ಸಾರಾಂಶ
ಅಳೇಹಳ್ಳಿ ಶಾಲೆಗೆ ಬೀಗ ಹಾಕಿ ಆಕ್ರೋಶ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಅಳೇಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗುರುವಾರ ಮಕ್ಕಳು ಶಾಲೆಗೆ ಬಂದರು ಶಿಕ್ಷಕರು ಬರದಿರುವುದರಿಂದ ಆಕ್ರೋಶಗೊಂಡ ಪೋಷಕರು ಮಕ್ಕಳನ್ನು ಮನೆಗೆ ಕರೆದುಕೊಂಡು ಹೋದ ಘಟನೆ ನಡೆದಿದೆ.
ಮಳೆಯ ಕಾರಣ ಎರಡು ದಿವಸ ರಜೆ ಇದ್ದುದರಿಂದ ಗುರುವಾರ ಎಂದಿನಂತೆ ಪೋಷಕರು ಶಾಲೆಗೆ ಮಕ್ಕಳನ್ನು ಕರೆದುಕೊಂಡು ಬಂದಿದ್ದಾರೆ. ಆದರೆ 10 ಗಂಟೆಯಾದರೂ ಶಿಕ್ಷಕರು ಬಂದಿರಲಿಲ್ಲ, ಬಾಗಿಲನ್ನು ತೆರೆದಿರಲಿಲ್ಲ. ಇದರಿಂದ ಬೇಸತ್ತ ಪೋಷಕರು ಮತ್ತು ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಮಕ್ಕಳನ್ನು ವಾಪಸ್ ಕರೆದುಕೊಂಡು ಹೋದರು.ಸದರಿ ಸರ್ಕಾರಿ ಶಾಲೆ ಮಕ್ಕಳ ಕೊರತೆಯಿಂದ ಮುಚ್ಚುವ ಹಂತಕ್ಕೆ ತಲುಪಿತ್ತು. ಗ್ರಾಮಸ್ಥರು ಹಾಗೂ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಎಲ್ಲರೂ ಸೇರಿ ಸರ್ಕಾರಿ ಶಾಲೆ ಉಳಿಸುವ ಅಭಿಯಾನ ಮಾಡಿ ಶಾಲೆಗೆ ಬೇಕಾದ ಸೌಲಭ್ಯ ಒದಗಿಸಲು ಮುಂದಾಗಿದ್ದರು. ಶಾಲೆಗೆ ಇಬ್ಬರು ಶಿಕ್ಷಕರನ್ನು ನೇಮಿಸಬೇಕಾಗಿತ್ತು. ಆದರೆ ನೇಮಿಸಿದ ಶಿಕ್ಷಕರು ವಾರಕ್ಕೆ ಒಂದೆರೆಡು ದಿನ ಕಾಟಾಚಾರಕ್ಕೆ ಬಂದು ಹೋಗುತ್ತಿದ್ದರು. ಕಳೆದ ಮೂರು ತಿಂಗಳಿನಿಂದಲೂ ಸಮರ್ಪಕವಾಗಿ ಶಿಕ್ಷಕರು ಕಾರ್ಯನಿರ್ವಹಿಸದೆ ಇರುವ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತಿಲ್ಲ ಎಂದು ಪೋಷಕರು ದೂರಿದ್ದಾರೆ.ಸರ್ಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ಖಾಸಗಿ ಶಾಲೆಗೆ ಸೇರಿದ್ದ ಗ್ರಾಮದ ಮಕ್ಕಳನ್ನು ಆ ಶಾಲೆ ಬಿಡಿಸಿ ಗ್ರಾಮದ ಬೇರೆ ಶಾಲೆಗೆ ದಾಖಲಿಸಲಾಗಿತ್ತು. ಕಳೆದ ಮೂರು ತಿಂಗಳಿನಿಂದ ಕಾಯಂ ಶಿಕ್ಷಕರನ್ನು ನೇಮಿಸಲು ಕ್ಷೇತ್ರಶಿಕ್ಷಣಾಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಇಲ್ಲಿಗೆ ನಿಯೋಜನೆಗೊಂಡ ಶಿಕ್ಷಕರು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಮಕ್ಕಳನ್ನು ಶಾಲೆಗೆ ಕಳುಹಿಸು ವುದಿಲ್ಲ ಎಂದು ಪೋಷಕರು ತಿಳಿಸಿದ್ದಾರೆ. ಕಾಯಂ ಶಿಕ್ಷಕರನ್ನು ನೇಮಿಸಿ ಸಮಸ್ಯೆ ಬಗೆಹರಿಸ ಬೇಕೆಂದು ಹಳೇ ವಿದ್ಯಾರ್ಥಿ ಸಂಘದ ರತನ್ ಗೌಡ ತಿಳಿಸಿದರು.ಸದರಿ ಶಾಲೆಗೆ ತರೀಕೆರೆಯಲ್ಲಿ ಹೆಚ್ಚುವರಿ ಶಿಕ್ಷಕರನ್ನು ನಿಯೋಜಿಸಲಾಗಿತ್ತು. ಅಲ್ಲದೆ ಗುರುವಾರ ಕೆರೆಮನೆ ಗ್ರಾಮದಿಂದ ಇನ್ನೊಬ್ಬ ಶಿಕ್ಷಕರನ್ನು ಸಹ ನಿಯೋಜಿಲಾಗಿತ್ತು. ಇವರಿಬ್ಬರೂ ಸಹ 11.30 ರ ವೇಳೆಗೆ ಶಾಲೆಗೆ ಹೋಗಿದ್ದಾರೆ. ಸಮಸ್ಯೆ ಗಮನಕ್ಕೆ ಬರುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದಕ್ಷೇತ್ರ ಶಿಕ್ಷಣಾಧಿಕಾರಿ ಶಿಕ್ಷಕರ ಹಾಜರಿವಹಿಯಲ್ಲಿ ಗೈರು ಹಾಜರಿ ನಮೂದಿಸಿದ್ದಾರೆ. ಸದರಿ ಶಾಲೆಗೆ ಮೂಡಿಗೆರೆ ತಾಲೂಕಿನಿಂದ ಹೆಚ್ಚುವರಿ ಶಿಕ್ಷಕರ ವರ್ಗಾವಣೆಯಾಗಿದ್ದು ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ. ಶುಕ್ರವಾರ ಶಾಲೆಗೆ ಭೇಟಿ ನೀಡಿ ಪೋಷಕರು ಮತ್ತು ಗ್ರಾಮಸ್ಥರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್.ಪುಷ್ಪಾ ಸುದ್ದಿಗಾರರಿಗೆ ತಿಳಿಸಿದ್ದಾರೆ.