ಸಾರಾಂಶ
ಪಾಲಕರು ತಮ್ಮ ಮಕ್ಕಳಲ್ಲಿರುವ ಅದುಮಿರುವ ಪ್ರತಿಭೆಯನ್ನು ಹೊರಹಾಕಲು ಅವಕಾಶ, ಪ್ರೋತ್ಸಾಹ ನೀಡಬೇಕು ಎಂದು ಡಿಎಸ್ಪಿ ಗಿರೀಶ ಬಿ. ಮನವಿ ಮಾಡಿದರು.
ಕಾರವಾರ: ಮಕ್ಕಳ ಮೇಲೆ ಒತ್ತಡ ಹಾಕದೇ ಮಕ್ಕಳ ಆಸಕ್ತಿಗನುಗುಣವಾಗಿ ಪಾಲಕರು ಪ್ರೋತ್ಸಾಹಿಸಬೇಕು ಎಂದು ಕಾರವಾರ ಡಿಎಸ್‌ಪಿ ಗಿರೀಶ ಬಿ. ತಿಳಿಸಿದರು.
ನಗರದ ಸರ್ಕಾರಿ ನೌಕರರ ಸಭಾಂಗಣದಲ್ಲಿ ಭಾನುವಾರ ಸ್ಥಳೀಯ ಸ್ಟಾರ್ ಚಾಯ್ಸ್ ನೃತ್ಯ ಮತ್ತು ಕಲಾ ಕೇಂದ್ರದಿಂದ ಆಯೋಜಿಸಿದ್ದ ಚಿಣ್ಣರ ಹೆಜ್ಜೆ- 2024 ಬೇಸಿಗೆ ಶಿಬಿರದಲ್ಲಿ ಅತಿಥಿಗಳಾಗಿ ಮಾತನಾಡಿ, ಮಕ್ಕಳ ಪ್ರತಿಭೆಯನ್ನು ಹೊರಹಾಕಲು ಈ ರೀತಿಯ ಬೇಸಿಗೆ ಶಿಬಿರ ಸಹಕಾರಿಯಾಗಲಿದೆ. ಸಾಮೂಹಿಕವಾಗಿ ಮಕ್ಕಳಿಗೆ ಬೇರೆ ಬೇರೆ ರೀತಿಯ ತಿಳಿವಳಿಕೆ ನೀಡಿದಾಗ ಮಕ್ಕಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಪ್ರಪಂಚ ಬಹಳ ವೇಗವಾಗಿ ಬೆಳೆದಿದೆ. ಇವತ್ತು ಯೋಗ, ಕರಾಟೆ ಸೇರಿದಂತೆ ಎಲ್ಲ ವೃತ್ತಿಗೂ ಉತ್ತಮ ಅವಕಾಶವಿದೆ. ಪಾಲಕರು ತಮ್ಮ ಮಕ್ಕಳಲ್ಲಿರುವ ಅದುಮಿರುವ ಪ್ರತಿಭೆಯನ್ನು ಹೊರಹಾಕಲು ಅವಕಾಶ, ಪ್ರೋತ್ಸಾಹ ನೀಡಬೇಕು ಎಂದರು.ಶಿಬಿರ ಉದ್ಘಾಟಿಸಿದ ಬಂದರು ಇಲಾಖೆಯ ಅಧಿಕಾರಿ ಸುರೇಶ ಶೆಟ್ಟಿ ಮಾತನಾಡಿ, ಮಕ್ಕಳಿಗಿಂತ ಪಾಲಕರು ಹೆಚ್ಚು ಆಸಕ್ತರಾಗಬೇಕು. ಮಕ್ಕಳಲ್ಲಿ ನೈತಿಕ ಮೌಲ್ಯ, ಮಾನವೀಯ ಗುಣಗಳು ಮತ್ತು ವಿವಿಧ ಚಟುವಟಿಕೆಗಳನ್ನು ಮಕ್ಕಳಲ್ಲಿ ಪಾಲಕರು ಬೆಳೆಸಬೇಕು ಎಂದರು.
ನಗರದ ಆಶಾನಿಕೇತನ ಕಿವುಡ ಮತ್ತು ಮೂಕ ಶಾಲೆಯ ಪ್ರಾಚಾರ್ಯೆ ಸಿಸ್ಟರ್ ಲಿನೆಟ್ ಲೋಫಿಸ್, ಪ್ರಿಮಿಯರ್ ಶಾಲೆಯ ಪ್ರಾಂಶುಪಾಲ ದೀಪಕ ಬೋಮ್ಕರ್, ಸ್ಟಾರ್ ಚಾಯ್ಸ್ ನೃತ್ಯ ಮತ್ತು ಕಲಾ ಕೇಂದ್ರದ ಗೌರವಾಧ್ಯಕ್ಷ ಗಿರೀಶ ರಾವ್, ವಿ. ಅಮೃತಾ ನಾಯ್ಕ, ಸದಸ್ಯ ರೋಹಿದಾಸ್ ಬಾನಾವಳಿ, ಸಂಗೀತ ಶಿಕ್ಷಕ ಸಂಚು ಚಂಡೆಕರ್, ಕರಾಟೆ ಶಿಕ್ಷಕ ಮುಸ್ತಾಪಾ, ಸ್ಟಾರ್ ಚಾಯ್ಸ್ ನೃತ್ಯ ಕಲಾ ಕೇಂದ್ರದ ಸಂಸ್ಥಾಪಕ ರಾಜನ್ ಬಾನಾವಳಿಕರ್ ಇದ್ದರು.