ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಪಾಲಕರೂ ಕೈಜೋಡಿಸಿ

| Published : Feb 25 2024, 01:46 AM IST

ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಪಾಲಕರೂ ಕೈಜೋಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳಿಗೆ ಅಗತ್ಯ ವಸ್ತು ನೀಡಿದರೆ ಪಾಲಕರ ಜವಾಬ್ದಾರಿ ಮುಗಿಯುವದಿಲ್ಲ. ಹಾಗಾಗಿ ೧೬ ರಿಂದ ೨೦ವಯೋಮಾನ ಮಕ್ಕಳ ಪಾಲಕರು ತಮ್ಮ ದೈನಂದಿನ ಕೆಲಸದೊಂದಿಗೆ ಮಕ್ಕಳ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಬಿಡುವಿನ ಸಮಯದಲ್ಲಿ ಮಕ್ಕಳೊಂದಿಗೆ ಕಾಲ ಕಳೆಯಬೇಕು

ಹಾವೇರಿ: ಪೊಕ್ಸೋ ಪ್ರಕರಣಗಳ ತಡೆಗೆ ಅರಿವು ಮೂಡಿಸುವುದು ಅಗತ್ಯವಾಗಿದೆ. ಮಕ್ಕಳ ಹಕ್ಕುಗಳ ರಕ್ಷಣೆ ಜತೆಗೆ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ತಡೆಗೆ ಅಧಿಕಾರಿಗಳ ಜತೆಗೆ ಪಾಲಕರು ಕೈಜೋಡಿಸಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುಟ್ಟರಾಜು ಹೇಳಿದರು.

ನಗರದ ನಿವೃತ್ತ ಸರ್ಕಾರಿ ನೌಕರರ ಭವನದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಪೋಕ್ಸೋ ಕಾಯ್ದೆ, ಬಾಲಕಾರ್ಮಿಕ ಹಾಗೂ ಭಿಕ್ಷಾಚನೆ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಕುರಿತು ಎಸ್.ಜೆ.ಪಿ.ಯು ಪೊಲೀಸ್ ಸಿಬ್ಬಂದಿಗಳಿಗೆ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಆಯೋಜಿಸಲಾದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ಹಾಗೂ ಬಾಲಕಾರ್ಮಿಕ ಪದ್ಧತಿ ನಿಷೇಧ ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಪ್ರತಿದಿನ ಕಾರ್ಯಕ್ರಮಗಳ ಆಯೋಜನೆ ಮೂಲಕ ಅರಿವು ಮೂಡಿಸಿದರೂ ಸಹ ಪೊಕ್ಸೋ ಪ್ರಕರಣಗಳು ಹತೋಟಿಗೆ ಬರುತ್ತಿಲ್ಲ. ಮಕ್ಕಳಿಗೆ ಅಗತ್ಯ ವಸ್ತು ನೀಡಿದರೆ ಪಾಲಕರ ಜವಾಬ್ದಾರಿ ಮುಗಿಯುವದಿಲ್ಲ. ಹಾಗಾಗಿ ೧೬ ರಿಂದ ೨೦ವಯೋಮಾನ ಮಕ್ಕಳ ಪಾಲಕರು ತಮ್ಮ ದೈನಂದಿನ ಕೆಲಸದೊಂದಿಗೆ ಮಕ್ಕಳ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಬಿಡುವಿನ ಸಮಯದಲ್ಲಿ ಮಕ್ಕಳೊಂದಿಗೆ ಕಾಲ ಕಳೆಯಬೇಕು. ಶಾಲಾ ಶಿಕ್ಷಕರೊಂದಿಗೆ ಸಂಪರ್ಕದಲ್ಲಿದ್ದು, ಮಕ್ಕಳ ಅಂಕಗಳ ಬಗ್ಗೆ ಮಾತ್ರ ವಿಚಾರಿಸದೇ ಅವರ ನಡವಳಿಕೆ ಬಗ್ಗೆ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಮೊಬೈಲ್ ಬಳಕೆಯಿಂದ ಮಕ್ಕಳ ಮೇಲೆ ಅನೇಕ ದುಷ್ಪರಿಣಾಮಗಳು ಉಂಟಾಗುತ್ತಿವೆ. ಪೋಕ್ಸೋ ಪ್ರಕರಣಗಳು ಮೊಬೈಲ್ ಪರಿಚಯಸ್ಥರಿಂದ ಹಾಗೂ ಸಂಬಂಧಿಕರಿಂದ ನಡೆಯುತ್ತಿರುವುದು ವಿಷಾದಕರ ಸಂಗತಿಯಾಗಿದೆ. ಮಕ್ಕಳಿಗೆ ಸರಿಯಾದ ತಿಳಿವಳಿಕೆ ನೀಡುವ ಕೆಲಸ ಮನೆಯಿಂದ ಆರಂಭವಾಗಬೇಕು. ಮಕ್ಕಳ ಉತ್ತಮ ಭವಿಷ್ಯ ರೂಪಿಸುವಲ್ಲಿ ಪಾಲಕರ ಪಾತ್ರ ಬಹಳ ಪ್ರಮುಖವಾಗಿದೆ ಎಂದರು.

ಜಿಲ್ಲೆಯಲ್ಲಿ ಜನವರಿ ೨೦೨೩ರಿಂದ ಈವರೆಗೆ ಪೋಕ್ಸೋ ಪ್ರಕರಣದ ಸಂತ್ರಸ್ಥರಿಗೆ ₹೬೯ ಲಕ್ಷ ಪರಿಹಾರ ಮೊತ್ತ ನೀಡಲಾಗಿದೆ. ಅಪರಾಧ ಪ್ರಕರಣಗಳಲ್ಲಿ ಕಾನೂನಿನಲ್ಲಿ ಶಿಕ್ಷೆಯಾಗುತ್ತದೆ. ಆದರೆ ಅಪರಾಧ ಪ್ರಕರಣಗಳು ನಡೆಯದಂತೆ ಅರಿವು ಮೂಡಿಸುವುದು ಇಂದಿನ ಅಗತ್ಯವಾಗಿದೆ. ಪೋಕ್ಸೋ ಪ್ರಕರಣಗಳ ತಡೆಗೆ ಎಲ್ಲರೂ ಶ್ರಮಿಸೋಣ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಗೋಪಾಲ ಮಾತನಾಡಿ, ನಾವು ಅಧಿಕಾರಿಗಳಾಗುವ ಮೊದಲು ಒಬ್ಬ ಪಾಲಕರು ಎಂಬ ವಿಷಯ ತಿಳಿದುಕೊಳ್ಳಬೇಕು. ಸಾರ್ವಜನಿಕ ಕಳಕಳಿ, ಮಾನವೀಯ ಮೌಲ್ಯಗಳನ್ನು ಮನೆಯಿಂದ ಕಲಿಸುವ ಕೆಲಸವಾಗಬೇಕು ಎಂದರು.

ದೌರ್ಜನ್ಯ ಪ್ರಕರಣಗಳ ಮಕ್ಕಳೊಂದಿಗೆ ಸೌರ್ಜನ್ಯದಿಂದ ನಡೆದುಕೊಂಡು ಅವರಿಗೆ ಸಾಂತ್ವನ ಹೇಳುವ ಕೆಲಸವಾಗಬೇಕು. ಬಡತ ಹಾಗೂ ಅನಕ್ಷರತೆಯಿಂದ ಮಕ್ಕಳನ್ನು ದುಡಿಯಲಿಕ್ಕೆ ಹಚ್ಚುವ ಮೂಲಕ ಬಾಲ ಕಾರ್ಮಿಕರನ್ನು ಮಾಡಲಾಗುತ್ತಿದೆ. ಬಾಲ ಕಾರ್ಮಿಕ ನಿಷೇಧ ಕಾಯ್ದೆ ಬಗ್ಗೆ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ತಿಳಿವಳಿಕೆ ನೀಡುವ ಕಾರ್ಯವಾಗಬೇಕು. ಮಕ್ಕಳ ರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.

ಉಪನ್ಯಾಸಕರಾಗಿ ಭಾಗವಹಿಸಿದ ಯುನೆಸೆಫ್‌ನ ಹರೀಶ ಜೋಗಿ ಅವರು ಪೋಕ್ಸೋ ಕಾಯ್ದೆ, ಬಾಲಕಾರ್ಮಿಕ ಹಾಗೂ ಭಿಕ್ಷಾಚನೆ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಕುರಿತು ವಿವರವಾಗಿ ಮಾಹಿತಿ ನೀಡಿದರು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಸ್.ಎಚ್.ಮಜೀದ್, ಸರ್ಕಾರಿ ನಿವೃತ್ತ ನೌಕರ ಸಂಘದ ಮಹ್ಮದ ಹನೀಫ್ ಇತರರು ಉಪಸ್ಥಿತರಿದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನ್ನಪೂರ್ಣ ಸಂಗಳದ ಸ್ವಾಗತಿಸಿದರು. ಪ್ರವೀಣ ಗೊಡ್ಡೆಮ್ಮಿ ಕಾರ್ಯಕ್ರಮ ನಿರೂಪಿಸಿದರು.