ಓದಿನ ಜೊತೆಗೆ ಕ್ರೀಡೆಯಲ್ಲೂ ಭಾಗವಹಿಸಿ

| Published : Oct 14 2025, 01:00 AM IST

ಸಾರಾಂಶ

ಕ್ರೀಡಾಪಟುಗಳು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ ಮಾತ್ರ ಆರೋಗ್ಯವಂತರಾಗಿರಲು ಸಾಧ್ಯವಾಗುತ್ತದೆ ಎಂದು ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅಭಿಪ್ರಾಯಪಟ್ಟರು.

ಶಿವಮೊಗ್ಗ: ಕ್ರೀಡಾಪಟುಗಳು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ ಮಾತ್ರ ಆರೋಗ್ಯವಂತರಾಗಿರಲು ಸಾಧ್ಯವಾಗುತ್ತದೆ ಎಂದು ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅಭಿಪ್ರಾಯಪಟ್ಟರು.

ನಗರದ ಸೆಕ್ರೆಡ್ ಹಾರ್ಟ್ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಇಲಾಖೆ, ಉಪ ನಿರ್ದೇಶಕರ ಕಚೇರಿ, ಸೆಕ್ರೆಡ್ ಹಾರ್ಟ್ ಪ್ರೌಢಶಾಲೆ ಶಿವಮೊಗ್ಗ ಹಾಗೂ ಜಿಲ್ಲಾ ಫುಟ್ ಬಾಲ್ ಅಸೋಸಿಯೇಷನ್ ಸಹಯೋಗದಲ್ಲಿ ಆಯೋಜಿಸಿದ್ದ 14 ಮತ್ತು 17 ವರ್ಷ ವಯೋಮಿತಿಯೊಳಗಿನ ಬಾಲಕ ಮತ್ತು ಬಾಲಕಿಯರ ಬೆಂಗಳೂರು ವಿಭಾಗಮಟ್ಟದ ಫುಟ್ ಬಾಲ್ ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಮಾತನಾಡಿ. ಓದಿನ ಜೊತೆಗೆ ಕ್ರೀಡೆಯಲ್ಲೂ ಭಾಗವಹಿಸಿ, ಕ್ರೀಡೆಯಲ್ಲಿ ತಮ್ಮ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳಬಹುದಾಗಿದೆ ಎಂದರು.ಕ್ರೀಡಾಪಟುಗಳಲ್ಲಿ ಅತ್ಯಂತ ಸಾಮರಸ್ಯವಿರುತ್ತದೆ. ಇದು ಕ್ರೀಡಾ ಕ್ಷೇತ್ರದ ಗುಟ್ಟಾಗಿದೆ. ಕ್ರೀಡೆ ತಮ್ಮ ಮಾನಸಿಕ ಬುದ್ಧಿ ಮಟ್ಟವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಕೂಡ ಶೈಕ್ಷಣಿಕ ಚಟುವಟಿಕೆಯ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲೂ ಕೂಡ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ಸೆಕ್ರೆಡ್ ಹಾರ್ಟ್ ವ್ಯವಸ್ಥಾಪಕರಾದ ಫಾದರ್ ಸ್ಕ್ಯಾನಿ ಡಿಸೋಜಾ, ಕ್ಯಾಂಪಸ್ ಡೈರೆಕ್ಟರ್ ಫಾದರ್ ಪ್ರಾನ್ಸಿಸ್ ನರೋನ್ಹಾ, ಬಸವೇಶ್ವರ ಪಟ್ಟಣ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಬಳ್ಳೇಕೆರೆ ಸಂತೋಷ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಆರ್.ಮಂಜುನಾಥ, ವಾಯು ಮಾಲಿನ್ಯ ವಿಭಾಗದ ಅಧಿಕಾರಿ ಶಾಲೆಯ ಹಳೆಯ ವಿದ್ಯಾರ್ಥಿ ಹರ್ಷ, ಕೆಪಿಟಿಸಿಎಲ್ ನ ಮೋಹನ್ ಕುಮಾರ್ ಹಾಗೂ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಂ.ಪ್ರಕಾಶ್, ನಿವೃತ್ತ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ನಿರಂಜನ್ ಮೂರ್ತಿ ಇತರರಿದ್ದರು.