ಶಾಲಾ ಅವಧಿಯಲ್ಲಿ ಮಕ್ಕಳನ್ನು ಮನೆಗೆಲಸಗಳಿಗೆ ಬಳಸಿಕೊಳ್ಳದೆ ಅವರನ್ನು ನಿತ್ಯ ಶಾಲೆಗೆ ಕಳುಹಿಸಬೇಕು.
ಕುಷ್ಟಗಿ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗೆ ಕೆಲ ದಿನಗಳು ಮಾತ್ರ ಉಳಿದಿದ್ದು, ಪಾಲಕರು ಮಕ್ಕಳಿಗೆ ಶೈಕ್ಷಣಿಕ ಅಭ್ಯಾಸ ಮಾಡಲು ಪ್ರೋತ್ಸಾಹ ಜತೆಗೆ ಸಹಕಾರ ನೀಡಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಜಗದೀಶಪ್ಪ ಎಂ.,ಹೇಳಿದರು.
ತಾಲೂಕಿನ ತಾವರಗೇರಾ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಪಾಲಕರೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿದರು.ಶಾಲಾ ಅವಧಿಯಲ್ಲಿ ಮಕ್ಕಳನ್ನು ಮನೆಗೆಲಸಗಳಿಗೆ ಬಳಸಿಕೊಳ್ಳದೆ ಅವರನ್ನು ನಿತ್ಯ ಶಾಲೆಗೆ ಕಳುಹಿಸಬೇಕು. ಶಾಲೆಯಲ್ಲಿ ಕಲಿತಿರುವ ವಿಷಯ ಕುರಿತು ಮಕ್ಕಳಿಂದ ಮಾಹಿತಿ ಪಡೆದುಕೊಂಡು ಮಕ್ಕಳ ಓದಿನ ಕುರಿತು ಶಿಕ್ಷಕರಿಂದ ಮಾಹಿತಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಸ್ಥಳದಲ್ಲಿದ್ದ ವಿದ್ಯಾರ್ಥಿಗಳಿಗೆ ತಮಗೆ ತಿಳಿಯದ ವಿಷಯ ಸಂಬಂಧಿಸಿದ ಶಿಕ್ಷಕರನ್ನು ಭೇಟಿಯಾಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಪರೀಕ್ಷೆಗಳು ತೀರಾ ಹತ್ತಿರ ಬಂದಿದ್ದು ಉತ್ತಮ ಅಭ್ಯಾಸ ಮಾಡುವ ಮೂಲಕ ಹೆಚ್ಚಿನ ಅಂಕಗಳಿಸಿ ಉತ್ತಮ ಸಾಧನೆ ಮಾಡಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಕೆಪಿಎಸ್ ಶಾಲೆಯ ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಇದ್ದರು.