೆರೆಯಲ್ಲಿ ಪೋಷಕರು ಮನಗಂಡು ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ್ದಾರೆ.

ಸರ್ಕಾರಿ ಶಾಲೆಯಲ್ಲೇ ಇಂಗ್ಲಿಷ್‌ ಮಾಧ್ಯಮ ಆರಂಭ । ಉಚಿತ ಪಠ್ಯ ಪುಸ್ತಕ, ಪೌಷ್ಟಿಕ ಆಹಾರ । ಮಕ್ಕಳ ಸರ್ವತೋಮುಖ ಬೆಳವಣಿಗೆ

ಕನ್ನಡಪ್ರಭ ವಾರ್ತೆ ಅರಸೀಕೆರೆ

ಶೈಕ್ಷಣಿಕ ವರ್ಷ ಇದೇ ತಿಂಗಳ 31 ರಿಂದ ಪ್ರಾರಂಭವಾಗಲಿದೆ. ಬೇಸಿಗೆಯ ರಜೆ ಗುಂಗಿನಿಂದ ಹೊರ ಬಂದಿರುವ ಮಕ್ಕಳನ್ನು ಮುಂದಿನ ಶಿಕ್ಷಣಕ್ಕಾಗಿ ಬೇರೆ ಶಾಲೆಗಳಿಗೆ ದಾಖಲಿಸುವ ಸಂಭ್ರಮದಲ್ಲಿ ಪೋಷಕರು ಇದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಉಚಿತ ಪಠ್ಯಪುಸ್ತಕ ಸಮವಸ್ತ್ರ ಮತ್ತು ಪೌಷ್ಟಿಕ ಆಹಾರ, ಪ್ರತಿಭಾವಂತ ಶಿಕ್ಷಕರು ಮತ್ತು ಕ್ರೀಡಾ ಚಟುವಟಿಕೆಗಳಿಗೆ ಅವಕಾಶ ಮತ್ತು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕ ಅವಕಾಶ ಕಲ್ಪಿಸಿಕೊಡುವ ಪ್ರತಿಭಾವಂತ ಶಿಕ್ಷಕರನ್ನು ಇಲಾಖೆ ಒದಗಿಸಿದೆ.

ಇಂದಿನ ದಿನಗಳಲ್ಲಿ ಇಂಗ್ಲೀಷ್ ಜ್ಞಾನ ಬಹಳ ಅಗತ್ಯ ಎಂಬುದನ್ನು ಪೋಷಕರು ಅರಿತು ಖಾಸಗಿ ಶಾಲೆಗಳತ್ತ ಹೆಜ್ಜೆ ಹಾಕುತ್ತಿದ್ದರು. ಇದನ್ನು ಮನಗಂಡ ಸರ್ಕಾರ ತನ್ನ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಪ್ರಾರಂಭಿಸಿರುವುದರಿಂದ ಇಂಗ್ಲಿಷ್ ವ್ಯಾಮೋಹಕ್ಕೂ ಇಲ್ಲಿ ಅವಕಾಶವಿದೆ. ಆರ್ಥಿಕ ಹೊರೆ ಇಲ್ಲದೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡಿಸಲು ಅವಕಾಶ ಇರುವುದನ್ನು ಪೋಷಕರು ಮನಗಂಡು ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ್ದಾರೆ.

ಅರಸೀಕೆರೆ ನಗರದ ಹೃದಯ ಭಾಗದಲ್ಲಿರುವ ಬಿ.ಎಚ್. ರಸ್ತೆಯಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ರಾಮಣ್ಣ ಶಾಲೆ ಕಳೆದ ಐದು ವರ್ಷದ ಹಿಂದೆಯೇ ಶತಮಾನ ಕಂಡಿದ್ದು, ಶತಮಾನೋತ್ಸವ ಸಂಭ್ರಮವನ್ನು ವಿಜೃಂಭಣೆಯಿಂದಲೇ ಮಾಡಲಾಗಿದೆ. ಪ್ರತಿಭಾವಂತ ಶಿಕ್ಷಕರು ಹಾಗೂ ಶಾಲಾ ಪರಿಸರ ಮತ್ತು ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ ನಗರ ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳನ್ನು ಪೋಷಕರು ಈ ಶಾಲೆಯತ್ತ ಮುಖ ಮಾಡಿಸಿದ್ದಾರೆ. ಶಾಲೆ ಪ್ರಾರಂಭವಾಗುವ ಮುನ್ನವೇ ತಮ್ಮ ಮಕ್ಕಳನ್ನು ಕರೆತಂದು ದಾಖಲಿಸಲು ಪ್ರಾರಂಭಿಸುತ್ತಿದ್ದಾರೆ. ಇದರಿಂದಾಗಿ ಈ ಶಾಲೆಯ ಶಿಕ್ಷಕರ ಜವಾಬ್ದಾರಿ ಇನ್ನೂ ಹೆಚ್ಚಿದೆ.

ತಾಲೂಕಿನಲ್ಲಿ ಅನೇಕ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗೆ ಕಮ್ಮಿ ಇಲ್ಲದಂತೆ ಕಾರ್ಯನಿರ್ವಹಿಸುತ್ತಿವೆ. ಹಿರಿಯೂರಿನಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಜನ್ನಾವರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಇನ್ನು ಹಲವು ಶಾಲೆಗಳು ಮಕ್ಕಳಿಗೆ ಇಂಗ್ಲಿಷ್ ಕಲಿಸುವಲ್ಲಿ ತಮ್ಮ ಛಾಪನ್ನು ಮೂಡಿಸುತ್ತಿವೆ.

ತಾಲೂಕಿನಲ್ಲಿ ಶಿಕ್ಷಕ ಸಮೂಹ ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ನೀಡುತ್ತಿರುವ ಪ್ರೋತ್ಸಾಹ ಕಾರಣವಾಗಿದೆ. ಇವರೊಟ್ಟಿಗೆ ಕ್ಷೇತ್ರ ಸಮನ್ವಯಾಧಿಕಾರಿ ಮತ್ತು ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕರು ಸಹಕಾರ ನೀಡಿರುವುದು ಹಾಗೂ ಕಾಲ ಕಾಲಕ್ಕೆ ಉಪನಿರ್ದೇಶಕರ ಮಾರ್ಗದರ್ಶನ ಮತ್ತು ಡಯಟ್ ಪ್ರಾಂಶುಪಾಲರು, ಉಪನ್ಯಾಸಕರ ಅವಲೋಕನ ಪ್ರಮುಖ ಕಾರಣ ಎನ್ನಲಾಗಿದೆ. ಗುಣಮಟ್ಟದ ಶಿಕ್ಷಣದಿಂದ ಮಾತ್ರ ಕನ್ನಡ ಶಾಲೆಗಳ ಉಳಿವು ಎಂಬುದನ್ನು ಶಿಕ್ಷಣ ಸಮೂಹ ಅರಿತಿದೆ.