ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ನಾನು ಪ್ರಬಲ ಆಕಾಂಕ್ಷಿಯಾಗಿದ್ದೆ. ಆದರೆ ನನ್ನನ್ನು ಕಡೆಗಣಿಸಿ ಎಸ್.ವಿ. ಸಂಕನೂರು ಅವರಿಗೆ ಟಿಕೆಟ್ ನೀಡಿದ್ದಾರೆ. ಹೀಗಾಗಿ, ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಸ್ಥಾನದ ಜವಾಬ್ದಾರಿಯಿಂದ ಬಿಡುಗಡೆಗೊಳಿಸಿ ಎಂದು ರಾಜ್ಯಾಧ್ಯಕ್ಷರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆಂದು ಲಿಂಗರಾಜ ಪಾಟೀಲ ಹೇಳಿದರು.

ಹುಬ್ಬಳ್ಳಿ:

ಪಶ್ಚಿಮ ಪದವೀಧರ ಕ್ಷೇತ್ರದ ಟಿಕೆಟ್‌ ಸಿಗದ ಕಾರಣ ಬಿಜೆಪಿ ಶಿಸ್ತು ಸಮಿತಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಲಿಂಗರಾಜ ಪಾಟೀಲ ರಾಜೀನಾಮೆ ನೀಡಿದ್ದಾರೆ.

ಬುಧವಾರ ಮಾಧ್ಯಮಗೋಷ್ಠಿಯಲ್ಲಿ ತಮ್ಮ ರಾಜೀನಾಮೆ ಪತ್ರ ಪ್ರದರ್ಶಿಸುತ್ತ ಲಿಂಗರಾಜ ಪಾಟೀಲ್ ಕಣ್ಣೀರು ಸುರಿಸಿದರು.

ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ನಾನು ಪ್ರಬಲ ಆಕಾಂಕ್ಷಿಯಾಗಿದ್ದೆ. ಆದರೆ ನನ್ನನ್ನು ಕಡೆಗಣಿಸಿ ಎಸ್.ವಿ. ಸಂಕನೂರು ಅವರಿಗೆ ಟಿಕೆಟ್ ನೀಡಿದ್ದಾರೆ. ಹೀಗಾಗಿ, ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಸ್ಥಾನದ ಜವಾಬ್ದಾರಿಯಿಂದ ಬಿಡುಗಡೆಗೊಳಿಸಿ ಎಂದು ರಾಜ್ಯಾಧ್ಯಕ್ಷರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವುದಾಗಿ ತಿಳಿಸಿದರು.

ಬಿಜೆಪಿಯಲ್ಲಿ ನಿಷ್ಠಾವಂತ, ಪ್ರಾಮಾಣಿಕ ಕಾರ್ಯಕರ್ತರಿಗೆ ಬೆಲೆಯಿಲ್ಲ ಎನ್ನುವುದು ಮತ್ತೆ ಮತ್ತೆ ದೃಢವಾಗುತ್ತಿದೆ. ಬಿಜೆಪಿಯಿಂದ ನನಗೆ ಅನ್ಯಾಯವಾಗಿದೆ. ಈ ಮೂಲಕ ಕಾರ್ಯಕರ್ತರಿಗೆ ಅನ್ಯಾಯ ಮಾಡಿದಂತಾಗಿದೆ. 37 ವರ್ಷ ಪಕ್ಷಕ್ಕೆ ದುಡಿದಿದ್ದೇನೆ. ಇದನ್ನು ಗುರುತಿಸದೇ ಪಕ್ಷ ಹೊರಗಿನಿಂದ ಬಂದವರಿಗೆ ಮಣೆ ಹಾಕಿ ಟಿಕೆಟ್ ನೀಡಿದ್ದು, ಸಾಕಷ್ಟು ನೋವು ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈಗಲೂ ಕಾಲ ಮಿಂಚಿಲ್ಲ, ನನಗೆ ಟಿಕೆಟ್ ಸಿಗುವ ಭರವಸೆ ಇದ್ದು, ಎಂಟು ದಿನಗಳ ವರೆಗೆ ಕಾದು ನೋಡುತ್ತೇನೆ. ಅವಕಾಶ ಸಿಗದಿದ್ದರೆ ಬೇರೆ ನಿರ್ಧಾರ ತೆಗೆದುಕೊಳ್ಳುತ್ತೇನೆ. ಸದ್ಯಕ್ಕೆ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಸ್ಥಾನದ ಜವಾಬ್ದಾರಿಯಿಂದ ಬಿಡುಗಡೆಗೊಳಿಸುವಂತೆ ರಾಜ್ಯಾಧ್ಯಕ್ಷರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ ಎಂದು ಹೇಳಿದರು.

ಸಂಕನೂರ ಫೋನ್ ಮಾಡಿಲ್ಲ:

ಟಿಕೆಟ್ ಘೋಷಣೆ ಬಳಿಕವೂ ಸಂಕನೂರ ಅವರು ನನಗೆ ಸೌಜನ್ಯಕ್ಕೂ ಕರೆ ಮಾಡಿ ಮಾತನಾಡಿಲ್ಲ. ಈ ಹಿಂದೆ ಇದೇ ಸಂಕನೂರ ಟಿಕೆಟ್ ವಿಚಾರವಾಗಿ ನನ್ನ ಕಾಲು ಹಿಡಿಯಲು ಬಂದಿದ್ದರು. ನೀವು ಹಿರಿಯರು, ಗುರುಗಳು ಹೀಗೆಲ್ಲ ಮಾಡಬಾರದು ಎಂದು ನಾನೇ ಅವರ ಕಾಲು ಮುಗಿದಿದ್ದೇನೆ ಎಂದರು.

ಸಂಕನೂರ ಪಕ್ಷಕ್ಕೆ ಏನು ಮಾಡಿದ್ದಾರೆ ಎಂದು ಪ್ರತಿಯೊಬ್ಬರೂ ಕೇಳುತ್ತಿದ್ದಾರೆ. ಅವರು ಯಾರೊಬ್ಬರ ಫೋನ್ ಕರೆಗೆ ಸ್ಪಂದಿಸುವುದಿಲ್ಲ. ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿಲ್ಲ, ಅಂಥವರಿಗೆ ಯಾವ ಆಧಾರದ ಮೇಲೆ ಟಿಕೆಟ್ ನೀಡಲಾಗಿದೆ ಎಂಬುದು ಆಶ್ಚರ್ಯವಾಗಿದೆ. ಪಶ್ಚಿಮ ಪದವೀಧರ ಚುನಾವಣೆಗೆ ಸಂಬಂಧಿಸಿದಂತೆ ಅತಿ ಹೆಚ್ಚು ಮತದಾರರ ನೋಂದಣಿ ಮಾಡಿಸಿದ್ದೇನೆ. ನಿರಂತರವಾಗಿ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದು, ಟಿಕೆಟ್ ದೊರೆಯುವುದು ನಿಶ್ಚಿತ ಎಂದು ಪ್ರತಿಯೊಬ್ಬ ನಾಯಕರು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೆ. ಆದರೆ, ಪಕ್ಷ ಅಭ್ಯರ್ಥಿಯ ಹೆಸರು ಘೋಷಣೆ ಮಾಡಿದ್ದನ್ನು ಗಮನಿಸಿದ ಮೇಲೆ ನನಗೆ ಬಹಳ ಬೇಸರವಾಗಿದೆ ಎಂದು ಅಳಲು ತೋಡಿಕೊಂಡರು.

ಭಾವುಕರಾದ ಲಿಂಪಾ:

3 ಸಲ ಜಿಲ್ಲಾಧ್ಯಕ್ಷ ಸೇರಿದಂತೆ ಎಲ್ಲ ಬಗೆಯ ಹುದ್ದೆ ನಿಭಾಯಿಸಿದ್ದೇನೆ. ಬಿಜೆಪಿ ಕಟ್ಟಿ ಬೆಳೆಸಿದವರಲ್ಲಿ ನಾನು ಒಬ್ಬ. ಆದರೆ, ನಾಲ್ಕೈದು ಬಾರಿ ನನಗೆ ಅನ್ಯಾಯ ಮಾಡಲಾಗಿದೆ. ಇದು ಬಹಳ ಬೇಸರ ತರಿಸಿದೆ ಎಂದು ಲಿಂಗರಾಜ ಪಾಟೀಲ್ ಕಣ್ಣೀರು ಸುರಿಸಿದರು.

ಯಾರು ಅನ್ಯಾಯ ಮಾಡಿದ್ದು ಎಂಬ ಮಾಧ್ಯಮದವರ ಪ್ರಶ್ನೆಗೆ, ಮುಂದೆ ಹೇಳುತ್ತೇನೆ. ಆದರೆ, ನಾನು ಬೆಳೆಯಬಾರದು. ಇಲ್ಲಿ ಮತ್ತೊಬ್ಬರು ಬೆಳೆಯಬಾರದು ಎಂಬ ದುರುದ್ದೇಶವೂ ನನಗೆ ಟಿಕೆಟ್‌ ಕೈ ತಪ್ಪಲು ಕಾರಣವಾಗಿದೆ ಎಂದು ಆರೋಪಿಸಿದರು.