ನೆಲಮಂಗಲ: ಮಕ್ಕಳ ಜ್ಞಾನಾರ್ಜನೆಗಾಗಿ ಉತ್ತಮ ಶಾಲೆ ಆಯ್ದುಕೊಳ್ಳುವ ಜೊತೆಗೆ ಮಕ್ಕಳು ಹಾದಿ ತಪ್ಪುವುದನ್ನು ತಪ್ಪಿಸಲು ಪೋಷಕರು ನಿಗಾವಹಿಸುವ ಅಗತ್ಯವಿದೆ ಎಂದು ಐಪಿಎಸ್ ಅಧಿಕಾರಿ ಎಂ.ಎನ್.ಅನುಚೇತ್ ಹೇಳಿದರು.

ನೆಲಮಂಗಲ: ಮಕ್ಕಳ ಜ್ಞಾನಾರ್ಜನೆಗಾಗಿ ಉತ್ತಮ ಶಾಲೆ ಆಯ್ದುಕೊಳ್ಳುವ ಜೊತೆಗೆ ಮಕ್ಕಳು ಹಾದಿ ತಪ್ಪುವುದನ್ನು ತಪ್ಪಿಸಲು ಪೋಷಕರು ನಿಗಾವಹಿಸುವ ಅಗತ್ಯವಿದೆ ಎಂದು ಐಪಿಎಸ್ ಅಧಿಕಾರಿ ಎಂ.ಎನ್.ಅನುಚೇತ್ ಹೇಳಿದರು.

ತಾಲೂಕಿನ ಕಂಬಯ್ಯನಪಾಳ್ಯದಲ್ಲಿರುವ ಹರ್ಷ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ “ಹರ್ಷ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವ”ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಮೊಬೈಲ್ ಗೀಳು ಹೆಚ್ಚಿದೆ. ಯಾವುದಕ್ಕೆ ಮೊಬೈಲ್ ಬಳಸಬೇಕಿದೆಯೋ ಅದಕ್ಕೂ ಮೀರಿದ ಬಳಸುತ್ತಿರುವ ಬಗ್ಗೆ ಪೋಷಕರು ಹೆಚ್ಚು ಗಮನಹರಿಸುವ ಮೂಲಕ ಡಿಜಿಟಲ್ ಅರೆಸ್ಟ್‌ ಮಕ್ಕಳು ಸೈಬರ್ ಕ್ರೈಮ್‌ಗೆ ಒಳಗಾಗುವ ಮೊದಲು ಎಚ್ಚರ ವಹಿಸಬೇಕಾದ ಅನಿವಾರ್ಯವಿದೆ ಎಂದರು.

ಮಕ್ಕಳ ವ್ಯಾಸಂಗಕ್ಕಾಗಿ ಆಯ್ದುಕೊಂಡಿರುವ ಹರ್ಷ ಶಿಕ್ಷಣ ಸಂಸ್ಥೆಯ ಶಾಲೆಗಳು ಉತ್ತಮ ಪರಿಸರದಲ್ಲಿದ್ದು ಇಲ್ಲಿನ ಶಿಕ್ಷಕರು ಮತ್ತು ಸಿಬ್ಬಂದಿ ಶ್ರಮದಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈಯಲು ಕಾರ್ಯೋನ್ಮಖರಾಗಿದ್ದು ಶಾಲಾ ಮಕ್ಕಳಿಗಾಗಿ ಅತ್ಯುತ್ತಮ ಅವಕಾಶಗಳನ್ನು ಕಲ್ಪಿಸುವ ಮೂಲಕ ವಿವಿಧ ಬಗೆಯ ಪಾರಿತೋಷಕದ ಜೊತೆಗೆ ಪದಕಗಳನ್ನು ಗಳಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.

ಹರ್ಷ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಎಸ್.ಶಿವಕುಮಾರ್ ಮಾತನಾಡಿ, ಹದಿಮೂರನೇ ವರ್ಷದ ಹೆಜ್ಜೆ ಗುರುತುಗಳಲ್ಲಿ ಸಂಸ್ಥೆಯಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಷ್ಠ ಸಾಧನೆ ಮಾಡಿದ್ದು ಈ ದಿನ ಅಂತಹವರನ್ನು ಗೌರವಿಸಿ ಸನ್ಮಾನಿಸಲು ಹೆಮ್ಮೆ ಎನ್ನಿಸಿದೆ ಎಂದರು.

ಈ ಹಂತದಲ್ಲಿ ಎಲ್‌ಕೆಜಿಯಿಂದ ಪಿಯು ವಿದ್ಯಾರ್ಥಿಗಳವರೆಗೂ ಸಾಧನಾರ್ಹ ಮಕ್ಕಳನ್ನು ವಿಶೇಷವಾಗಿ ಸನ್ಮಾನಿಸಿದರು.

ವಿಶಿಷ್ಠ ವೇದಿಕೆಯಲ್ಲಿ ಶಾಲಾ ಕಾಲೇಜು ಮಕ್ಕಳಿಂದ ವಿವಿಧ ಆಕರ್ಷಕ ನೃತ್ಯಗಳು ನೃತ್ಯರೂಪಕಗಳು ಪೋಷಕರು ಮತ್ತು ಮಕ್ಕಳಲ್ಲಿ ರಂಜನೆಯನ್ನಷ್ಟೇ ಅಲ್ಲ ಐತಿಹಾಸಿಕ ಸಾಂಸ್ಕೃತಿಕ ಪ್ರಜ್ಞೆಯನ್ನು ಮೂಡಿಸಿದವು. ಸಂಸ್ಥೆಯ ಸಹಕಾರ್ಯದರ್ಶಿ ಯಶಸ್‌ಶಿವಕುಮಾರ್ ಸಂಸ್ಥೆಯ ಯೋಜನೆಗಳನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷೆ ಗಿರಿಜಾಶಿವಕುಮಾರ್, ಕಾರ್ಯದರ್ಶಿ ಹರ್ಷಶಿವಕುಮಾರ್, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಪೂರ್ಣಿಮಾಶೇಖರ್, ಪೌಢಶಾಲೆ ಮುಖ್ಯಶಿಕ್ಷಕಿ ಬಿಂದುಶರ್ಮ, ಪಿಯು ಕಾಲೇಜಿನ ಪ್ರಾಂಶುಪಾಲರಾದ ಜಯಂತಿಕಾಮತ್, ಉಪಪ್ರಾಂಶುಪಾಲರಾದ ವೀಣಾ, ಪ್ರೀತಿ ಕೆ.ಚೌಧರಿ ಕ್ರಮವಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಾಗೂ ಪಿಯು ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು.

ಪೊಟೊ-22ಕೆಎನ್‌ಎಲ್‌ಎಮ್‌1-ನೆಲಮಂಗಲ ತಾಲೂಕಿನ ಕಂಬಯ್ಯನಪಾಳ್ಯದಲ್ಲಿರುವ ಹರ್ಷ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ “ಹರ್ಷ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವ”ವನ್ನು ಐಪಿಎಸ್ ಅಧಿಕಾರಿ ಎಂ.ಎನ್.ಅನುಚೇತ್ ಉದ್ಘಾಟಿಸಿದರು. ಹರ್ಷ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಎಸ್.ಶಿವಕುಮಾರ್‌, ಉಪಾಧ್ಯಕ್ಷೆ ಗಿರಿಜಾಶಿವಕುಮಾರ್, ಕಾರ್ಯದರ್ಶಿ ಹರ್ಷಶಿವಕುಮಾರ್ ಇತರರಿದ್ದರು.