ಮಡಿಕೇರಿ : ಪರಿಷತ್ ಚುನಾವಣೆ ವೇಳೆ ಅಡ್ಡಮತದಾನಕ್ಕೆ ಸಂಬಂಧಿಸಿದಂತೆ ಎಂಎಲ್‌ಸಿ ಸಿ.ಟಿ. ರವಿ ನೇತೃತ್ವದ ಸಮಿತಿ ತನಿಖೆ ಮಾಡುತ್ತಿದ್ದು, ಮುಂದೆ ಏನು ಮಾಡಬೇಕು ಎನ್ನುವುದರ ಬಗ್ಗೆ ಪಕ್ಷ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಕೊಡಗು-ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಮಡಿಕೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ಅಡ್ಡಮತದಾನ ನಡೆದಿರುವುದು ಇದೇನು ಮೊದಲಲ್ಲ. ಬೇರೆ ಪಕ್ಷಗಳಲ್ಲೂ ಅಡ್ಡಮತದಾನ ನಡೆದಿದೆ. ಈಗ ನಮ್ಮ ಪಕ್ಷದಲ್ಲೂ ಅಡ್ಡ ಮತದಾನ ಆಗಿದೆ. ಅದರ ವರದಿಗಾಗಿ ಈಗಾಗಲೇ ಸತ್ಯ ಶೋಧನೆ ಸಮಿತಿ ರಚಿಸಲಾಗಿದೆ. ನಾವು ಕ್ರಮ ತೆಗೆದುಕೊಳ್ಳಬೇಕಾಗಿದೆ. ಕ್ರಮ ತೆಗೆದುಕೊಳ್ಳುತ್ತೇವೆ. ಅಡ್ಡಮತದಾನ ಮಾಡಿದವರಿಗೆ ಧರ್ಮಸ್ಥಳದಲ್ಲಿ ಆಣೆ ಮಾಡಿಸುತ್ತಿರುವ ವಿಚಾರಕ್ಕೆ ಪಕ್ಷದಲ್ಲೇ ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದು ಪಕ್ಷದ ಆಂತರಿಕ ವಿಚಾರ. ಏನು ಮಾಡಬೇಕು, ಮಾಡಬಾರದು ಎಂದು ಪಕ್ಷ ನಿರ್ಧಾರ ಮಾಡುತ್ತದೆ. ಅದನ್ನೆಲ್ಲ ಚರ್ಚೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.