ಬೇಲೂರಲ್ಲಿ ಪ್ರವಾಸಿಗರ ಮೇಲೆ ಪಾರ್ಕಿಂಗ್‌ ಗುತ್ತಿಗೆದಾರನಿಂದ ಹಲ್ಲೆ

| Published : Oct 21 2023, 12:30 AM IST

ಬೇಲೂರಲ್ಲಿ ಪ್ರವಾಸಿಗರ ಮೇಲೆ ಪಾರ್ಕಿಂಗ್‌ ಗುತ್ತಿಗೆದಾರನಿಂದ ಹಲ್ಲೆ
Share this Article
  • FB
  • TW
  • Linkdin
  • Email

ಸಾರಾಂಶ

ಪಾರ್ಕಿಂಗ್‌ ವಿಚಾರಕ್ಕೆ ಗಲಾಟೆ ನಡೆದು ಪಾರ್ಕಿಂಗ್ ಸುಂಕ ವಸೂಲಿಗಾರನೋರ್ವ ಮಹಿಳಾ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿರುವ ಘಟನೆ ಬೇಲೂರಿನಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೇಲೂರು ವಿಶ್ವ ಪಾರಂಪರಿಕ ತಾಣಕ್ಕೆ ಕಪ್ಪುಚುಕ್ಕೆ ಎಂದು ಪ್ರವಾಸಿಗರ ಅಸಮಾಧಾನ । ಪ್ರವಾಸಿಗರ ರಕ್ಷಣೆಗೆ ಮುಂದಾಗಬೇಕೆಂದು ಮನವಿ ಪ್ರವಾಸಿಗರ ವಾಹನ ನಿಲುಗಡೆಗೆ ಸಂಬಂಧಪಟ್ಟಂತೆ ವಾದ ವಿವಾದ ನಡೆದು ಪಾರ್ಕಿಂಗ್ ಸುಂಕ ವಸೂಲಿಗಾರರು ಪ್ರವಾಸಿಗರ ಮೇಲೆ ಹಲ್ಲೆ ಮಾಡಿರುವ ಘಟನೆ ಚನ್ನಕೇಶವ ದೇಗುಲದ ಆವರಣದಲ್ಲಿ ಶುಕ್ರವಾರ ನಡೆದಿದೆ. ಹಲ್ಲೆ ಮಾಡಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಈ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಇತ್ತೀಚೆಗೆ ಪ್ರವಾಸೋದ್ಯಮ ಇಲಾಖೆಯವರು ದೇಗುಲದ ಹಿಂದಿನ ಜಾಗವನ್ನು ಖಾಸಗಿ ವ್ಯಕ್ತಿಗೆ 5 ವರ್ಷಕ್ಕೆ ಟೆಂಡರ್ ನೀಡಿದ್ದಾರೆ. ವಿಶೇಷವೆಂದರೆ ಟೆಂಡರ್‌ದಾರ ದೇಗುಲದ ಹಿಂಭಾಗದಲ್ಲಿ ಪಾರ್ಕಿಂಗ್ ವಸೂಲಿ ಮಾಡಬೇಕು. ಆದರೆ ಟೆಂಡರ್‌ದಾರ ಮಾತ್ರ ದೇಗಲದ ಮುಂಭಾಗದಲ್ಲೇ ದಬ್ಬಾಳಿಕೆ ನೆಡೆಸಿ ಪಾರ್ಕಿಂಗ್ ವಸೂಲಿ ನಡೆಸುತ್ತಿದ್ದಾರೆ. ಇಷ್ಟಾದರೂ ಶಾಸಕರ ಕಣ್ಣಿಗೆ ಮಾತ್ರ ಕಾಣದೆ ಇರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಪ್ರವಾಸಿಗರಲ್ಲಿ ಆತಂಕ: ಪ್ರವಾಸಿಗರ ಮೇಲೆ ಹಲ್ಲೆ ಆದರೂ ತಾಲೂಕು ಆಡಳಿತ, ದೇಗುಲದ ವ್ಯವಸ್ಥಾಪನ ಸಮಿತಿ ಯಾವುದೇ ಕ್ರಮ ಕೈಗೊಳ್ಳದೇ ಪ್ರವಾಸಿ ತಾಣಕ್ಕೆ ಪ್ರವಾಸಿಗರು ಹಾಗೂ ಭಕ್ತರು ಆತಂಕಕ್ಕೆ ಒಳಗಾಗಿದ್ದು, ಇದೇ ರೀತಿ ಇವರ ದೌರ್ಜನ್ಯ ಮುಂದುವರಿದಲ್ಲಿ ಪ್ರವಾಸಿಗರು ವಿಶ್ವವಿಖ್ಯಾತ ಚನ್ನಕೇಶವ ದೇಗುಲವನ್ನು ನೋಡಲು ಮುಜುಗರಪಡುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಸ್ಥಳೀಯರು ಕಿಡಿಕಾರಿದ್ದಾರೆ. ಆಟಕ್ಕುಂಟು ಲೆಕ್ಕಕ್ಕಿಲ್ಲ: ಪ್ರವಾಸೋದ್ಯಮ ಇಲಾಖೆ ಮಾತ್ರ ದೇಗುಲ ಯುನೆಸ್ಕೋ ಪಟ್ಟಿಯಲ್ಲಿ ಸೇರಿದರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಕಣ್ಣುಮುಚ್ಚಿ ಕುಳಿತಿದೆ. ಪೊಲೀಸ್ ಇಲಾಖೆಯವರು ನಮಗೆ ದೂರು ಬಂದರೆ ಮಾತ್ರ ಕ್ರಮ ಕೈಗೊಳ್ಳಲು ಸಾಧ್ಯ ಎಂದು ಅಸಹಾಯಕತೆಯನ್ನು ತೋಡಿಕೊಳ್ಳುತ್ತಾರೆ. ಈ ರೀತಿಯಾದ ಪ್ರಕರಣಗಳು ಹೀಗೇ ಮುಂದುವರಿದರೆ ಜಗತ್ಪ್ರಸಿದ್ಧ ಬೇಲೂರಿಗೆ ಪ್ರವಾಸಿಗರ ಸಂಖ್ಯೆ ಇಳಿಮುಖವಾಗುವ ಸಂಭವವಿದೆ. ಇಂತಹ ಪ್ರಕರಣಗಳಿಂದ ಪ್ರವಾಸಿಗರಲ್ಲಿ ಭೀತಿಯ ವಾತಾವರಣ ನಿರ್ಮಿಸುತ್ತದೆ. ಇನ್ನಾದರೂ ತಾಲೂಕು ಆಡಳಿತ ಇದಕ್ಕೆ ಸೂಕ್ತ ಕ್ರಮ ಕೈಗೊಂಡು ಪೊಲೀಸರನ್ನು ನಿಯೋಜಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ದಾವಣಗೆರೆಯಿಂದ ಕುಟುಂಬ ಸಮೇತರಾಗಿ ಇಲ್ಲಿನ ದೇಗುಲ ವೀಕ್ಷಣೆಗೆ ಆಗಮಿಸಿದ್ದೇವೆ, ಆದರೆ ನಮ್ಮ ವಾಹನವನ್ನು ನನ್ನ ಮಗ ಸೈಡಿನಲ್ಲಿ ನಿಲ್ಲಿಸುವಾಗ ಪಾರ್ಕಿಂಗ್ ಮಾಡುವ ವ್ಯಕ್ತಿ ಅವಾಚ್ಯ ಶಬ್ದಗಳಿಂದ ಗಾಡಿ ತೆಗೆಯೋ ಇಲ್ಲಿಂದ ಎಂದು ಗಲಾಟೆ ಪ್ರಾರಂಭಿಸಿ ಮಗನ ಮೇಲೆ ಹಲ್ಲೆ ಮಾಡಿದರು. ಬಿಡಿಸಲು ಮುಂದಾದ ನನ್ನನ್ನು ಮಹಿಳೆ ಎಂಬುದನ್ನು ನೋಡದೆ ತಳ್ಳಿದರು. ಬಿದ್ದ ರಭಸಕ್ಕೆ ಮುಖಕ್ಕೆ ತುಂಬಾ ಹೊಡೆತ ಬಿದ್ದಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಮುಖಕ್ಕೆ ಹೊಲಿಗೆ ಹಾಕಿಸಿಕೊಂಡಿದ್ದೇನೆ. ಇಂತಹ ವಿಶ್ವ ಪ್ರಸಿದ್ಧ ದೇಗುಲದಲ್ಲಿ ಪ್ರವಾಸಿಗರಿಗೆ ಸೂಕ್ತ ರಕ್ಷಣೆ ಇಲ್ಲದೆ ಇರುವುದು ವಿಪರ್ಯಾಸವಾಗಿದೆ. ಮುಂದಾದರೂ ಸಂಬಂಧಪಟ್ಟವರು ಪ್ರವಾಸಿಗರ ರಕ್ಷಣೆಗೆ ಮುಂದಾಗಬೇಕು. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಒಮ್ಮೆ ಭೇಟಿ ಕೊಟ್ಟ ಪ್ರವಾಸಿಗರು ಮತ್ತೆ ಈ ಕಡೆ ಮುಖವನ್ನು ಹಾಕುವುದಿಲ್ಲ . -ವೀಣಾ ಬಸವರಾಜು, ಹಲ್ಲೆಗೊಳಗಾದ ದಾವಣಗೆರೆ ಮಹಿಳೆ ಘಟನೆ ಬಗ್ಗೆ ನನ್ನ ಗಮನಕ್ಕೆ ಬಂದ ತಕ್ಷಣ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದೆ. ಪ್ರವಾಸಿಗರು ಪ್ರಥಮ ಚಿಕಿತ್ಸೆ ಪಡೆದು ಬೇಲೂರಿನಿಂದ ಅವರ ಊರಾದ ದಾವಣಗೆರೆಗೆ ಹೋಗುತ್ತಿದ್ದರು. ನಾನು ಅವರಿರುವ ಕಡೆಯೇ ಹೋಗಿ ಅವರನ್ನು ತಡೆದು ಅವರಿಗೆ ದೇಗುಲದ ಆವರಣದಲ್ಲಿ ಆಗಿರುವ ಘಟನೆ ಬಗ್ಗೆ ಮಾಹಿತಿ ಪಡೆದು ಅವರಿಗೆ ಆತ್ಮಸ್ಥೈರ್ಯ ತುಂಬಿ ಕೇಸು ದಾಖಲಿಸಲು ಮನವಿ ಮಾಡಿದೆ. ಆದರೆ ಅವರು ಈ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಠಾಣೆ ಅಥವಾ ಕೋರ್ಟ್‌ಗೆ ಬರಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಾವು ಯಾವುದೇ ಕೇಸು ದಾಖಲಿಸುವುದಿಲ್ಲ. ಆದರೆ ಇಂಥ ಅದ್ಭುತವಾದ ದೇಗುಲದಲ್ಲಿ ಈ ರೀತಿಯ ಘಟನೆಗಳು ಸಂಭವಿಸಬಾರದು ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಅವರ ನಿರ್ದೇಶನ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಈ ರೀತಿಯ ಘಟನೆ ಸಂಭವಿಸುತ್ತದೆ ಎಂದು ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದ ಜಾಗವನ್ನು ಪಾರ್ಕಿಂಗ್ ನೀಡಿರಲಿಲ್ಲ. ಹಿಂದಿನಿಂದಲೂ ದೇಗುಲದಿಂದ ಒಂದೇ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತಿತ್ತು. ಈಗಾಗಲೇ ಕಳೆದ ನಾಲ್ಕು ತಿಂಗಳಿಂದ ಪಾರ್ಕಿಂಗ್ ಸಂಬಂಧ ಟೆಂಡರ್ ಕರೆಯಲಾಗಿದ್ದು ಯಾರೂ ಕೂಡ ಟೆಂಡರುದಾರರು ಭಾಗವಹಿಸಿಲ್ಲ. ಆದ್ದರಿಂದ ದೇಗುಲದದಿಂದಲೇ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಲಾಗುತ್ತಿತ್ತು. ಕಳೆದ ವಾರ ಪ್ರವಾಸೋದ್ಯಮ ಇಲಾಖೆಯಿಂದ ಟೆಂಡರ್ ನೀಡಿದ್ದು ಅವರು ಕೂಡ ದೇಗುಲದ ಮುಂಭಾಗ ಬಂದು ಪಾರ್ಕಿಂಗ್ ಶುಲ್ಕ ವಸೂಲಿ ಮಾಡುತ್ತಿದ್ದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅವರ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು. - ಮಮತಾ ಎಂ, ತಹಸೀಲ್ದಾರ್