ಬನ್ನಂಜೆ 90 ವಿಶ್ವ ನಮನ ಕಾರ್ಯಕ್ರಮ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಮಕ್ಕಳಲ್ಲಿ ನಮ್ಮ ಸಂಸ್ಕೃತಿ, ಸಂಪ್ರದಾಯ, ಪರಂಪರೆ, ಮತ್ತು ಸಂಸ್ಕಾರವನ್ನು ಬೆಳೆಸುವ ಕೆಲಸವನ್ನು ಪೋಷಕರು ಮಾಡಬೇಕು ಎಂದು ಹರಿಹರಪುರ ಮಠಾಧೀಶ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಸಲಹೆ ನೀಡಿದರು.

ಬನ್ನಂಜೆ ಅಭಿಮಾನಿ ಬಳಗ, ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ನಗರದ ಕುವೆಂಪು ಕಲಾಮಂದಿರದಲ್ಲಿ ಏರ್ಪಡಿಸಿದ್ದ ಬನ್ನಂಜೆ 90 ವಿಶ್ವ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇತ್ತೀಚಿನ ವರ್ಷಗಳಲ್ಲಿ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯ ಕ್ರಮಗಳಿಗೆ ಮಕ್ಕಳು, ಯುವಜನತೆ ಬರುತ್ತಿಲ್ಲ, ಬರೀ ಇಳಿ ವಯಸ್ಸಿನವರೇ ಬರುತ್ತಿದ್ದಾರೆ ಎಂದು ವಿಷಾದಿಸಿದ ಅವರು ಪರಿಸ್ಥಿತಿ ಹೀಗೇ ಮುಂದುವರಿದರೆ ನಮ್ಮಧರ್ಮ, ಸಂಸ್ಕೃತಿ, ಸಂಪ್ರದಾಯ, ಸಂಸ್ಕಾರ, ಮಕ್ಕಳಿಗೆ, ಯುವಜನತೆಗೆ ತಿಳಿಯುವುದು ಹೇಗೆ ಎಂದರು.ಹೆತ್ತವರು ತಮ್ಮ ಮಕ್ಕಳನ್ನು ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ತಪ್ಪದೇ ಕರೆ ತರಬೇಕು. ಆಗ ಮಾತ್ರ ನಮ್ಮ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ, ಮಕ್ಕಳಿಗೆ ಗೊತ್ತಾಗಲಿದೆ ಮತ್ತು ಉಳಿದು ಬೆಳೆಯುತ್ತದೆ ಎಂದು ಹೇಳಿದರು. ವಿವಿಧತೆಯಲ್ಲಿ ಏಕತೆ ಸಾಧಿಸಿರುವುದು ಭಾರತೀಯ ಸನಾತನ ಸಂಸ್ಕೃತಿ ಮಾತ್ರ, ಇದು ನಮ್ಮ ಸಂಸ್ಕೃತಿ ವೈವಿಧ್ಯತೆ, ಹಾಗಾಗಿ ಭಾರತೀಯ ಸನಾತನ ಸಂಸ್ಕೃತಿ, ವಿಶ್ವ ಶಾಂತಿಗೆ, ಜಾಗತಿಕ ಸಾಮರಸ್ಯಕ್ಕೆ, ವಿಶ್ವ ಬ್ರಾತೃತ್ವಕ್ಕೆ ಮೂಲ ತಳಹದಿ ಯಾಗಿದೆ ಎಂದು ತಿಳಿಸಿದರು.ಭಾರತೀಯ ಸನಾತನ ಸಂಸ್ಕೃತಿ ಭಗವಂತನನ್ನು ಸರ್ವವ್ಯಾಪಿ ಎನ್ನುತ್ತದೆ. ಪ್ರಕೃತಿಯನ್ನು ಪರಮೇಶ್ವರನ ಸ್ವರೂಪವೆಂದು ಪೂಜಿಸುವ ಪದ್ಧತಿ ನಮ್ಮ ಸಂಸ್ಕೃತಿಯಲ್ಲಿ ಮಾತ್ರ ಇದೆ ಎಂದ ಅವರು ಇಂತಹ ಉತ್ಕೃಷ್ಟ ಸಂಸ್ಕೃತಿಯನ್ನು ಮಕ್ಕಳಲ್ಲಿ, ಯುವ ಜನತೆಯಲ್ಲಿ ಬೆಳೆಸುವ ಕೆಲಸವಾಗಬೇಕು ಎಂದರು.ಬನ್ನಂಜೆ ಅವರ ಜ್ಞಾನಧಾರೆ ಕುರಿತು ಪ್ರವಚನ ನೀಡಿದ ವಿದ್ವಾಂಸ ಬ್ರಹ್ಮಣ್ಯಾಚಾರ್ಯ, ಬನ್ನಂಜೆ ಗೋವಿಂದಾಚಾರ್ಯರ ಜ್ಞಾನ ಪರಿಚಯಿಸುವುದೆಂದರೆ ನಡು ಮಧ್ಯಾಹ್ನ ಟಾರ್ಚ್ ಹಿಡಿದು ಸೂರ್ಯನನ್ನು ತೋರಿಸಿದಂತಾಗುತ್ತದೆ. ಬನ್ನಂಜೆ ಈ ಜಗತ್ತುಕಂಡ ವಿದ್ವಚ್ತೇತನ ಎಂದರು.

ಬನ್ನಂಜೆ ಅವರ ಜ್ಞಾನದ ಭಂಡಾರ, ಅವರ ಆಳವಾದ ಜ್ಞಾನದ ಅರಿವು ಸಮುದ್ರಕ್ಕಿಂತ ದೊಡ್ಡದಿತ್ತು. ಅದರ ಹರಿವು ಮತ್ತು ಹರವು ಗಂಗಾ ನದಿಯಷ್ಟು ಉದ್ದ, ಸಮುದ್ರದಷ್ಟು ಆಳ, ಆಕಾಶದಷ್ಟು ವಿಶಾಲವಾಗಿತ್ತು. ಬನ್ನಂಜೆಯವರದು ಆಳವಾದ ಅಧ್ಯಯನ, ಅವರು ಮುಟ್ಟದ ತತ್ವಶಾಸ್ತ್ರಗಳ ಪುಸ್ತಕಗಳೇ ಇಲ್ಲ ಎಂದರು.ಬನ್ನಂಜೆ ಅವರ ಸಂಗ್ರಹ ರಾಮಾಯಣ ಕೃತಿಯ ಕುರಿತು ಮಾತನಾಡಿದ ವಿದ್ವಾಂಸ ವೈಷ್ಣವ ಸಿಂಹ, ಬನ್ನಂಜೆ ಅವರು ಸಂಗ್ರಹ ರಾಮಾಯಣವನ್ನು ಸಂಸ್ಕೃತದಲ್ಲೂ ಹಾಗೂ ಸಾಮಾನ್ಯರಿಗೆ ಅರ್ಥವಾಗುವಂತೆ ಕನ್ನಡದಲ್ಲೂ ಬರೆದಿದ್ದಾರೆ. ಸಂಗ್ರಹ ರಾಮಾಯಣಕೃತಿಯನ್ನು ಅತ್ಯಂತ ಸುಂದರ, ರಸವತ್ತಾಗಿ ಬರೆದಿದ್ದಾರೆ. ರಾಮಾಯಣದ ಸನ್ನಿವೇಶಗಳನ್ನು ಅತ್ಯಂತ ಸೂಕ್ಷ್ಮ ವಾಗಿ ಅನುವಾದಿಸಿದ್ದಾರೆ ಎಂದು ತಿಳಿಸಿದರು.ಈ ವೇಳೆ ಬನ್ನಂಜೆ ಅವರ ಹಿರಿಯ ಪುತ್ರಿ ಕವಿತಾ ಉಡುಪ ಮತ್ತು ಸುಮಾ ಶಾಸ್ತ್ರಿ ಅವರಿಂದ ನಡೆದ ಬನ್ನಂಜೆ ಹಾಡುಹಬ್ಬ ಕಾರ್ಯಕ್ರಮ ನಡೆಸಿಕೊಟ್ಟರು. ಈ ನಡುವೆ ಕಲಾವಿದ ಸತೀಶ್‌ ಯಲ್ಲಾಪುರ ಅವರು ಚಿತ್ರ ರಚನೆ ಮೂಲಕ ನೋಡುಗರ ಗಮನ ಸೆಳೆದರು. ಸಾಹಿತಿ ನಾಗಶ್ರೀ ತ್ಯಾಗರಾಜ್, ಚೈತನ್ಯ, ಆಯೋಜಕರಾದ ಶಾಶ್ವತ್ ಭಟ್, ಮಂಜುನಾಥ ಕಾರಂತ, ವೇದ ಬಳಗದ ಮುಖ್ಯಸ್ಥ ಗೋಪಿನಾಥ್ ಉಪಸ್ಥಿತರಿದ್ದರು.


-- ಕೋಟ್‌ --

ಬನ್ನಂಜೆ ಗೋವಿಂದಾಚಾರ್ಯರು ಈ ನಾಡು ಕಂಡ ಅಪ್ರತಿಮ ಪ್ರತಿಭೆ, ಕವಿಯಾಗಿ, ಪ್ರವಚನಕಾರರಾಗಿ, ವಿದ್ವಾಂಸರಾಗಿ, ಅನುವಾದಕರಾಗಿ, ವ್ಯಾಖ್ಯಾನಕಾರರಾಗಿ, ಕೃತಿ ಸಂಪಾದನಾಕಾರರಾಗಿ ಅವರ ಕೊಡುಗೆ ಅಪಾರ.

- ಮಲ್ಲೇಪುರಂ ಜಿ ವೆಂಕಟೇಶ್,ವಿಶ್ರಾಂತ ಕುಲಪತಿ, ಸಂಸ್ಕೃತ ವಿವಿ