ಪಾರ್ಲಿಮೆಂಟ್ ಮೌನಿ ಬಾಬಾಗಳ ಸ್ಥಳವಲ್ಲ: ಮಾಜಿ ಸಂಸದೆ ತೇಜಸ್ವಿನಿಗೌಡ

| Published : May 01 2024, 01:18 AM IST

ಸಾರಾಂಶ

ಪಾರ್ಲಿಮೆಂಟ್ ಮೌನಿ ಬಾಬಾಗಳ ಸ್ಥಳವಲ್ಲ. ಅಲ್ಲಿ ಸಮರ್ಪಕವಾಗಿ ಮಾತನಾಡುವವರು ಬೇಕು. ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಅರ್ಹರನ್ನು ಆಯ್ಕೆ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಂಸದೆ ತೇಜಸ್ವಿನಿಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪಾರ್ಲಿಮೆಂಟ್ ಮೌನಿ ಬಾಬಾಗಳ ಸ್ಥಳವಲ್ಲ. ಅಲ್ಲಿ ಸಮರ್ಪಕವಾಗಿ ಮಾತನಾಡುವವರು ಬೇಕು. ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಅರ್ಹರನ್ನು ಆಯ್ಕೆ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಂಸದೆ ತೇಜಸ್ವಿನಿಗೌಡ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಸಂಸತ್ ಗೆ ಆಯ್ಕೆಯಾದವರು ರಾಜ್ಯ ಹಾಗೂ ರಾಷ್ಟ್ರದ ವಿಷಯಗಳ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಬೇಕು. ಆ ಮೂಲಕ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವ ಕೆಲಸ ಆಗಬೇಕಿದೆ ಎಂದರು.ರಾಜ್ಯದಿಂದ 25 ಜನ ಬಿಜೆಪಿ ಸಂಸದರು ಆಯ್ಕೆಗೊಂಡಿದ್ದರೂ ಇಲ್ಲಿನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡುತ್ತಿಲ್ಲ. ಇಲ್ಲಿನ ಸಮಸ್ಯೆ ಗಳು ಪರಿಹಾರ ಕಾಣದೆ ಹಾಗೆಯೇ ಉಳಿದುಕೊಂಡಿವೆ ಎಂದು ಬಿಜೆಪಿಗರನ್ನು ತರಾಟೆಗೆ ತೆಗೆದುಕೊಂಡರು.

ಪ್ರಧಾನಿ ನರೇಂದ್ರ ಮೋದಿ ಅವರು ಆಯ್ದ ಪತ್ರಕರ್ತರನ್ನು ಮಾತ್ರ ಮನೆಗೆ ಕರೆಸಿಕೊಂಡು ಸಂದರ್ಶನ ನೀಡುತ್ತಿದ್ದಾರೆ. ಕಳೆದ 10 ವರ್ಷಗಳಲ್ಲಿ ಒಂದೇ ಒಂದು ಸುದ್ದಿಗೋಷ್ಠಿ ಮಾಡಿಲ್ಲ ಏಕೆ ಎಂದು ಪ್ರಶ್ನಿಸಿದ ಅವರು, ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸುವ ಗೋಜಿಗೆ ಪ್ರಧಾನಿಗಳು ಹೋಗುತ್ತಿಲ್ಲ. ಪ್ರವಾಸೋದ್ಯಮ ಅಭಿವದ್ಧಿಗಾಗಿ ಎಷ್ಟು ಹೋಟೆಲ್‌ ಕಟ್ಟಿದ್ದೀರಿ, ಎಷ್ಟು ಶೌಚಾಲಯ ನಿರ್ಮಿಸಿದ್ದೀರಿ ಎನ್ನುವುದನ್ನು ಜನತೆಯ ಗಮನಕ್ಕೆ ತರಬೇಕು ಎಂದು ಒತ್ತಾಯಿಸಿದರು.

ಬಾಗಲಕೋಟೆಯಲ್ಲಿ ಸೋಮವಾರ ಚುನಾವಣೆ ಪ್ರಚಾರ ಸಭೆಯಲ್ಲಿ ಪ್ರಧಾನಿಗಳು ಕರಿ ಕಂಬಳಿ ಹಾಕಿಕೊಂಡಿದ್ದಕ್ಕೆ ತರಾಟೆಗೆ ತೆಗೆದುಕೊಂಡ ತೇಜಸ್ವಿನಿಗೌಡ, ಕುರುಬ ಸಮಾಜದ ಈಶ್ವರಪ್ಪ ಅವರನ್ನು ಏಕೆ ಮುಖ್ಯಮಂತ್ರಿ ಮಾಡಲಿಲ್ಲ. ವಿಜಯಶಂಕರ್‌ ಅವರನ್ನು ಏಕೆ ರಾಜಕೀಯವಾಗಿ ಮುಗಿಸಿದ್ದೀರಿ, ಕಂಬಳಿ ನಾಟಕ ಬಿಟ್ಟು ಬಿಡಿ ಎಂದು ವಾಗ್ದಾಳಿ ನಡೆಸಿದರು.