ಅಡಕೆ ಆಮದು ತಡೆಗೆ ಸಂಸದರು ಧ್ವನಿ ಎತ್ತಲಿ: ಭೀಮಣ್ಣ ನಾಯ್ಕ

| Published : Sep 28 2024, 01:22 AM IST

ಅಡಕೆ ಆಮದು ತಡೆಗೆ ಸಂಸದರು ಧ್ವನಿ ಎತ್ತಲಿ: ಭೀಮಣ್ಣ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರದ ನಿಯಮಗಳ ಮೂಲಕ ಅಡಕೆ ಆಮದು ಆಗುತ್ತಿದೆ. ಇದು ನಿಲ್ಲಬೇಕು. ಅಡಕೆ ಬೆಳೆಯುವ ಜಿಲ್ಲೆಗಳ ಸಂಸದರು ಇದರ ಬಗ್ಗೆ ಧ್ವನಿ ಎತ್ತಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಆಗ್ರಹಿಸಿದರು.

ಶಿರಸಿ: ಮಲೆನಾಡಿನ ಜನರ ಬದುಕಿಗೆ ಆಧಾರವಾಗಿರುವ ಅಡಕೆಗೆ ಕೊಳೆರೋಗ, ದರ ಕುಸಿತದ ಸಮಸ್ಯೆಗಳ ನಡುವೆಯೇ ಹೊರ ರಾಷ್ಟ್ರದಿಂದ ಅಡಕೆ ಆಮದು ಆಗುತ್ತಿರುವುದು ಬೆಳೆಗಾರರಿಗೆ ಆಗುತ್ತಿರುವ ಮೋಸ ಎಂದು ಶಾಸಕ ಭೀಮಣ್ಣ ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಉತ್ತಮವಾದ ಅಡಕೆ ಬೆಳೆಯುತ್ತಿದ್ದರೂ ಸಾವಿರಾರು ಟನ್ ಅಡಕೆ ಹೊರ ರಾಷ್ಟ್ರಗಳಿಂದ ಆಮದು ಆಗುತ್ತಿದೆ. ಇದರಿಂದ ಇಲ್ಲಿನ ಬೆಳೆಗಾರರಿಗೆ ತೀವ್ರ ತೊಂದರೆಯಾಗುತ್ತಿದ್ದು, ಆಮದು ಆಗುತ್ತಿರುವ ಅಡಕೆಯನ್ನು ಸಂಪೂರ್ಣ ಬಂದ್ ಮಾಡಲು ಕ್ರಮ ಆಗಬೇಕು ಎಂದರು. ಕೇಂದ್ರ ಸರ್ಕಾರದ ನಿಯಮಗಳ ಮೂಲಕ ಅಡಕೆ ಆಮದು ಆಗುತ್ತಿದೆ. ಇದು ನಿಲ್ಲಬೇಕು. ಅಡಕೆ ಬೆಳೆಯುವ ಜಿಲ್ಲೆಗಳ ಸಂಸದರು ಇದರ ಬಗ್ಗೆ ಧ್ವನಿ ಎತ್ತಬೇಕು. ಉತ್ತರ ಕನ್ನಡ ಸೇರಿದಂತೆ ವಿವಿಧ ಸಂಸದರು ಪ್ರಧಾನಿಗಳ ಬಳಿ ಮನವಿ ಮಾಡಿ ಆಮದು ಆಗುತ್ತಿರುವ ಅಡಕೆಯನ್ನು ನಿಲ್ಲಿಸಲು ಕ್ರಮ ಆಗಬೇಕು ಎಂದ ಭೀಮಣ್ಣ, ಸಂಸದರು ಜನರ ಕಷ್ಟಗಳಿಗೆ ನಿಲ್ಲಬೇಕು. ಕೇವಲ ಮತಕ್ಕಾಗಿ ಜನರ ಒಲೈಕೆ ಮಾಡುವುದನ್ನು ಬಿಟ್ಟು, ರೈತರ ರಕ್ಷಣೆ ಮಾಡಲಿ. ಸಂಸತ್‌ನಲ್ಲಿ ಧ್ವನಿ ಎತ್ತಲು ಆಗಲಿಲ್ಲ ಎಂದಾದರೆ ಯಾಕೆ ಆಯ್ಕೆಯಾಗಬೇಕು? ಸಾವಿರಾರು ಟನ್ ಆಮದು ಆಗುತ್ತಿದ್ದರೂ ಇದರ ಬಗ್ಗೆ ಚಕಾರ ಎತ್ತಲು ಸಂಸದರು ವಿಫಲ ಆಗಿದ್ದಾರೆ ಎಂದು ಟೀಕಿಸಿದರು.ಪರಿಹಾರಕ್ಕೆ ಮನವಿ:ರಾಜ್ಯದ ಮಲೆನಾಡು ಭಾಗದಲ್ಲಿ ಕೃಷಿಕರು ಅಡಕೆ ನಂಬಿಕೊಂಡಿದ್ದಾರೆ. ಪಾರಂಪರಿಕವಾಗಿ ಅಡಕೆ, ಕಾಳುಮೆಣಸು, ಬಾಳೆ ಬೆಳೆದುಕೊಂಡು ಬಂದಿದ್ದಾರೆ. ಅದರಿಂದಲೇ ಜೀವನ ಸಾಗುತ್ತಿದೆ. ಬೆಳೆಗಾರರ ಜತೆಗೆ ೮- ೧೦ ಕೂಲಿಕಾರರು ಅವಲಂಬನೆ ಮಾಡಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಅಡಕೆ ಬೆಳೆಗಾರರ ಸಮಸ್ಯೆ ಬಗೆಹರಿಸಬೇಕಾಗಿದೆ.

ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಇದರಿಂದ ಮಲೆನಾಡು ಭಾಗದಲ್ಲಿ ಕೊಳೆರೋಗ ಬಂದು ಶೇ. ೬೦ರಷ್ಟು ಬೆಳೆಹಾನಿಯಾಗಿದೆ. ಬೆಳೆಹಾನಿಯಾದ ರೈತರು ನೋವನ್ನೂ ಹಂಚಿಕೊಂಡಿದ್ದಾರೆ. ಸಾಲವೂ ಆಗಿದೆ. ಇದೆಲ್ಲರದಿಂದ ಜೀವನವೂ ಕಷ್ಟವಾಗಿದೆ. ಕಾರಣಕೊಳೆ ರೋಗದ ಸಂಪೂರ್ಣ ಮಾಹಿತಿ ಪಡೆದು ಸರ್ಕಾರದ ಗಮನಕ್ಕೆ ತಂದು ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಳೆರೋಗ ಪರಿಹಾರ ನೀಡಿದಂತೆ ಈಗಲೂ ನೀಡಲು ಮನವಿ ಮಾಡಲಾಗಿದೆ. ಎಲೆಚುಕ್ಕೆ ರೋಗದ ಸಂಬಂಧಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಅಡಕೆ ಬೆಳೆಗಾರರ ಪರ ಧ್ವನಿ ಎತ್ತಲು ಸಂಸದ ಬಿ. ತುಕಾರಾಂ ಬಳಿ ಮಾತನಾಡಿದ್ದೇನೆ. ಅವರೂ ಸ್ಪಂದಿಸಿದ್ದಾರೆ. ಅದರಂತೆ ಅಡಕೆ ಬೆಳೆ ಬೆಳೆಯುವ ಜಿಲ್ಲೆಗಳ ಸಂಸದರು ಸಂಸತ್‌ನಲ್ಲಿ ಆಮದು ವಿರೋಧದ ಬಗ್ಗೆ ಧ್ವನಿ ಎತ್ತಲಿ ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ನಗರಸಭೆ ಸದಸ್ಯರಾದ ಪ್ರದೀಪ ಶೆಟ್ಟಿ, ಖಾದರ್ ಆನವಟ್ಟಿ, ಪ್ರಮುಖರಾದ ವೆಂಕಟೇಶ ಹೆಗಡೆ ಹೊಸಬಾಳೆ, ಎಸ್.ಕೆ. ಭಾಗ್ವತ್ ಶಿರ್ಸಿಮಕ್ಕಿ, ಗಾಯತ್ರಿ ನೆತ್ರೇಕರ, ಗೀತಾ ಶೆಟ್ಟಿ, ಜ್ಯೋತಿ ಪಾಟೀಲ್ ಮತ್ತಿತರರು ಇದ್ದರು.