ಸಾರಾಂಶ
ಸೇಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ
ಶಿರಹಟ್ಟಿ: ಕಲಿಕೆಯಿಂದ ಮಾತ್ರ ಮನೆ, ಸಮಾಜ, ದೇಶ ಉದ್ಧಾರ ಮಾಡಲು ಸಾಧ್ಯವಾಗುತ್ತಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ತಂದೆ- ತಾಯಿಗಳ ಮುಖ್ಯ ಜವಾಬ್ದಾರಿಯಾಗಿದೆ ಎಂದು ತಹಸೀಲ್ದಾರ್ ಅನಿಲ ಬಡಿಗೇರ ಕರೆ ನೀಡಿದರು.ಗುರುವಾರ ಸಂಜೆ ಪಟ್ಟಣದ ಸೇಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ೨೦೨೩-೨೪ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಮಕ್ಕಳಲ್ಲಿ ಮಾನವೀಯ ಮೌಲ್ಯ ಬೆಳೆಯುವುದು ಉತ್ತಮ ಶಿಕ್ಷಣದಿಂದ ಮಾತ್ರ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಅವಶ್ಯಕತೆಯಿದೆ. ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ನೀಡುವುದು ತಂದೆ-ತಾಯಿಗಳ ಮುಖ್ಯ ಆದ್ಯತೆಯಾಗಬೇಕು. ಕೇವಲ ಶಾಲೆಗೆ ಕಳುಹಿಸಿದರೆ ನಮ್ಮ ಪಾತ್ರ ಮುಗಿಯಿತು ಎನ್ನುವಂತಿಲ್ಲ. ಅವರ ಚಲನ ವಲನ ಕಡೆ ನಿಗಾ ಇರಬೇಕು ಎಂದರು.
ಮಕ್ಕಳನ್ನು ಉತ್ತಮ ಶಾಲೆಯಲ್ಲಿ ಓದಲು ದಾಖಲಿಸಿದರೆ ಸಾಲದು. ಸೂಕ್ತ ಮಾರ್ಗದರ್ಶನ ನೀಡುವುದರ ಜತೆಗೆ ಅವರ ಪ್ರತಿಭೆಗೆ ನೀರೆರೆಯಬೇಕು. ಮಕ್ಕಳ ಆಸಕ್ತಿಗೆ ಅನುಗುಣವಾಗಿ ಓದಿಸಬೇಕು. ಒಬ್ಬ ತಾಯಿ ಪ್ರಪಂಚ ನಿಬ್ಬೆರಗಾಗುವಂತೆ ಮಾಡುವ ಮನಸ್ಸನ್ನು ಮಕ್ಕಳ ಮೂಲಕ ತೋರಿಸಬಹುದು. ಶಿಕ್ಷಣ ಸಂಸ್ಥೆ ವೈಜ್ಞಾನಿಕ ತಳಹದಿ, ದೇಶಿ ನೆಲೆಗಟ್ಟನ್ನು ಬಿಡದೇ ಸುಸಂಸ್ಕೃತ ಸಮಾಜ ಕಟ್ಟಲು ಪ್ರಯತ್ನಿಸುತ್ತಿದ್ದು, ಇಂದಿನ ವಿದ್ಯಾರ್ಥಿಗಳು ಸಂಸ್ಕಾರವಂತರಾಗಬೇಕು ಎಂದು ತಿಳಿಸಿದರು.ವ್ಯಕ್ತಿತ್ವ, ಬದುಕು ರೂಪಿಸಿಕೊಳ್ಳಲು ಶಿಕ್ಷಣವೇ ಹೊರತು ಕಾಲಹರಣಕ್ಕೆ ಇದು ಕಾಲವಲ್ಲ. ಜ್ಞಾನ ಸಂಪಾದನೆಗೆ ವಿದ್ಯಾರ್ಥಿಗಳು ಮುಂದಾಗಿ ಧನ ಸಂಪಾದನೆಗೆ ಸಹಕಾರಿಯಾಗುತ್ತದೆ. ವಿದ್ಯಾರ್ಥಿ ದೆಸೆಯಲ್ಲಿ ಅಡ್ಡದಾರಿ ಹಿಡಿದು ಬದುಕನ್ನು ಖೆಡ್ಡದಲ್ಲಿ ಕೆಡವಿಕೊಳ್ಳುವುದು ಬೇಡ. ಪಾಲಕರ ಪ್ರೀತಿ ಗುರುವೃಂದದ ಮಾರ್ಗದರ್ಶನ, ವಿದ್ಯಾರ್ಥಿಗಳ ನಿರಂತರ ಪರಿಶ್ರಮದಿಂದ ಗುರಿ ನಿಲುಕಲು ಸಾಧ್ಯ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೂಪ ಮಂಡೂಕಗಳಾಗದೇ ಜಗತ್ತನ್ನು ಕಣ್ಣಿಟ್ಟು ನೋಡಿ ಬದುಕಿನ ಗುರಿಯತ್ತ ಸಾಗುವ ಕ್ರಿಯಾಶೀಲ ವಿದ್ಯಾರ್ಥಿ ಮಾತ್ರ ಯಶಸ್ಸನ್ನು ಹೊಂದಬಲ್ಲ ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ನಿಂಗಪ್ಪ ಓಲೇಕಾರ ಮಾತನಾಡಿ, ನಮಗೆ ಎದುರಾಗುವ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಎದುರಿಸುವ ಸಾಮರ್ಥ್ಯವನ್ನು ಮಕ್ಕಳಿಗೆ ತುಂಬುವಲ್ಲಿ ಹಾಗೂ ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಸನ್ನದ್ಧರಾಗಬೇಕು. ದೇಶದ ಭವಿಷ್ಯ ತರಗತಿಯ ಕೋಣೆಯಲ್ಲಿದೆ ಎಂದು ಹೇಳಿದರು.ರಾಷ್ಟ್ರದ ನಿರ್ಮಾಣದಲ್ಲಿ ಬಹು ಮುಖ್ಯ ಪಾತ್ರ ವಹಿಸುವ, ಸಮಾಜಕ್ಕೆ ದಾರಿದೀಪವಾಗಿರುವ, ಗೌರವಯುತ ಸ್ಥಾನದಲ್ಲಿರುವ ಶಿಕ್ಷಕರು ಪ್ರಾಮಾಣಿಕ ಸೇವೆ ಮಾಡುವ ಮೂಲಕ ದಿಕ್ಕು ತಪ್ಪಿದ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು. ಜವಾಬ್ದಾರಿ ಅರಿತು ಸಂಸ್ಕೃತಿ, ಸಂಸ್ಕಾರ, ಸಭ್ಯ ಜೀವನ ಧರ್ಮದ ದಾರಿಯಲ್ಲಿ ಸಾಗಲು ಮಕ್ಕಳಿಗೆ ನೀತಿಯನ್ನು ಹೇಳಿಕೊಡಬೇಕು ಎಂದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಸುಖಲತಾ ಸಾಮ್ರಾಟ್ ನೇತೃತ್ವದಲ್ಲಿ ಶಿಕ್ಷಕಿಯರು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.ಸೇಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಅಧ್ಯಕ್ಷರಾದ ಎಸ್.ಎಸ್. ಸಾಮ್ರಾಟ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಸುನೀಲಕುಮಾರ ಹುಣಸಿಹಾಳ ಪ್ರಾರ್ಥನೆ ಮತ್ತು ಕ್ರಿಸ್‌ಮಸ್ ಸಂದೇಶ ಹೇಳಿದರು. ಪಪಂ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ, ಡಾ. ಟಿ. ಎಂ. ಮಹೇಂದ್ರಕರ, ಪಪಂ ಸದಸ್ಯ ಹೊನ್ನಪ್ಪ ಶಿರಹಟ್ಟಿ, ದೇವಪ್ಪ ಆಡೂರ, ಮುಸ್ತಾಕ ಚೋರಗಸ್ತಿ, ಮಹಬೂಬಸಾಬ ಲಕ್ಷ್ಮೇಶ್ವರ, ಅಕ್ಬರ್‌ಸಾಬ ಯಾದಗೀರಿ, ಎಚ್.ಆರ್. ಬೆನಹಾಳ ಇದ್ದರು.