ಪೋಷಕರು ಮಕ್ಕಳಿಗೆ ದೇಶದ ನೈಜ ಇತಿಹಾಸ ತಿಳಿಸಲಿ: ರಘು ಸಕಲೇಶಪುರ

| Published : Aug 15 2025, 01:00 AM IST

ಪೋಷಕರು ಮಕ್ಕಳಿಗೆ ದೇಶದ ನೈಜ ಇತಿಹಾಸ ತಿಳಿಸಲಿ: ರಘು ಸಕಲೇಶಪುರ
Share this Article
  • FB
  • TW
  • Linkdin
  • Email

ಸಾರಾಂಶ

ಸಕಲೇಶಪುರದಲ್ಲಿ ಎಲ್ಲಾ ವರ್ಗದವರು ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಸಂಘಟನೆ ವತಿಯಿಂದ ಗೋಹತ್ಯೆ ತಡೆಗೆ, ಲವ್ ಜಿಹಾದ್ ಹಾಗೂ ಲ್ಯಾಂಡ್ ಜಿಹಾದ್ ತಡೆಗೆ ನಿರಂತರವಾಗಿ ಶ್ರಮಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ತಂದುಕೊಡುವ ನಿಟ್ಟಿನಲ್ಲಿ ವೀರ್ ಸಾವರ್ಕರ್‌ರಂತಹ ಕ್ರಾಂತಿಕಾರಿಗಳ ಪಾತ್ರವು ದೊಡ್ಡದಾಗಿದೆ ಎಂದು ಹಿಂದೂ ಹಿತರಕ್ಷಣಾ ಸಮಿತಿಯ ರಾಜ್ಯ ಮುಖಂಡ ರಘು ಸಕಲೇಶಪುರ ಹೇಳಿದರು.

ಪಟ್ಟಣದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆ ವತಿಯಿಂದ ಹಳೇ ಬಸ್ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ಅಖಂಡ ಭಾರತ ಸಂಕಲ್ಪ ದಿನಾಚರಣೆಯ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಈ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿಯವರು ಬರಬೇಕಿತ್ತು, ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರದ ಒತ್ತಡದಿಂದ ಪುನೀತ್ ಕೆರೆಹಳ್ಳಿಯವರಿಗೆ ಜಿಲ್ಲಾಡಳಿತ ನಿರ್ಬಂಧ ಹೇರಿರುವುದು ಖಂಡನೀಯ. ಆದರೂ ಸಹ ನೂರಾರು ಯುವ ತರುಣರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ೧೯೪೭ ಆಗಸ್ಟ್ ೧೪ ರ ಮಧ್ಯರಾತ್ರಿ ದೇಶಕ್ಕೆ ಸ್ವಾತಂತ್ರ್ಯ ದೊರಕಿತು. ಆದರೆ ದೇಶ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಎಂದು ಮೂರು ತುಂಡಾಯಿತು. ಆಗಸ್ಟ್ ೧೪ರ ಮಧ್ಯರಾತ್ರಿ ದೇಶದ ಲಕ್ಷಾಂತರ ಹಿಂದೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸಲಾಯಿತು. ಲಕ್ಷಾಂತರ ಹಿಂದೂಗಳನ್ನು ಹತ್ಯೆ ಮಾಡಲಾಯಿತು. ಆದರೆ ಇಂತಹ ಕರಾಳ ರಾತ್ರಿಯನ್ನು ನಾವು ನೆನಪಿಸಿಕೊಳ್ಳುವ ಬದಲು ನಾವು ಪ್ರತಿವರ್ಷ ಆಗಸ್ಟ್ ೧೫ರಂದು ಸಂಭ್ರಮಾಚರಣೆಯಲ್ಲಿ ಮುಳುಗುತ್ತೇವೆ. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ದೇಶ ವಿಭಜನೆಯ ದುರಂತ ಕಥೆಯನ್ನು ಹೇಳಿಕೊಡಬೇಕು. ದೇಶಕ್ಕೆ ಸ್ವಾತಂತ್ರ್ಯವನ್ನು ಯಾರು ತಂದು ಕೊಟ್ಟರು ಎಂದರೆ ಗಾಂಧೀಜಿ ಹಾಗೂ ನೆಹರು ಎಂದು ಹೇಳಲಾಗುತ್ತದೆ, ಆದರೆ ಇವರಿಬ್ಬರಿಗಿಂತಲೂ ಸಾವಿರಾರು ಕ್ರಾಂತಿಕಾರರು ದೇಶಕ್ಕೆ ಸ್ವಾತಂತ್ರ್ಯ ತರಲು ಪ್ರಾಣವನ್ನೇ ಮುಡಿಪಾಗಿಟ್ಟಿದ್ದರು. ಹೀಗಾಗಿ ಮಕ್ಕಳಿಗೆ ನಾವು ನೈಜ ಇತಿಹಾಸವನ್ನು ತಿಳಿಸಬೇಕು ಎಂದು ಹೇಳಿದರು. ದೇಶ ವಿಭಜನೆಯಾದರೆ ದೇಶದಲ್ಲಿರುವ ಎಲ್ಲಾ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಬೇಕು, ಅಲ್ಲಿರುವ ಎಲ್ಲಾ ಹಿಂದೂಗಳು ಭಾರತಕ್ಕೆ ಬರಬೇಕು ಎಂದು ಸಂವಿಧಾನದ ಪಿತಾಮಹ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದರು. ಆದರೆ ಅಂಬೇಡ್ಕರ್‌ರವರ ಮಾತಿಗೆ ಬೆಲೆ ಕೊಡದೆ ಜಾತ್ಯಾತೀತ ದೇಶವನ್ನಾಗಿ ಮಾಡಲಾಯಿತು ಎಂದು ಹೇಳಿದರು.

ದತ್ತಪೀಠಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹೋಗುವವರು ಸಕಲೇಶಪುರದ ಕಾರ್ಯಕರ್ತರಾಗಿದ್ದಾರೆ. ಸರ್ಕಾರಕ್ಕೆ ತಾಕತ್ತಿದ್ದರೆ ದತ್ತಪೀಠದಲ್ಲಿರುವ ಗೋರಿಗಳ ಉತ್ಥಾನವನ್ನು ಜಿಪಿಆರ್ ಹಾಗೂ ರೆಡಾರ್ ಮುಖಾಂತರ ಮಾಡಲಿ, ಕ್ಷೇತ್ರದ ಶಾಸಕರು ಗೆಲುವು ಸಾಧಿಸುವಲ್ಲಿ ಹಿಂದೂ ಕಾರ್ಯಕರ್ತರ ಶ್ರಮ ಹೆಚ್ಚಿದ್ದು ಇದಕ್ಕೆ ತಕ್ಕಂತೆ ಕ್ಷೇತ್ರದ ಜನರಿಗೆ ಶಾಸಕರು ಕ್ಷೇತ್ರದ ಸಮಸ್ಯೆಗಳನ್ನು ಸದನದಲ್ಲಿ ಗಟ್ಟಧ್ವನಿ ಮೂಲಕ ಹೊರಹಾಕುತ್ತಿದ್ದು, ಹೀಗಾಗಿ ಅವರು ಜನಸಾಮಾನ್ಯರ ಶಾಸಕರಾಗಿ ಹೊರಹೊಮ್ಮಿದ್ದಾರೆ. ಮುಂಬರುವ ರಾಮಧೂತ ಗಣಪತಿ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕು ಎಂದರು.

ಹಿಂದೂ ಹಿತರಕ್ಷಣಾ ವೇದಿಕೆಯ ಮುಖಂಡ ಶಿವುಜಿಪ್ಪಿ ಮಾತನಾಡಿ, ಸಕಲೇಶಪುರದಲ್ಲಿ ಎಲ್ಲಾ ವರ್ಗದವರು ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಸಂಘಟನೆ ವತಿಯಿಂದ ಗೋಹತ್ಯೆ ತಡೆಗೆ, ಲವ್ ಜಿಹಾದ್ ಹಾಗೂ ಲ್ಯಾಂಡ್ ಜಿಹಾದ್ ತಡೆಗೆ ನಿರಂತರವಾಗಿ ಶ್ರಮಿಸಲಾಗುತ್ತಿದೆ ಎಂದರು.

ಕಾರ್ಯಕ್ರಮಕ್ಕೆ ಮುಖ್ಯಭಾಷಣಕಾರರಾಗಿ ಆಗಮಿಸಬೇಕಿದ್ದ ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿರವರಿಗೆ ನಿರ್ಬಂಧ ಹೇರಿದ್ದರಿಂದ ಅವರು ಕಾರ್ಯಕ್ರಮಕ್ಕೆ ಬರಲಿಲ್ಲ. ಪಟ್ಟಣದ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಹಳೆ ಬಸ್ ನಿಲ್ದಾಣದವರೆಗೆ ಜಿಟಿ ಜಿಟಿ ಮಳೆಯ ನಡುವೆ ಬೃಹತ್ ಪಂಜಿನ ಮೆರವಣಿಗೆ ಮಾಡಲಾಯಿತು.

ಈ ಸಂದರ್ಭದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯ ಮುಖಂಡರುಗಳಾದ ಕೌಶಿಕ್ ಹೆನ್ನಲಿ, ಮಂಜು ಕಬ್ಬಿನಗದ್ದೆ, ದಿಲೀಪ್, ದುಷ್ಯಂತ್, ಧರ್ಮೇಶ್, ಶೇಖರ್ ಕಬ್ಬಿನಗದ್ದೆ, ಬಿಜೆಪಿ ತಾಲೂಕು ಅಧ್ಯಕ್ಷ ವಳಲಹಳ್ಳಿ ಅಶ್ವತ್ಥ್, ಬಿಜೆಪಿ ಮುಖಂಡರುಗಳಾದ ಪ್ರತಿಭಾ ಮಂಜನಾಥ್, ಬಬಿತಾ ವಿಶ್ವನಾಥ್, ಮುಂತಾದವರು ಹಾಜರಿದ್ದರು.-----

ದೇಶದಲ್ಲಿ ಹಿಂದೂ ಧಾರ್ಮಿಕ ಕೇಂದ್ರಗಳು, ಹಿಂದೂಗಳ ನಂಬಿಕೆಗಳ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಧರ್ಮಸ್ಥಳ ಹಿಂದೂಗಳ ಪವಿತ್ರ ಕ್ಷೇತ್ರವಾಗಿದ್ದು, ಆದರೂ ಸಹ ವಿನಾಕಾರಣ ಅನಾಮಿಕ ಎಂಬ ವ್ಯಕ್ತಿಗೆ ಮುಖವಾಡ ಹಾಕಿ ಎಸ್.ಐ.ಟಿ ತಂಡ ರಚಿಸಿ ತನಿಖೆ ಮಾಡಲಾಗುತ್ತಿದೆ. ಕೂಡಲೇ ಈ ಅನಾಮಿಕನನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಹಾಗೂ ಧರ್ಮಸ್ಥಳ ವಿರುದ್ಧ ಅಪಪ್ರಚಾರ ನಿಲ್ಲಿಸಬೇಕು.

-ರಘು ಸಕಲೇಶಪುರ, ರಾಜ್ಯ ಮುಖಂಡ, ಹಿಂದೂ ಹಿತರಕ್ಷಣಾ ಸಮಿತಿ