ಸಾರಾಂಶ
ಶಿಕಾರಿಪುರ: ವಿದ್ಯಾರ್ಥಿಗಳು ಕೇವಲ ಪಾಠ ಪ್ರವಚನಗಳಿಗೆ ಮೀಸಲಾಗಿ ಅಂಕಗಳಿಕೆಗೆ ಮಾತ್ರ ಹೆಚ್ಚಿನ ಪ್ರಾಮುಖ್ಯತೆ ನೀಡದೆ ಕ್ರೀಡೆ ಮತ್ತು ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅಭಿರುಚಿ ಬೆಳೆಸಿಕೊಂಡಲ್ಲಿ ವಿದ್ಯಾರ್ಥಿ ಜೀವನದ ಪರಿಪೂರ್ಣತೆ ಅನುಭವಿಸಲು ಸಾಧ್ಯ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಗುರುವಾರ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಶಿವಮೊಗ್ಗ ಹಾಗೂ ಸ್ಥಳೀಯ ಬಾಪೂಜಿ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜು ವತಿಯಿಂದ ಹಮ್ಮಿಕೊಳ್ಳಲಾದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಸದೃಢವಾದ ಶರೀರದಲ್ಲಿ ಸದೃಢವಾದ ಆರೋಗ್ಯವಂತ ವಿಚಾರಗಳಿರುತ್ತವೆ. ದೇಶದ ಚಿತ್ತ ಯುವ ಜನತೆಯ ಮೇಲಿದ್ದು ಯುವಕರು ದೇಶಕ್ಕೆ ಆಸ್ತಿಯಾಗಬೇಕು ಎಂದ ಅವರು, ಎಲ್ಲ ವಿದ್ಯಾರ್ಥಿಗಳು ಕ್ರೀಡೆ, ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಶಿಕ್ಷಣಕ್ಕೆ ನೀಡುವ ಆಸಕ್ತಿಯನ್ನು ಕ್ರೀಡೆ, ದೈಹಿಕ ಚಟುವಟಿಕೆ ಸಹಿತ ವಿವಿಧ ರೀತಿಯ ಪಠ್ಯೇತರ ಚಟುವಟಿಕೆಗಳಿಗೂ ನೀಡಬೇಕು. ವಿದ್ಯಾರ್ಥಿ ಪರಿಪೂರ್ಣತೆಯನ್ನು ಸಾಧಿಸಲು ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆ ಬಹು ಮುಖ್ಯವಾಗಿದೆ. ಸರ್ಕಾರ ಶಿಕ್ಷಣಕ್ಕೆ ಸರಿಸಮಾನವಾಗಿ ಕ್ರೀಡೆಗಳಿಗೆ ಹೆಚ್ಚಿನ ಮಹತ್ವ ನೀಡಿದ್ದು, ಸದ್ಬಳಕೆ ಮೂಲಕ ತಾಲೂಕಿನ ಕೀರ್ತಿಯನ್ನು ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಚ್ಚಿಸುವಂತೆ ಕರೆ ನೀಡಿದರು. ಕ್ರೀಡಾಕೂಟದಲ್ಲಿ ಭಾಗವಹಿಸಿದ ಪ್ರತಿಯೊಬ್ಬರೂ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಹಾಗೂ ದೈಹಿಕ ಶಿಕ್ಷಕರು ನಿಷ್ಪಕ್ಷಪಾತವಾದ ತೀರ್ಪನ್ನು ನೀಡಿ ಎಂದು ಸಲಹೆ ನೀಡಿದರು.ಯುವಕರಿಗಾಗಿ ಶೀಘ್ರದಲ್ಲಿಯೇ ಸಂಸತ್ ಖೇಲ್ ಮಹೋತ್ಸವ ಆಚರಣೆ ಅಂಗವಾಗಿ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಲಿಬಾಲ್, ಕ್ರಿಕೆಟ್, ಕುಸ್ತಿ, ಥ್ರೋಬಾಲ್, ಕಬಡ್ಡಿ, ಖೋ-ಖೋ, ಹಗ್ಗ ಜಗ್ಗಾಟ ಮತ್ತಿತರ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗುವುದು ಎಂದು ತಿಳಿಸಿದರು.ಬಾಪೂಜಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಿ.ಪಾಪಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಹತ್ತಾರು ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಹಲವು ಪದವಿ ಪೂರ್ವ ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಉಪನ್ಯಾಸಕರಿಲ್ಲದೆ ಕ್ರೀಡಾ ಪ್ರತಿಭೆಗಳಿಗೆ ಸೂಕ್ತ ಅವಕಾಶ ಸಿಗುತ್ತಿಲ್ಲ. ಹದಿಹರೆಯದ ಚಂಚಲ ಮನಸ್ಸಿನ ವಿದ್ಯಾರ್ಥಿಗಳಿಗೆ ಕ್ರೀಡೆ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸಿ ತರಬೇತಿ ನೀಡಲು ದೈ.ಶಿ.ನಿರ್ದೇಶಕರು ಮತ್ತು ದೈ.ಶಿ.ಉಪನ್ಯಾಸಕರನ್ನು ನೇಮಿಸಲು ಸರ್ಕಾರಕ್ಕೆ ಮನವಿ ಮಾಡಿದರು.
ವೇದಿಕೆಯಲ್ಲಿ ಪ್ರೌಢಶಾಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ದೇವಕುಮಾರ್.ಎ.ಜಿ, ಪ್ರ.ಕಾ.ಕೆ.ಎಚ್.ಪುಟ್ಟಪ್ಪ ಬಿಳವಾಣಿ, ರಾಜ್ಯ ಸರ್ಕಾರಿ ನೌಕರರ ಸಂಘದ ತಾ.ಪ್ರತಿನಿಧಿ ಹಾಗೂ ಉಪಾಧ್ಯಕ್ಷ ಬಂಗಾರಪ್ಪ, ದೈ.ಶಿ. ಸಂಘದ ಜಿಲ್ಲಾ ಅಧ್ಯಕ್ಷ ಆಂಜಿನಪ್ಪ, ತಾ.ಪ್ರ.ಕಾ.ಪುಟ್ಟಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಎ.ಬಿ.ಸುಧೀರ್, ಪುರಸಭಾ ಮಾಜಿ ಅಧ್ಯಕ್ಷ ವಸಂತಗೌಡ, ವೀರಣ್ಣಗೌಡ, ಪವಿತ್ರ ಪಿ.ಆರ್, ಪ್ರಾಚಾರ್ಯರಾದ ಮುಸ್ತಾಫ, ಡಾ.ವೀರೇಂದ್ರ ಗೌಡ, ರಮೇಶ್.ಡಿ, ಮುಖ್ಯೋಪಾಧ್ಯಾಯ ರಾಘವೇಂದ್ರ ಕುಲಕರ್ಣಿ ಸೇರಿದಂತೆ ವಿವಿಧ ಕಾಲೇಜುಗಳ ಪ್ರಾಚಾರ್ಯರು, ಉಪನ್ಯಾಸಕರು, ಸಂಘದ ಪ್ರತಿನಿಧಿಗಳು, ಶಿಕ್ಷಕರು ಉಪಸ್ಥಿತರಿದ್ದರು. ಉಪನ್ಯಾಸಕ ಚೇತನ್ ಸ್ವಾಗತಿಸಿದರು. ಮಹಿತ ನಿರೂಪಿಸಿರು. ಖಜಾಂಚಿ ಪಲ್ಲವಿ.ಪಿ ವಂದಿಸಿದರು.