ಸಾರಾಂಶ
ಆತ್ಮಭೂಷಣ್
ಕನ್ನಡಪ್ರಭ ವಾರ್ತೆ ಮಂಗಳೂರುಅವಿಭಜಿತ ದ.ಕ. ಜಿಲ್ಲೆಯಲ್ಲಿ ಒಂದು ಸ್ಥಾನಕ್ಕೆ ನಡೆದ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಬಿಜೆಪಿ ನಿರಾಯಾಸ ಗೆಲುವು ಪಡೆದುಕೊಂಡಿದೆ. ಈ ಮೂಲಕ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಮತ್ತೊಮ್ಮೆ ತನ್ನ ಪ್ರಾಬಲ್ಯ ತೋರಿಸಿದೆ. ರಾಜ್ಯದಲ್ಲಿ ಆಡಳಿತಾರೂಢ ಸರ್ಕಾರ ಇದ್ದರೂ ಕಾಂಗ್ರೆಸ್‌ಗೆ ತುರುಸಿನ ಪೈಪೋಟಿ ನೀಡಲೂ ಆಗಲಿಲ್ಲ. ಎಸ್‌ಡಿಪಿಐ ಧೂಳೀಪಟವಾಗಿದೆ. ಬಿಜೆಪಿ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿತ್ತು. ಮಾತ್ರವಲ್ಲ ಗ್ರಾಮ ಮಟ್ಟದಲ್ಲಿ ಪಂಚಾಯ್ತಿ ಮತದಾರರನ್ನು ತಲುಪುವ ಕೆಲಸ ಮಾಡಿತ್ತು. ಮುಖ್ಯವಾಗಿ ಬಿಜೆಪಿ ಬೆಂಬಲಿತ ಮತದಾರರ ಸಂಖ್ಯೆಯೇ ಅಧಿಕವಾಗಿದ್ದು, ಇದು ಬಿಜೆಪಿ ಪಾಳಯದಲ್ಲಿ ಗೆಲುವಿನ ಹಾದಿಯನ್ನು ಸುಲಭವಾಗಿ ತೆರೆದಿತ್ತು. ಅತಿಯಾದ ಆತ್ಮವಿಶ್ವಾಸದ ಬದಲು ಗ್ರಾಮ ಮಟ್ಟಕ್ಕೆ ತಂಡವಾಗಿ ತೆರಳಿ ಪ್ರಚಾರ ಮಾಡಿದ ಫಲ ಕ್ಷೇತ್ರವನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ.
ಕಾಂಗ್ರೆಸ್ ನಿರಾಸಕ್ತಿ:ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಬ್ಬರು ಉಸ್ತುವಾರಿ ಸಚಿವರು, ಕೆಪಿಸಿಸಿ ಕಾರ್ಯಾಧ್ಯಕ್ಷರು ಇದ್ದರೂ ಕಾಂಗ್ರೆಸ್‌ಗೆ ಕನಿಷ್ಠ ಬಿಜೆಪಿ ಅಭ್ಯರ್ಥಿಗೆ ಬಿರುಸಿನ ಪೈಪೋಟಿ ನೀಡಲೂ ಸಾಧ್ಯವಾಗಿಲ್ಲ. ಪ್ರತಿ ಉಪ ಚುನಾವಣೆಯನ್ನು ಗೆಲ್ಲಲೇ ಬೇಕು ಎಂಬ ಟಾಸ್ಕ್‌ನ್ನು ರಾಜ್ಯ ನಾಯಕರು ನೀಡಿದರೂ ಪ್ರಯೋಜನವಾಗಲಿಲ್ಲ. ಸ್ಥಳೀಯಾಡಳಿತದ ಈ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರ ಸಂಖ್ಯೆ ಅಧಿಕವಾಗಿದೆ. ಹಾಗಾಗಿ ಗೆಲ್ಲುವುದು ಸುಲಭವಲ್ಲ ಎಂಬ ಪೂರ್ವ ನಿರ್ಧಾರಕ್ಕೆ ಬಂದಂತೆ ಕಾಂಗ್ರೆಸಿಗರು ವರ್ತಿಸತೊಡಗಿದರು. ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಸಚಿವರು ಬಂದುಹೋದ್ದು ಬಿಟ್ಟರೆ ಗ್ರಾಮ ಮಟ್ಟದಲ್ಲಿ ಪ್ರಚಾರದ ತೀವ್ರ ಕೊರತೆ ಕಾಣಿಸಿತ್ತು.
‘ಕೈ’ ಹಿಡಿಯದ ಗ್ಯಾರಂಟಿ ಸ್ಕೀಂ:ಸಂಖ್ಯಾ ಬಲ ಇಲ್ಲದಿದ್ದರೂ ನಾಮ ಬಲದಿಂದ ಗೆಲ್ಲುವ ಕಾಂಗ್ರೆಸ್ ಯೋಚನೆ ಕಾರ್ಯಗತವಾಗಿಲ್ಲ. ರಾಜ್ಯ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳನ್ನು ನೆಚ್ಚಿಕೊಂಡು ಮತ ವಿಭಜನೆ ಆಗಬಹುದು ಎಂಬುದು ಮುಖಂಡರ ಲೆಕ್ಕಾಚಾರವಾಗಿತ್ತು. ಈ ಬಾರಿ ಸ್ಥಳೀಯ ಆಡಳಿತದಲ್ಲಿ ಮಹಿಳಾ ಮತದಾರರ ಸಂಖ್ಯೆ ಅಧಿಕವಾಗಿತ್ತು. ಹಾಗಾಗಿ ಅವರು ಹೆಚ್ಚಿನ ಸಂಖ್ಯೆಯಲ್ಲಿ ಗ್ಯಾರಂಟಿ ಯೋಜನೆ ಬೆಂಬಲಿಸಿ ಕಾಂಗ್ರೆಸ್‌ಗೆ ಮತ ಚಲಾಯಿಸುವ ಮೂಲಕ ಸುಮಾರು ಎರಡು ಸಾವಿರದಷ್ಟು ಸಂಖ್ಯಾಬಲದ ಕೊರತೆ ನೀಗಬಹುದು ಎಂಬ ವಿಶ್ವಾಸದಲ್ಲಿದ್ದರು. ಆದರೆ ಮಹಿಳಾ ಮತದಾರರು ಕೂಡ ಗ್ಯಾರಂಟಿ ಯೋಜನೆಯಡಿ ‘ಕೈ’ ಹಿಡಿಯಲಿಲ್ಲ.
ಜಾತಿ ಲೆಕ್ಕಾಚಾರದಲ್ಲಿ ಕೂಡ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿತ್ತು. ಬಿಲ್ಲವ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರೂ ಮತದಾರರು ಜಾತಿ ಲೆಕ್ಕಾಚಾರಕ್ಕೆ ಮನ್ನಣೆ ನೀಡಲಿಲ್ಲ.ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿ ಅಧಿಪತ್ಯ!
ಪುತ್ತೂರಿನವರೇ ಆದ ಕಿಶೋರ್ ಕುಮಾರ್ ಅವರನ್ನು ಗೆಲ್ಲಿಸುವ ಮೂಲಕ ಪುತ್ತೂರಲ್ಲಿ ತನ್ನದೇ ಅಧಿಕಾರದ ಅಧಿಪತ್ಯವನ್ನು ಮರಳಿ ಸ್ಥಾಪಿಸುವ ಗುರಿಯನ್ನು ಬಿಜೆಪಿ ಈಡೇರಿಸಿದೆ.ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಬಂಡಾಯ ಸ್ಪರ್ಧೆಯಲ್ಲಿ ಪುತ್ತೂರಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಕಾಂಗ್ರೆಸ್‌ಗೆ ಗೆಲುವಿನ ಲಾಭವಾಗಿತ್ತು. ಆ ಬಳಿಕ ಬಿಜೆಪಿ ಬೆಂಬಲಿತ ಕ್ಷೇತ್ರದಲ್ಲಿ ಅಧಿಕಾರ ಇಲ್ಲದೆ ಹಪಹಪಿಸುವಂತಾಗಿತ್ತು. ಈ ಕೊರತೆಯನ್ನು ಈಗ ಬಿಜೆಪಿ ನೀಗಿಸಿಕೊಂಡಿದೆ. ಹಿಂದುಳಿದ ವರ್ಗಕ್ಕೆ ಸೇರಿದ ಕಿಶೋರ್ ಕುಮಾರ್ ಅವರನ್ನು ಪರಿಷತ್ ಸದಸ್ಯರಾಗಿ ಆರಿಸುವ ಮೂಲಕ ಪುತ್ತೂರಲ್ಲಿ ಕಾಂಗ್ರೆಸ್‌ಗೆ ಸೆಡ್ಡುಹೊಡೆದಿದೆ.