ವಿದ್ಯಾರ್ಥಿಗಳು ಒಂದೇ ಕ್ಷೇತ್ರಕ್ಕೆ ಸೀಮಿತವಾಗದೆ, ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡು ಅಭಿವೃದ್ಧಿ ಹೊಂದಬೇಕು. ಆಗ ಮಾತ್ರ ಗುರಿ ಸಾಧಿಸಲು ಸಾಧ್ಯ.
ಗದಗ: ವಿದ್ಯಾರ್ಥಿಯ ಯಶಸ್ಸಿನ ಹಾದಿಯಲ್ಲಿ ಪಾಲಕರ ಪಾತ್ರವು ಬಹಳ ಮಹತ್ವಪೂರ್ಣವಾದದ್ದು. ಅವರ ಪ್ರತಿಯೊಂದು ಹೆಜ್ಜೆಯಲ್ಲಿ ಮಾರ್ಗದರ್ಶಕರಾಗಿ ಪ್ರೇರೇಪಿಸಬೇಕೆಂದು ಎಂದು ಶಿರಹಟ್ಟಿಯ ಸರ್ಕಾರಿ ಪಪೂ ಕಾಲೇಜಿನ ಪ್ರಾ. ಬಸವರಾಜ ಗಿರಿತಿಮ್ಮಣ್ಣವರ ತಿಳಿಸಿದರು.ತಾಲೂಕಿನ ಹುಲಕೋಟಿ ಗ್ರಾಮದ ಕೆ.ಎಚ್. ಪಾಟೀಲ ಸೆಂಟರ್ ಫಾರ್ ಹ್ಯೂಮನ್ ಎಕ್ಸೆಲನ್ಸ್ ಸ್ವಾಮಿ ವಿವೇಕಾನಂದ ವಿಜ್ಞಾನ ಪಪೂ ಮಹಾವಿದ್ಯಾಲಯದಲ್ಲಿ ಜರುಗಿದ 2025- 26ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಒಂದೇ ಕ್ಷೇತ್ರಕ್ಕೆ ಸೀಮಿತವಾಗದೆ, ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡು ಅಭಿವೃದ್ಧಿ ಹೊಂದಬೇಕು. ಆಗ ಮಾತ್ರ ಗುರಿ ಸಾಧಿಸಲು ಸಾಧ್ಯ ಎಂದರು.
ಮಹಾವಿದ್ಯಾಲಯದ ನಿರ್ದೇಶಕ ಆನಂದ ಪೋತ್ನೀಸ್ ಮಾತನಾಡಿ, ಒಂದು ಶಿಕ್ಷಣ ಸಂಸ್ಥೆ ನಾಲ್ಕು ಚಕ್ರಗಳ ವಾಹನವಿದ್ದಂತೆ. ಅದರ ಮೊದಲ ಚಕ್ರ ಆಡಳಿತ ಮಂಡಳಿ. ಎರಡನೇ ಚಕ್ರ ಬೋಧನಾ ಸಿಬ್ಬಂದಿ. ಮೂರನೇ ಚಕ್ರ ಪಾಲಕರು. ನಾಲ್ಕನೇ ಚಕ್ರ ವಿದ್ಯಾರ್ಥಿಗಳು. ಈ ನಾಲ್ಕೂ ಚಕ್ರಗಳು ಸಮನ್ವಯ, ಸಮಪ್ರಯತ್ನದಿಂದ ಸಾಗಿದಾಗ ಮಾತ್ರ ಸಂಸ್ಥೆ ಸ್ಥಿರವಾಗಿ ಮುನ್ನಡೆಯುತ್ತಾ ತನ್ನ ಉದ್ದೇಶಿತ ಗುರಿಯನ್ನು ತಲುಪುತ್ತದೆ ಎಂದರು.ಪ್ರಾ. ಪ್ರಿಯಾ ಎಂ. ಪಾಟೀಲ ಅವರು, 2025- 26ನೇ ಸಾಲಿನ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳ ವಾರ್ಷಿಕ ವರದಿ ವಾಚಿಸಿದರು. 2024- 25ನೇ ಶೈಕ್ಷಣಿಕ ವರ್ಷದಲ್ಲಿ ಪಿಯುಸಿ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಮಧು ಹಳೇಮನಿ, ದ್ವಿತೀಯ ಸ್ಥಾನ ಪಡೆದ ಸೂರಜ ಕರಿಯಣ್ಣವರ, ತೃತೀಯ ಸ್ಥಾನ ಪಡೆದ ರಾಣಿ ಜಕ್ಕನಗೌಡರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.2024- 25ನೇ ಸಾಲಿನ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಶ್ರೀಕಾಂತ ಕಂಬಳಿ, ದ್ವಿತೀಯ ಸ್ಥಾನ ಪಡೆದ ಸೋಯಲ್ ಲಕ್ಕುಂಡಿ, ತೃತೀಯ ಸ್ಥಾನ ಪಡೆದ ಅಭಿಷೇಕ ಹಿರೇಮಠ ಅವರನ್ನು ಸನ್ಮಾನಿಸಲಾಯಿತು.
ಅದೇ ರೀತಿ 2024- 25ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಷಯವಾರು ಶೇ. 100ರಷ್ಟು ಫಲಿತಾಂಶ ತಂದ ಉಪನ್ಯಾಸಕರಾದ ಲಲಿತಾ ಸಂಗಟಿ ಇಂಗ್ಲಿಷ್ ವಿಭಾಗ, ಜಯಶ್ರೀ ಹೊಳೆಯಣ್ಣವರ ಕನ್ನಡ ವಿಭಾಗ, ಖಾಲಿದಾ ಬುವಾಜಿ ಹಿಂದಿ ವಿಭಾಗ ಅವರನ್ನು ಆಡಳಿತ ಮಂಡಳಿಯ ಚೇರಮನ್ ಡಾ. ಎಸ್.ಆರ್. ನಾಗನೂರ ಅವರು ಸನ್ಮಾನಿಸಿ, ಗೌರವಿಸಿದರು.ಆಡಳಿತ ಮಂಡಳಿಯ ಮುಖ್ಯಸ್ಥ ವೆಂಕರಡ್ಡಿ ಎಸ್. ಮಂಗಣ್ಣವರ, ಆರ್.ಆರ್. ಸಾವಕಾರ, ಎನ್.ಆರ್. ಸಾವಕಾರ, ಮುಲ್ಲಾ ಹಾಗೂ ಆಡಳಿತ ಮಂಡಳಿಯ ಸದಸ್ಯರು, ವಿದ್ಯಾರ್ಥಿಗಳು, ಪಾಲಕರು ಇದ್ದರು.