ಪ್ರಜಾಪ್ರತಿನಿಧಿಗಳ ಆಯ್ಕೆಯಲ್ಲಿ ಸರ್ವರ ಪಾಲ್ಗೊಳ್ಳುವಿಕೆ ಅಗತ್ಯ

| Published : Jan 26 2024, 01:49 AM IST

ಪ್ರಜಾಪ್ರತಿನಿಧಿಗಳ ಆಯ್ಕೆಯಲ್ಲಿ ಸರ್ವರ ಪಾಲ್ಗೊಳ್ಳುವಿಕೆ ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ತರಾಸು ರಂಗಮಂದಿರದಲ್ಲಿ ಗುರುವಾರ ಭಾರತ ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾವೆಲ್ಲರೂ ಭಾರತದ ಪ್ರಜೆಗಳಾಗಿದ್ದು, ಮತದಾನ ಮಾಡುವುದು ಆದ್ಯ ಮತ್ತು ಶ್ರೇಷ್ಠ ಕರ್ತವ್ಯವಾಗಿದೆ. ಅತ್ಯಂತ ಶ್ರದ್ಧೆಯಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು.

ಚಿತ್ರದುರ್ಗ: ಪ್ರಜಾಪ್ರತಿನಿಧಿಗಳ ಆಯ್ಕೆಯಲ್ಲಿ ಸರ್ವರ ಪಾಲ್ಗೊಳ್ಳುವಿಕೆ ಅಗತ್ಯವೆಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಕೆ.ಬಿ.ಗೀತಾ ಅಭಿಪ್ರಾಯಪಟ್ಟರು.

ನಗರದ ತರಾಸು ರಂಗಮಂದಿರದಲ್ಲಿ ಗುರುವಾರ ಭಾರತ ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾವೆಲ್ಲರೂ ಭಾರತದ ಪ್ರಜೆಗಳಾಗಿದ್ದು, ಮತದಾನ ಮಾಡುವುದು ಆದ್ಯ ಮತ್ತು ಶ್ರೇಷ್ಠ ಕರ್ತವ್ಯವಾಗಿದೆ. ಅತ್ಯಂತ ಶ್ರದ್ಧೆಯಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

18 ವರ್ಷ ಪೂರೈಸಿದ ಪ್ರತಿಯೊಬ್ಬರು ಕೂಡ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡ ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳಬೇಕು. ಪ್ರತಿಯೊಬ್ಬರು ಮತ ಚಲಾಯಿಸುವುದರ ಮೂಲಕ ಶೇ.100ರಷ್ಟು ಮತದಾನ ಆಗುವಂತೆ ಶ್ರಮಿಸಬೇಕು. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಇನ್ನೂ ಕೂಡ ಅವಕಾಶ ಕಲ್ಪಿಸಲಾಗಿದ್ದು, 18 ವರ್ಷ ಪೂರೈಸಿದ ಅರ್ಹರೆಲ್ಲರೂ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

1950 ಜ.25ರಂದು ಭಾರತ ಚುನಾವಣಾ ಆಯೋಗ ಸ್ಥಾಪಿಸಲಾಯಿತು. ಈ ನೆನಪಿಗಾಗಿ 2011ರ ಜ.25ರಿಂದ ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿಸಲಾಗುತ್ತಿದೆ. ಪ್ರಜಾಪ್ರಭುತ್ವ ಸಧೃಡವಾಗಿರಲು ಪ್ರತಿಯೊಬ್ಬರು ಮತದಾನ ಮಾಡುವುದು ಅವಶ್ಯಕ. ಉತ್ತಮ ಪ್ರಜಾಪ್ರತಿನಿಧಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ನಾವೆಲ್ಲರೂ ಭಾಗಿಯಾಗೋಣ. ಹಿಂದಿನ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಮತದಾರರ ನೋಂದಣಿ ಮಾಡಿಸಿ, ರಾಷ್ಟ್ರಮಟ್ಟದ ಪ್ರಶಸ್ತಿಗೆ ಭಾಜನರಾಗಿರುವುದಕ್ಕೆ ಅವರು ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಮಾತನಾಡಿ, ರಾಷ್ಟ್ರಿಯ ಮತದಾರ ದಿನಾಚರಣೆ ಅಂಗವಾಗಿ, ಜಿಲ್ಲೆಯಲ್ಲಿ 18 ವರ್ಷ ತುಂಬಿದ ಯುವ ಮತದಾರರ ನೊಂದಣಿಯನ್ನು ಅಭಿಯಾನದ ರೂಪದಲ್ಲಿ ಮಾಡಲಾಗುತ್ತಿದೆ. ಮತದಾನದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಇದರೊಂದಿಗೆ ಕಳೆದ ಚುನಾವಣೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದವರನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ. ಚುನಾವಣೆ ಎಂಬುದು ಹಬ್ಬವಿದ್ದಂತೆ. ಇದರಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮತದಾನದ ಹಕ್ಕು ಚಲಾಯಿಸಿ ಸಧೃಡವಾದ, ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ವಿಶ್ವದಲ್ಲೇ ಅತ್ಯಂತ ಬಲಿಷ್ಠವಾದ ಪ್ರಜಾಪ್ರಭುತ್ವ ರಾಷ್ಟ್ರ ಭಾರತವಾಗಿದೆ. ದೇಶವನ್ನು ಉನ್ನತ ಸ್ಥಾನಕ್ಕೆ ಒಯ್ಯಲು ಪ್ರತಿಯೊಬ್ಬರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಚುನಾವಣೆ ಆಯೋಗದಿಂದ ಸಾಕಷ್ಟು ಸ್ವೀಪ್ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಮತಪಟ್ಟಿಯಲ್ಲಿ ಹೆಸರು ಇದ್ದರೆ ಸಾಲದು. ಮತದಾನ ದಿನ ಮತಗಟ್ಟೆಗೆ ತೆರಳಿ ಮತಚಲಾಯಿಸಬೇಕು ಎಂದರು.

ಮತಗಟ್ಟೆ ಅಧಿಕಾರಿಗಳಿಗೆ ಸನ್ಮಾನ

ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ 6 ಮತಗಟ್ಟೆ ಅಧಿಕಾರಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಗೌಡಗೆರೆ ಗ್ರಾಮದ 163ನೇ ಮತಗಟ್ಟೆಯ ಅಧಿಕಾರಿ ನಾಗರಾಜ. ಇ, ಚಳ್ಳಕೆರೆ ಕ್ಷೇತ್ರದ ಚಿಕ್ಕೇನಹಳ್ಳಿ ಗ್ರಾಮದ 231ನೇ ಮತಗಟ್ಟೆಯ ಅಧಿಕಾರಿ ರಂಗಸ್ವಾಮಿ.ಆರ್, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಮೆದೇಹಳ್ಳಿ ಗ್ರಾಮದ 56ನೇ ಮತಗಟ್ಟೆ ಅಧಿಕಾರಿ ಅಜ್ಜಪ್ಪಜಿ.ಎನ್, ಹಿರಿಯೂರು ವಿಧಾನಸಭಾ ಕ್ಷೇತ್ರದ ಗುಲ್ಯಾ ಗ್ರಾಮದ 52ನೇ ಮತಗಟ್ಟೆಯ ಅಧಿಕಾರಿ ಸುನಂದಮ್ಮ, ಹೊಸದುರ್ಗ ಕ್ಷೇತ್ರದ ಅತ್ತಿಮಗ್ಗೆ ಗ್ರಾಮದ 66ನೇ ಮತಗಟ್ಟೆಯ ಅಧಿಕಾರಿ ಮಲ್ಲೇಶಪ್ಪ.ಹೆಚ್, ಹೊಳಲ್ಕೆರೆ ಕ್ಷೇತ್ರದ ಬೆವನಹಳ್ಳಿ ಗ್ರಾಮದ 46ನೇ ಮತಗಟ್ಟೆಯ ಅಧಿಕಾರಿ ರೇಶ್ಮಾಜಿ.ಎಸ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಭಾರ ಉಪವಿಭಾಗಾಧಿಕಾರಿ ವಿವೇಕ್ ಅವರು ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಮತದಾರ ದಿನಾಚರಣೆ ನಿಮಿತ್ತ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಕಾರ್ಯಕ್ರಮದಲ್ಲಿ ಪ್ರಮಾಣಪತ್ರ ಹಾಗೂ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ ಹೊಸ ಮತದಾರರಿಗೆ ಭಾವಚಿತ್ರವಿರುವ ಗುರುತಿನ ಚೀಟಿಗಳ ವಿತರಿಸಲಾಯಿತು.

ಪ್ರಭಾರ ಉಪವಿಭಾಗಾಧಿಕಾರಿ ವಿವೇಕ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ್ ರೆಡ್ಡಿ, ತಹಸೀಲ್ದಾರ್ ಡಾ.ನಾಗವೇಣಿ, ನಗರಸಭೆ ಪೌರಾಯಕ್ತೆ ಎಂ.ರೇಣುಕಾ, ಡಿವೈಎಸ್‍ಪಿ ಅನಿಲ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್, ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲ ಪ್ರೊ.ನಾಗರಾಜಪ್ಪ ಸೇರಿದಂತೆ ಇತರರು ಇದ್ದರು.