ಇಂದು ಅಂಕ ಪಡೆಯಲು ಮಾತ್ರ ಮಕ್ಕಳನ್ನು ತಯಾರು ಮಾಡುವ ಕಾರ್ಯದಲ್ಲಿ ಶಿಕ್ಷಕರು, ಪೋಷಕರು ಶ್ರಮಿಸುತ್ತಿದ್ದಾರೆ.
ಕೂಡ್ಲಿಗಿ: ದೇವರ ಸ್ವರೂಪದಲ್ಲಿರುವ ಮಕ್ಕಳಿಗೆ ಮನೆಯಲ್ಲಿ ಪೋಷಕರ ಜೊತೆ ಒಳ್ಳೆಯ ಸಂಸ್ಕಾರವನ್ನು ಕಲಿಸುವ ಮೂಲಕ ನೈತಿಕ ಮೌಲ್ಯಗಳನ್ನು ಬಿತ್ತಬೇಕು ಎಂದು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಪೋಷಕರಿಗೆ, ಶಿಕ್ಷಕರಿಗೆ ಕಿವಿಮಾತು ಹೇಳಿದರು.ಅವರು ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಿಂಬಳಗೆರೆಯ ಕಲ್ಲೇಶ್ವರ ನರ್ಸರಿ, ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ವಿದ್ಯಾ ಸಾಂಸ್ಕೃತಿಕ ಸಂಭ್ರಮ-ಮಕ್ಕಳ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಇಂದು ಅಂಕ ಪಡೆಯಲು ಮಾತ್ರ ಮಕ್ಕಳನ್ನು ತಯಾರು ಮಾಡುವ ಕಾರ್ಯದಲ್ಲಿ ಶಿಕ್ಷಕರು, ಪೋಷಕರು ಶ್ರಮಿಸುತ್ತಿದ್ದಾರೆ ವಿನಃ ಮಕ್ಕಳಿಗೆ ಜೀವನ ಪಾಠ ಬಿಂಬಿಸುವ ಪರಿಪೂರ್ಣ ಶಿಕ್ಷಣ ದೊರೆಯುತ್ತಿಲ್ಲ ಈಗಾಗಿ ಸಮಾಜದಲ್ಲಿ ಎಲ್ಲ ರಂಗಗಳಲ್ಲಿ ಅಶಾಂತಿ ಸೃಷ್ಟಿಯಾಗುತ್ತಿದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕಿ ಕೆ.ಶಿವಲೀಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕಲ್ಲೇಶ್ವರ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಸ್.ವೀರಣ್ಣ ಪ್ರಾಸ್ತವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಪಂ ಮಾಜಿ ಅಧ್ಯಕ್ಷ ಶ್ರೀಕಾಂತ್, ಕಾಂಗ್ರೆಸ್ ಮುಖಂಡರಾದ ಬಣವಿಕಲ್ಲು ಯರ್ರಿಸ್ವಾಮಿ ಮತ್ತಿತರರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಮಾಯಣ, ಮಹಾಭಾರತದಂತಹ ದಾರ್ಶನಿಕರ, ವಚನ, ಜಾನಪದ ನೃತ್ಯ ಹಾಗೂ ರಾಷ್ಟ್ರೀಯ ಭಾವೈಕ್ಯತೆ ಮೂಡಿಸುವ ನೃತ್ಯ ರೂಪಕಗಳನ್ನು ಪ್ರದರ್ಶಿಸಲಾಯಿತು.ಶಿಕ್ಷಕರಾದ ಎಸ್.ದೊಡ್ಡಬಸಪ್ಪ, ಕೆ.ನಾಗರಾಜ್ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಎಂ.ತನುಜಾ, ವೆಟ್ಟಿ ಸಂಜನಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಅಮೃತ, ರಾಜೇಶ್ವರಿ ಮತ್ತು ಸಂಗಡಿಗರು ನಾಡಗೀತೆ ಹಾಡಿದರು. ಶಿಕ್ಷಕಿ ಜಿ.ಪ್ರಭಾವತಿ ವಂದಿಸಿದರು.