ಪಾಲಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು: ರಡ್ಡೇರ

| Published : Mar 08 2024, 01:49 AM IST / Updated: Mar 08 2024, 01:50 AM IST

ಸಾರಾಂಶ

ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಮಕ್ಕಳು ಭಾಗವಹಿಸಿದರೆ ಬೌದ್ಧಿಕ ಹಾಗೂ ಶಾರೀರಿಕ ಬೆಳವಣಿಗೆಯಾಗುತ್ತದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಎ. ರಡ್ಡೇರ ಹೇಳಿದರು.

ಮುಳಗುಂದ: ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಮಕ್ಕಳು ಭಾಗವಹಿಸಿದರೆ ಬೌದ್ಧಿಕ ಹಾಗೂ ಶಾರೀರಿಕ ಬೆಳವಣಿಗೆಯಾಗುತ್ತದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಎ. ರಡ್ಡೇರ ಹೇಳಿದರು.

ಸಮೀಪದ ನೀಲಗುಂದ ಗ್ರಾಮದ ಗುದ್ನೇಶ್ವರ ಮಠದ ದಿವ್ಯ ಚೇತನ ಪ್ರಾಥಮಿಕ ಶಾಲೆಯ ಮಕ್ಕಳಿಂದ ಮಹಾಶಿವರಾತ್ರಿ ಕಾರ್ಯಕ್ರಮದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರದ ಜತೆಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಬದುಕುವುದಕ್ಕೇ ಅನ್ನ, ನೀರು ಅಷ್ಟೇ ಬೇಕಾಗಿಲ್ಲ, ಶಿಕ್ಷಣವು ಬೇಕು. ಅದಕ್ಕೆ ಸಂವಿಧಾನದಲ್ಲಿ ಜೀವಿಸುವ ಹಕ್ಕು, ಸಮಾನತೆ ಹಕ್ಕು ನೀಡಿದಂತೆ ಶಿಕ್ಷಣದ ಹಕ್ಕು ನೀಡಿದೆ. ಆದ್ದರಿಂದ ಮಕ್ಕಳನ್ನ ತಪ್ಪದೇ ಶಾಲೆಗೆ ಕಳುಹಿಸಿ, ಅವರಿಗೆ ಶಿಕ್ಷಕರು ಗುಣಮಟ್ಟದ ಶಿಕ್ಷಣವನ್ನು ನೀಡಿ, ಭವಿಷ್ಯದಲ್ಲಿ ಉತ್ತಮ ಪ್ರಜೆಗಳನ್ನಾಗಿ ಮಾಡಬೇಕು ಎಂದು ಹೇಳಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಕಲು ಮಾಡುವಂತಹ ಸಂಸ್ಕೃತಿಯನ್ನು ನಿಲ್ಲಿಸಬೇಕು. ಮಕ್ಕಳಿಗೆ ಓದಲು ಹಚ್ಚಬೇಕು, ಮನೆಯಲ್ಲಿ ಓದುವ ವಾತಾವರಣ ನಿರ್ಮಾಣ ಮಾಡಬೇಕು. ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದರೆ ಶಾಲೆಗೆ, ಊರಿಗೆ ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ಬರುತ್ತದೆ ಎಂದರು.

ವಿಜ್ಞಾನ ಸತ್ಯವನ್ನು ಬಿಟ್ಟು ಬೇರೆ ಏನೂ ಹೇಳುವುದಿಲ್ಲ. ವಿಜ್ಞಾನ ಓದಬೇಕಾದರೆ ಬಾಯಪಾಠ ಮಾಡುವುದಲ್ಲ, ಅದನ್ನ ಅನ್ವಯ ಮಾಡಬೇಕು. ಮಕ್ಕಳಲ್ಲಿ ತರ್ಕಬದ್ಧವಾಗಿ ಓದುವ ಹವ್ಯಾಸ ರೂಢಿಸಬೇಕು. ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನು ಆಸ್ತಿಯನ್ನಾಗಿ ಮಾಡಿ ಎಂದರು.

ಈ ವೇಳೆ ಶ್ರೀಮಠದ ಪ್ರಭುಲಿಂಗ ದೇವರು ಹಾಗೂ ಹೂವಿನ ಶಿಗ್ಲಿಯ ವಿರಕ್ತಮಠದ ಚನ್ನವೀರ ಸ್ವಾಮಿಗಳು ಮಾತನಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಬಿಇಒ ವಿ.ವಿ. ನಡುವಿನಮನಿ ಇದ್ದರು.