ಪೋಷಕರು ತಮ್ಮ ಮಕ್ಕಳ ಕಲಿಕೆಯನ್ನು ಪ್ರತಿದಿನ ಮೇಲ್ವಿಚಾರಣೆ ಮಾಡುವುದರೊಂದಿಗೆ, ತಾವೂ ಶಿಕ್ಷಕರಾದಾಗ ಮಾತ್ರ ಉತ್ತಮ ಕಲಿಕೆ ನಿರೀಕ್ಷಿಸಬಹುದು ಎಂದು ಇಂಗ್ಲಿಷ್ ಭಾಷಾ ರಾಜ್ಯ ಸಂಪನ್ಮೂಲ ವ್ಯಕ್ತಿ ರೇವಣಸಿದ್ದಪ್ಪ ಕರೆನೀಡಿದರು.
ಕನ್ನಡಪ್ರಭ ವಾರ್ತೆ ಶಿರಾ
ಪೋಷಕರು ತಮ್ಮ ಮಕ್ಕಳ ಕಲಿಕೆಯನ್ನು ಪ್ರತಿದಿನ ಮೇಲ್ವಿಚಾರಣೆ ಮಾಡುವುದರೊಂದಿಗೆ, ತಾವೂ ಶಿಕ್ಷಕರಾದಾಗ ಮಾತ್ರ ಉತ್ತಮ ಕಲಿಕೆ ನಿರೀಕ್ಷಿಸಬಹುದು ಎಂದು ಇಂಗ್ಲಿಷ್ ಭಾಷಾ ರಾಜ್ಯ ಸಂಪನ್ಮೂಲ ವ್ಯಕ್ತಿ ರೇವಣಸಿದ್ದಪ್ಪ ಕರೆನೀಡಿದರು.ಅವರು ತಾಲೂಕಿನ ಗಾಣದಹುಣಸೆ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಹಮ್ಮಿಕೊಂಡಿದ್ದ ಪೋಷಕ ಶಿಕ್ಷಕರ ಸಭೆಯಲ್ಲಿ ಭಾಗವಹಿಸಿ ಇಂಗ್ಲಿಷ್ ಭಾಷಾ ಕಲಿಕೆಯಲ್ಲಿ ಪೋಷಕರ ಪಾತ್ರ ವಿಷಯ ಕುರಿತು ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಜಗತ್ತಿನಲ್ಲಿ ಇಂಗ್ಲಿಷ್ ಭಾಷೆಯಷ್ಟು ಸುಲಭದ ಭಾಷೆ ಬೇರೊಂದಿಲ್ಲ. ಶಿಕ್ಷಕರ ಹಾಗೂ ಪೋಷಕರ ತೊಡಗಿಸಿಕೊಳ್ಳುವಿಕೆ ಹಾಗೂ ಇಚ್ಛಾಶಕ್ತಿಯಿಂದ ರಾಜ್ಯದ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಪ್ರತಿದಿನವೂ ಇಂಗ್ಲಿಷ್ ಭಾಷೆಯಲ್ಲೇ ಮಾತನಾಡಲು ಸಾಧ್ಯ ಎಂದರು.
ಮಧುಗಿರಿ ಡಯಟ್ ನ ಉಪನ್ಯಾಸಕಿ ಅನ್ನಪೂರ್ಣ ಮಾತನಾಡಿ, ಶಾಲಾ ಶಿಕ್ಷಣ ಇಲಾಖೆ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಭಾಷೆಯನ್ನ ಕಲಿಸಲು ಆದೇಶ ಹೊರಡಿಸಿದೆ. ಈ ಶಾಲೆಯಲ್ಲಿ ಪ್ರಸಕ್ತ ವರ್ಷ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಪ್ರಾರಂಭವಾಗಿದೆ. ಮಕ್ಕಳು ಇಂಗ್ಲಿಷ್ ಭಾಷೆಯಲ್ಲಿ ಹಿಡಿತ ಸಾಧಿಸಿ, ಉನ್ನತ ಶಿಕ್ಷಣ ಪಡೆಯಲು ಪೋಷಕರು ಮನೆಗಳಲ್ಲಿ ಇಂಗ್ಲೀಷ್ ಭಾಷಾ ವಾತಾವರಣ ನಿರ್ಮಿಸಬೇಕು ಎಂದು ತಿಳಿಸಿದರು.ನೇರಲಗುಡ್ಡ ಕ್ಲಸ್ಟರ್ ಸಿ.ಆರ್.ಪಿ. ಚಂದ್ರಶೇಖರ್ ಮಾತನಾಡಿ, ಪೋಷಕ ಶಿಕ್ಷಕರ ಸಭೆಗಳು ಪ್ರತಿ ತಿಂಗಳು ನಡೆಯಲಿವೆ. ಈ ಸಭೆಗಳಲ್ಲಿ ಭಾಗವಹಿಸುವ ಮೂಲಕ ಶಿಕ್ಷಕರು ತಮ್ಮ ಮಕ್ಕಳ ಕಲಿಕಾ ಪ್ರಗತಿಯನ್ನು ವೀಕ್ಷಿಸಿ, ಕಲಿಕೆಯಲ್ಲಿ ಹಿಂದುಳಿದ ವಿಷಯದ ಶಿಕ್ಷಕರೊಂದಿಗೆ ಚರ್ಚಿಸಿ ಸುಧಾರಿಸಲು ಉತ್ತಮ ವೇದಿಕೆ ಎಂದರು.
ಮುಖ್ಯ ಶಿಕ್ಷಕ ನರಸಿಂಹಮೂರ್ತಿ ಮಾತನಾಡಿ, ಮಕ್ಕಳು ಉತ್ತಮವಾಗಿ ಕಲಿಯಲು ಶಿಕ್ಷಕರಷ್ಟೇ ಜವಾಬ್ದಾರಿಯನ್ನು ಪೋಷಕರು ತೆಗೆದುಕೊಳ್ಳಬೇಕು, ಕೇವಲ ಶಿಕ್ಷಕರ ಮೇಲೆ ಮಾತ್ರ ಅವಲಂಬಿತರಾದರೆ, ನಿರೀಕ್ಷಿತ ಕಲಿಕೆ ಉಂಟಾಗಲು ಕಷ್ಟಸಾಧ್ಯ ಎಂದರು.ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶಾಂತಕುಮಾರ್, ಉಪಾಧ್ಯಕ್ಷೆ ಸವಿತಾ, ಶಿಕ್ಷಕರಾದ ಆರ್.ತಿಪ್ಪೇಸ್ವಾಮಿ, ಎ.ಬಿ.ಶಿಲ್ಪ, ಟಿ.ಅಭಿಲಾಷ್, ಮುಖಂಡರಾದ ದೊಡ್ಡತಿಮ್ಮಯ್ಯ, ಮರಡಿ ರಂಗನಾಥ್, ಕಾಂತರಾಜು, ರಂಗರಾಜು, ಶಿವಣ್ಣ, ಕರಿಯಣ್ಣ, ಧನುಶ್ರೀ ಸೇರಿದಂತೆ ಎಸ್ ಡಿ ಎಂ ಸಿ ಸದಸ್ಯರು, ಪೋಷಕರು ಹಾಜರಿದ್ದರು.