ಮಕ್ಕಳಿಗೆ ಪ್ರತಿಭೆ ಅನಾವರಣಕ್ಕೆ ಪಾಲಕರು, ಶಿಕ್ಷಕರು ಹೊಣೆ

| Published : Nov 22 2025, 02:30 AM IST

ಸಾರಾಂಶ

ಪ್ರತಿಯೊಂದು ಮಗುವಿನಲ್ಲೂ ಒಂದಿಲ್ಲೊಂದು ಪ್ರತಿಭೆ ಇದ್ದೇ ಇರುತ್ತದೆ

ಕಾರಟಗಿ: ಪೋಷಕರು ಮತ್ತು ಶಿಕ್ಷಕರು ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದರೆ ಮಾತ್ರ ಮಕ್ಕಳ ಪ್ರತಿಭೆ ಹೊರಹೊಮ್ಮಲು ಸಾಧ್ಯವಾಗುತ್ತದೆ. ಹಾಗೆಯೇ ಮಕ್ಕಳು ಶಿಕ್ಷಣದ ಜತೆಗೆ ಸಂಗೀತ, ಸಾಹಿತ್ಯ, ಕಲೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಬೇಕೆಂದು ಶರಣಬಸವೇಶ್ವರ ವಿದ್ಯಾ ಸಂಸ್ಥೆಯ ಅಧ್ಯಕ್ಷ ಡಾ. ಎಸ್.ಬಿ.ಶೆಟ್ಟರ್ ಹೇಳಿದರು.

ಇಲ್ಲಿನ ಶರಣಬಸವೇಶ್ವರ ವಿದ್ಯಾ ಸಂಸ್ಥೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶುಕ್ರವಾರ ನಡೆದ ಚಿಗುರು ಬಾಲ ಪ್ರತಿಭೆಗಳ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರತಿಯೊಂದು ಮಗುವಿನಲ್ಲೂ ಒಂದಿಲ್ಲೊಂದು ಪ್ರತಿಭೆ ಇದ್ದೇ ಇರುತ್ತದೆ. ಅದು ಅನಾವರಣಗೊಂಡಾಗ ಪ್ರತಿಭೆ ಗುರುತಿಸಿ ಉತ್ತೇಜನ ನೀಡಬೇಕು. ಅದನ್ನು ಒಳ್ಳೆಯ ಮಾರ್ಗದಲ್ಲಿ ಮುನ್ನಡೆಸಬೇಕು. ಮಕ್ಕಳು ರಾಷ್ಟ್ರದ ಆಸ್ತಿಯಾಗುತ್ತಾರೆ. ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಕ್ಕಳ ಕಲೆ ಪ್ರದರ್ಶಿಸಿಲು ಚಿಗುರು ಕಾರ್ಯಕ್ರಮ ಸೂಕ್ತ ವೇದಿಕೆಯಾಗಿದೆ ಎಂದರು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹನುಮಂತಪ್ಪ ನಾಯಕ ಮಾತನಾಡಿ, ಕನ್ನಡ ನಾಡು, ನುಡಿ, ನೆಲಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದ್ದು, ಮಕ್ಕಳಿಗೆ ಈ ಶ್ರೀಮಂತ ಪರಂಪರೆಯ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಈ ಚಿಗುರು ಕಾರ್ಯಕ್ರಮ ಅತ್ಯುತ್ತಮ ವೇದಿಕೆಯಾಗಿದೆ. ಮಕ್ಕಳು ಈ ವೇದಿಕೆ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರುಣಾಕರ ಪ್ರಾಸ್ತಾವಿಕ ಮಾತುಗಳನ್ನಾಡಿ, ಬಾಲ್ಯದಲ್ಲಿ ಮಕ್ಕಳಿಗೆ ಪ್ರೋತ್ಸಾಹ ನೀಡಿದರೆ ವಿವಿಧ ರಂಗದಲ್ಲಿ ಭಾಗವಹಿಸಲಿಕ್ಕೆ ಸಾಧ್ಯವಾಗುವುದು. ಚಿಗುರು ಕಾರ್ಯಕ್ರಮದಿಂದ ಹೊಸ ಪ್ರತಿಭೆಗಳು ಹೊರಹೊಮ್ಮಲು ಸಹಾಯಕವಾಗಲಿ ಎನ್ನುವ ಕಾರಣದಿಂದ ಕರ್ನಾಟಕ ಸರ್ಕಾರ ನಮ್ಮ ಇಲಾಖೆ ಕಡೆಯಿಂದ ಈ ಕಾರ್ಯಕ್ರಮ ಆಯೋಜಿಸಿದ್ದು, ಇದರ ಸದುಪಯೋಗ ಪಡೆಯಬೇಕೆಂದರು.

ಕಸಾಪ ಅಧ್ಯಕ್ಷ ಶರಣಪ್ಪ ಕೋಟ್ಯಾಳ ಮಾತನಾಡಿದರು.

ಕಾರ್ಯಕ್ರಮವನ್ನು ಪುರಸಭೆ ಅಧ್ಯಕ್ಷೆ ರೇಖಾ ರಾಜಶೇಖರ ಅನೆಹೊಸೂರು ಉದ್ಘಾಟಿಸಿದರು.

ಸನ್ಮಾನ - ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಎ.ಜಿ. ಕಾರಟಗಿ ಹಾಗೂ ರಾಷ್ಟ್ರೀಯ ಯುವ ಪ್ರಶಸ್ತಿ ಪಡೆದ ಸನಾ ಇಬ್ರಾಹಿಂ ಆಮದಿಹಾಳ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ನಂತರ ಜಿಲ್ಲೆಯ ವಿವಿದೆಢೆಯಿಂದ ಆಗಮಿಸಿದ್ದ ಬಾಲ ಪ್ರತಿಭೆಗಳು ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ಸಮೂಹ ನೃತ್ಯ, ಜಾನಪದ ಹಾಡುಗಳು, ನೃತ್ಯ, ಬಯಲಾಟ ಪ್ರದರ್ಶನ ಹಾಗೂ ಏಕಪಾತ್ರಾಭಿನಯ ಕಲೆಗಳ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಜಗದೀಶ ಅವರಾದಿ, ಕಾರ್ಯದರ್ಶಿ ಚಂದ್ರಶೇಖರ ಸೋಮಲಾಪುರ, ಖಚಾಂಚಿ ಮಲ್ಲಿಕಾರ್ಜುನ ಕೊಟಗಿ ನಿರ್ದೇಶಕ ರುದ್ರೇಶ್ ಗಣಾಚಾರಿ, ಮಲ್ಲಿಕಾರ್ಜುನ ಹಿಂದುಪುರ, ರಾಕೇಶ್ ಕಂಚಿ, ಪ್ರವೀಣ್ ಗದ್ದಿ, ಆಡಳಿತಾಧಿಕಾರಿ ಶಿವಕುಮಾರ ದಿವಟರ, ಜಾನಪದ ಅಕಾಡೆಮಿ ಸದಸ್ಯ ಮಹಿಬೂಬ್ ಕಿಲ್ಲೇದಾರ್, ಅಮರೇಶ ಪಾಟೀಲ್, ಮಹಾಂತೇಶ ಗದ್ದಿ, ಜಗದೀಶ ಹಳ್ಳೂರು, ಶರಣಮ್ಮ ಉಪಸ್ಥಿತರಿದ್ದರು.