ಕೃಷ್ಣಮಠದ ರಾಜಾಂಗಣದಲ್ಲಿ, ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಸಂನ್ಯಾಸಾಶ್ರಮದ ಸುವರ್ಣ ವರ್ಷಾಚರಣೆಯ ಪ್ರಯುಕ್ತ ಕೃಷ್ಣನಿಗೆ ಸುವರ್ಣ ಪಾರ್ಥಸಾರಥಿ ರಥದ ಸಮರ್ಪಣಾ ಸಮಾರಂಭದಲ್ಲಿ ಮಾತನಾಡಿದರು.

ಉಡುಪಿ: ವಿಶ್ವದ ಎಲ್ಲಾ ಸಂಪತ್ತುಗಳ ಒಡೆಯನಾದ ಭಗವಂತನಿಗೆ ಭಕ್ತಿಯ ಸಂಪತ್ತನ್ನು ನೀಡಿದರೆ ಆತ ಅದರ ಅನಂತಪಟ್ಟು ಹಿಂದಕ್ಕೆ ನೀಡುತ್ತಾನೆ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರ ಮಠದ ಶ್ರೀ ಸುಬುದೇಂದ್ರ ತೀರ್ಥರು ಹೇಳಿದರು.ಅವರು ಶುಕ್ರವಾರ ಕೃಷ್ಣಮಠದ ರಾಜಾಂಗಣದಲ್ಲಿ, ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಸಂನ್ಯಾಸಾಶ್ರಮದ ಸುವರ್ಣ ವರ್ಷಾಚರಣೆಯ ಪ್ರಯುಕ್ತ ಕೃಷ್ಣನಿಗೆ ಸುವರ್ಣ ಪಾರ್ಥಸಾರಥಿ ರಥದ ಸಮರ್ಪಣಾ ಸಮಾರಂಭದಲ್ಲಿ ಮಾತನಾಡಿದರು.

ಯಾರು ಈ ಎಲ್ಲಾ ಸಂಪತ್ತಿನ ಒಡೆಯರೋ ಅವರಿಗೇ ಅದನ್ನು ಸಲ್ಲಿಸಬೇಕು ಎಂದು ಕೃಷ್ಣ ಗೀತೆಯಲ್ಲಿ ಹೇಳಿದ್ದಾನೆ. ಅದರಂತೆ ಪುತ್ತಿಗೆ ಶ್ರೀಗಳು ತಮ್ಮ ದೀಕ್ಷೆಯ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಸುವರ್ಣ ರಥವನ್ನು ಕೃಷ್ಣನಿಗೆ ಅರ್ಪಿಸಿದ್ದಾರೆ, ತಾವು ಮಾತ್ರವಲ್ಲ ಈ ಪುಣ್ಯಕಾರ್ಯದಲ್ಲಿ ಭಕ್ತರಿಗೂ ಭಾಗವಹಿಸುವುದಕ್ಕೆ ಅವಕಾಶ ನೀಡಿದ್ದಾರೆ ಎಂದು ಕೊಂಡಾಡಿದರು.ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ್ದ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಕೃಷ್ಣಮಠದಲ್ಲಿ ಪರ್ಯಾಯೋತ್ಸವದ ಮೂಲ ಉದ್ದೇಶವೇ ಭಗವದ್ಪ್ರೀತಿ ಗಳಿಸುವುದು, ಅದಕ್ಕಾಗಿಯೇ ತಮ್ಮ 2 ವರ್ಷಗಳ ಪರ್ಯಾಯದ ಅವಧಿಯಲ್ಲಿ ಕೋಟಿ ಜನರಿಂದ ಗೀತೆಯ ಲೇಖನ ಯಜ್ಞವನ್ನು ಮಾಡಿಸಿ, ಅವರ ಭಕ್ತಿಯನ್ನು ಕೃಷ್ಣನಿಗೆ ಸುವರ್ಣ ರಥದ ಮೂಲಕ ಅರ್ಪಿಸುತಿದ್ದೇವೆ. ಉಡುಪಿಯ ಬಾಲಕೃಷ್ಣ ಉತ್ಸವ ಪ್ರಿಯ, ಆತನಿಗೆ ಉತ್ಸವ ನಡೆಸಲು ಅನುಕೂಲವಾಗುವಂತೆ ತಾವು ಹಿಂದಿನ ಪರ್ಯಾಯದಲ್ಲಿ ನವರತ್ನ ರಥವನ್ನುಅರ್ಪಿಸಿದ್ದೆವು, ಈ ಪರ್ಯಾಯದಲ್ಲಿ ಸುವರ್ಣ ರಥವನ್ನು ಅರ್ಪಿಸಿದ್ದೇವೆ ಎಂದರು.ಇದೇ ಸಂದರ್ಭದಲ್ಲಿ ಮಂತ್ರಾಲಯ ಶ್ರೀಗಳು ಸುವರ್ಣ ರಥಕ್ಕೆ 10 ಲಕ್ಷ ರು.ಗಳ ದೇಣಿಗೆಯನ್ನು ಸಮರ್ಪಿಸಿದರು. ಪುತ್ತಿಗೆ ಶ್ರೀಗಳು ಮಂತ್ರಾಲಯ ಶ್ರೀಗಳನ್ನು ಸನ್ಮಾನಿಸಿದರು. ಪುತ್ತಿಗೆ ಮಠದ ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಪೂರ್ಣಪ್ರಜ್ಞಾ ವಿದ್ಯಾಪೀಠದ ವಿದ್ವಾನ್ ಹರಿದಾಸ ಭಟ್, ವಾಗ್ಮಿ ಗೋ ಮಧುಸೂದನ್, ಜಸ್ಟೀಸ್ ಗುರುರಾಜ್, ಶಾಸಕ ಯಶ್‌ಪಾಲ್ ಸುವರ್ಣ, ಕಟೀಲಿನ ಹರಿನಾರಾಯಣ ಅಸ್ರಣ್ಣ, ಆನೆಗುಡ್ಡೆಯ ಸೂರ್ಯನಾರಾಯಣ ಉಪಾಧ್ಯಾಯ, ಮಂಗಳೂರಿನ ಉದ್ಯಮಿ ರಾಜೇಶ್ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಸೇವಾದಾರರಾದ ಪಾದೆಬಟ್ಟು ಸುಬ್ರಹ್ಮಣ್ಯ ಭಟ್, ರಾಘವೇಂದ್ರ ವಿ., ಪದ್ಮಜಾ ಮತ್ತು ರಾಮಪ್ರಿಯ, ಶೋಭಾಯಾತ್ರೆಯ ಸಂಚಾಲಕ ಜಯಕರ ಶೆಟ್ಟಿ ಇಂದ್ರಾಳಿ ಉಪಸ್ಥಿತರಿದ್ದರು. ವಿದ್ವಾನ್ ಡಾ. ಗೋಪಾಲಾಚಾರ್ಯರು ಕಾರ್ಯಕ್ರಮ ನಿರೂಪಿಸಿದರು.