ಜಿಲ್ಲಾ ಅತ್ಯುತ್ತಮ ಶಿಕ್ಷಕ ಪುರಸ್ಕಾರಕ್ಕೆ ಶಿಕ್ಷಕರ ಆಯ್ಕೆಯಲ್ಲಿ ಪಕ್ಷ- ಬಣ ರಾಜಕೀಯದ ಕಮಟು!?

| Published : Sep 05 2024, 12:31 AM IST

ಜಿಲ್ಲಾ ಅತ್ಯುತ್ತಮ ಶಿಕ್ಷಕ ಪುರಸ್ಕಾರಕ್ಕೆ ಶಿಕ್ಷಕರ ಆಯ್ಕೆಯಲ್ಲಿ ಪಕ್ಷ- ಬಣ ರಾಜಕೀಯದ ಕಮಟು!?
Share this Article
  • FB
  • TW
  • Linkdin
  • Email

ಸಾರಾಂಶ

ಸೇಡಂ ತಾಲೂಕಿನಿಂದ ಪ್ರಾಥಮಿಕ ಶಾಲೆ ವಿಭಾಗದಲ್ಲಿ ಇಬ್ಬರು ಅತ್ಯುತ್ತಮ ಶಿಕ್ಷಕರ ಆಯ್ಕೆಯಲ್ಲಿ ನಡೆದಿರುವ ಹೈಡ್ರಾಮಾ, ರಾಜಕೀಯ ಆರೋಪ- ಪ್ರತ್ಯಾರೋಪಗಳನ್ನೆಲ್ಲ ಗಮನಿಸಿದವರು ಪ್ರಶಸ್ತಿಗಳ ಬಗ್ಗೆಯೇ ರೇಜಿಗೆಪಟ್ಟುಕೊಳ್ಳುವಂತೆ ಮಾಡಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪುರಸ್ಕಾರಕ್ಕೆ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಇಬ್ಬರು ಶಿಕ್ಷಕರನ್ನು ಆಯ್ಕೆ ಮಾಡುವ ವಿಷಯದಲ್ಲಿ ಸೇಡಂ ತಾಲೂಕಿಗೆ ಸಂಬಂಧಪಟ್ಟಂತೆ ನಡೆದಿರುವ ಗೊಂದಲದ ಬೆಳವಣಿಗೆ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಅತ್ಯುತ್ತಮ ಶಿಕ್ಷಕರ ಆಯ್ಕೆಯನ್ನೇ ಶಂಕೆಯಿಂದ ನೋಡುವಂತೆ ಮಾಡಿದೆ.

ಸೇಡಂ ತಾಲೂಕಿನಿಂದ ಪ್ರಾಥಮಿಕ ಶಾಲೆ ವಿಭಾಗದಲ್ಲಿ ಇಬ್ಬರು ಅತ್ಯುತ್ತಮ ಶಿಕ್ಷಕರ ಆಯ್ಕೆಯಲ್ಲಿ ನಡೆದಿರುವ ಹೈಡ್ರಾಮಾ, ರಾಜಕೀಯ ಆರೋಪ- ಪ್ರತ್ಯಾರೋಪಗಳನ್ನೆಲ್ಲ ಗಮನಿಸಿದವರು ಪ್ರಶಸ್ತಿಗಳ ಬಗ್ಗೆಯೇ ರೇಜಿಗೆಪಟ್ಟುಕೊಳ್ಳುವಂತೆ ಮಾಡಿದೆ.

ಇದೇ ಸಂದರ್ಭವೆಂದು ರಾಜಕೀಯ ನಾಯಕರು ಡಿಡಿಪಿಐ ಕಚೇರಿಯಲ್ಲೇ ಸುದ್ದಿಗೋಷ್ಠಿ ನಡೆಸಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಆವಾಜ್‌ ಹಾಕುವ ಮೂಲಕ ಗಮನ ಸೆಳೆದದ್ದಲ್ಲದೆ, ಕೈಬಿಟ್ಟು ಹೋದಂತಹ ಶಿಕ್ಷಕಿಯೊಬ್ಬರಿಗೆ ಪುನಃ ಪುರಸ್ಕಾರ ಪಟ್ಟಿಯಲ್ಲಿ ಸೇರ್ಪಡೆಯಾಗುವಂತೆ ಮಾಡಿರೋದು ಕೂಡಾ ಸುದ್ದಿಗೆ ಗ್ರಾಸವಾಗಿದೆ.

ಮೊದಲ ಪಟ್ಟಿಯಲ್ಲಿದ್ದ ಹೆಸರು ಮಂಗಮಾಯ:

ಪ್ರತಿ ತಾಲೂಕಿಗೆ ಇಬ್ಬರಂತೆ ಪ್ರಾಥಮಿಕ ಶಾಲಾ ಶಿಕ್ಷಕರ ಆಯ್ಕೆಯಲ್ಲಿ ಸೇಡಂನಿಂದ ಬಂದಿದ್ದ 3 ಪ್ರಸ್ತಾವನೆಗಳ ಪೈಕಿ ರಾಮಚಂದ್ರ ಅವರ ಪ್ರಸ್ತಾವನೆ ಕೈಬಿಟ್ಟು ಚಂದ್ರಕಲಾ (ಈರ್ನಾಪಲ್ಲಿ ಸರಕಾರಿ ಶಾಲೆ) ಹಾಗೂ ಅನ್ನಪೂರ್ಣ ಬಾನರ್‌ ( ಕೋಡ್ಲಿ ಬಾಹರಪೇಟ್‌ ಸರಕಾರಿ ಶಾಲೆ) ಇವರ ಹೆಸರು ಆಯ್ಕೆ ಸಮೀತಿ ಪ್ರಶಸ್ತಿಗೆ ಅಂತಿಮಗೊಳಿಸಿ ಜಿಲ್ಲಾ ಮಟ್ಟದ ಪುರಸ್ಕಾರ ಯಾದಿ ಸಮೇತ ಪ್ರಕಟಣೆಗೂ ನೀಡಿತ್ತು. ನಂತರ ಡಿಡಿಪಿಐ ಕಚೇರಿಯಿಂದ ಏಕಾಏಕಿ ಈ ಪ್ರಕಟಣೆ ವಾಪಸ್‌ ಪಡೆದು ಅನ್ನಪೂರ್ಣ ಬಾನರ್‌ ಹೆಸರು ಕೈಬಿಟ್ಟು ಉಳಿದೆ ಹೆಸರುಗಳನ್ನೆಲ್ಲ ಯಥಾವತ್ತಾಗಿ ಇಟ್ಟು ಪುರಸ್ಕಾರ ಪ್ರಕಟಿಸಲಾಗಿತ್ತು. ಈ ಹಠಾತ್‌ ಬೆಲವಣಿಗೆಯೇ ವಿವಾದಕ್ಕೆ ಕಾರಣವಾಯ್ತು.

ಮೊದಲ ಪಟ್ಟಿ ವಾಪಾಸ್‌ ಪಡೆದು ನಂತರ ಬಿಡುಗಡೆ ಮಾಡಲಾದ ಪಟ್ಟಿಯಲ್ಲಿ ಸೇಡಂ ತಾಲೂಕಿನ ಪೈಕಿ ಅನ್ನಪೂರ್ಣ ಬಾನರ್‌ ಹೆಸರು ಕೈಬಿಡಲಾಗಿತ್ತಲ್ಲದೆ ಪ್ರಾಥಮಿಕ ವಿಭಾಗದಲ್ಲಿ 16ರ ಬದಲು 15 ಶಿಕ್ಷಕರಿಗೆ ಪುರಸ್ಕಾರ ಘೋಷಿಸಲಾಗಿತ್ತು. ಪ್ರಾಥಮಿಕ ವಿಬಾಗದಲ್ಲಿ ಪ್ರತಿ ತಾಲೂಕಿಗೆ ಇಬ್ಬರಂತೆ 8 ತಾಲೂಕುಗಳಲ್ಲಿ 16, ಪ್ರೌಢಶಾಲಾ ಪಟ್ಟಿಯಲ್ಲಿ ಪ್ರತಿ ತಾಲೂಕಿಗೆ ಒಬ್ಬರಂತೆ 8 ತಾಲೂಕುಗಳಂತೆ 8 ಶಿಕ್ಷಕರಿಗೆ ಪುರಸ್ಕಾರ ನೀಡಬೇಕಿತ್ತು. ಪ್ರಾಥಮಿಕ ವಿಭಾಗದಲ್ಲಿನ ಈ ಗೊಂದಲದಂದಾಗಿ 16 ರ ಬದಲು ಸೇಡಂ ಶಿಕ್ಷಕಿ ಹೆಸರು ಆಯ್ಕೆ ಪಟ್ಟಿಯಿಂದ ಕೈಬಿಟ್ಟು 15 ಶಿಕ್ಷಕರಿಗೆ ಪುರಸ್ಕಾರ ಘೋಷಿಸಿರೋದು ವಿವಾದ ಹುಟ್ಟು ಹಾಕಿತ್ತು.

ಡಿಡಿಪಿಐ, ಸಚಿವರ ವಿರುದ್ಧ ಆರೋಪಗಳ ಸುರಿಮಳೆ:

ಸೇಡಂ ಮಾಜಿ ಶಾಸಕ ರಾಜಕುಮಾರ್‌ ಪಾಟೀಲ್‌ ತೇಲ್ಕೂರ್‌, ಎಂಎಲ್‌ಸಿ ಶಶಿಲ್‌ ನಮೋಶಿ, ಶಾಸಕ ಬಸವರಾಜ ಮತ್ತಿಮಡು, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್‌ ರದ್ದೇವಾಡಗಿ, ನಗರಾಧ್ಯಕ್ಷ ಚಂದು ಪಾಟೀಲ್‌, ಶರಣಪ್ಪ ತಳವಾರ್‌ ಮೊದಲಾದ ಬಿಜಪಿ ಮುಖಂಡರು ಸೇಡಂ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪುರಸ್ಕಾರಕ್ಕೆ ಆರಿಸೋವಾಗ ಆಗಿರುವ ಈ ಎಡವಟ್ಟನ್ನೇ ಮುಂದೆ ಮಾಡಿಕೊಂಡು ಡಿಡಿಪಿಐ ಕಚೇರಿಯಲ್ಲೇ ಸುದ್ದಿಗೋಷ್ಠಿ ನಡೆಸಿದರಲ್ಲದೆ ಅನ್ನಪೂರ್ಣ ಬಾನರ್‌ ಹೆಸರು ಪುನಃ ಪುರಸ್ಕಾರಕ್ಕೆ ಸೇರ್ಪಡೆಯಾಗದೆ ಹೋದಲ್ಲಿ ಸೆ. 5 ರ ಶಿಕ್ಷಕ ದಿನವನ್ನ ಅದ್ಹೇಗೆ ಆಚರಿಸುತ್ತಿರೋ ನೋಡುತ್ತೇವೆ ಎಂದು ಡಿಡಿಪಿಐಗೇ ಆವಾಜ್‌ ಹಾಕಿದರು.

ಸೇಡಂ ಶಾಸರು, ವೈದ್ಯಕೀಯ ಶಿಕ್ಷಣ ಸಚಿವರೂ ಆಗಿರುವ ಡಾ. ಶರಣಪ್ರಕಾಶ ಪಾಟೀಲರೇ ಅನ್ನಪೂರ್ಣ ಬಾನರ್‌ ಅವರಿಗೆ ಪುರಸ್ಕಾರ ದೊರಕದಂತೆ ಡಿಡಿಪಿಐ ಅವರ ಮೇಲೆ ಪ್ರಭಾವ ಬೀರಿ ಹೆಸರು ತೆಗೆದು ಹಾಕಿಸಿದ್ದಾರೆ. ಇದನ್ನು ಖಂಡಿಸುತ್ತೇವೆ. ಡಿಡಿಪಿಐಗಳು ನಿಯಮದಂತೆ ಕೆಲಸ ಮಾಡದೆ ಕಾಂಗ್ರೆಸ್‌ ಕಾರ್ತಕರ್ತರಂತೆ ಕೆಲಸ ಮಾಡುತ್ತಿದ್ದಾರೆ. ಮೊದಲು ಪ್ರಶಸ್ತಿ ಎಂದು ಹಿಗ್ಗಿದ್ದ ಅನ್ನಪೂರ್ಣ ಶಿಕ್ಷಕಿ ಇದೀಗ ಹೆಸರು ಕೈಬಿಟ್ಟಿರೋದು ಕೇಳಿ ನೊಂದಿದ್ದಾರೆ. ಇದಕ್ಕೆಲ್ಲ ಸಚಿವರು ಹಾಗ ಡಿಡಿಪಿಐ ಕಾರಣವೆಂದು ತೇಲ್ಕೂರ್‌ ದೂರಿದರು.ದೂರವಾಣಿಯಲ್ಲಿ ಆಕ್ಷೇಪಣೆ ಬಂತು- ಡಿಡಿಪಿಐ ಮದಾನೆ ಸ್ಪಷ್ಟನೆ

ಬಿಜೆಪಿಗರ ಆಕ್ಷೇಪಣೆಗೆ ಸ್ಪಷ್ಟನೆ ನೀಡಿದ ಡಿಡಿಪಿಐ ಸೂರ್ಯಕಾಂತ ಮದಾನೆ, ನಿಯಮದಂತೆಯೇ ಶಿಕ್ಷಕರ ಆಯ್ಕೆ ಮಾಡಲಾಗಿತ್ತು. ಡಿಡಿಪಿಐ ಅಧ್ಯಕ್ಷತೆ, ಡಯಟ್‌ ಪ್ರಾಚಾರ್ಯರ ಗೌರವ ಅಧ್ಯಕ್ಷತೆ, ಸಿಟಿಇ ಉಪನ್ಯಾಸಕರು, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರು, ಸದಸ್ಯರು, ಅನುದಾನಿತ ಶಾಲೆಗಳ ಮುಖ್ಯ ಗುರುಗಳು ಸೇರಿದಂತೆ 8 ಜನ ಸದಸ್ಯರ ಸಮೀತಿ ಪುರಸ್ಕಾರಕ್ಕೆ ಶಿಕ್ಷಕರನ್ನು ಆಯ್ಕೆ ಮಾಡಿದೆ.

ಪ್ರೌಢಶಾಲೆ ವಿಭಾಗದಲ್ಲಿ ತಾಲೂಕಿಗೆ 1ರಂತೆ ಶಿಕ್ಷಕರ ಆಯ್ಕೆ ನಡೆಯಬೇಕಿತ್ತು. ಬಂದ 8 ಪ್ರಸ್ತಾವನೆಗಳಿಗೆ ಸಮ್ಮತಿಸಲಾಗಿದೆ, ಪ್ರಾಥಮಿಕ ವಿಭಾಗದಲ್ಲಿ ತಾಲೂಕಿಗೆ 2ರಂತೆ ಆಯ್ಕೆ ಮಾಡಬೇಕು, ಒಟ್ಟು ಬಂದ 24 ಪ್ರಸ್ತಾವನೆಗಳಲ್ಲಿ 16 ಶಿಕ್ಷಕರ ಹೆಸರು ಅಂತಿಮಗೊಳಿಸಿದ್ದೇವು. ಸೇಡಂ ಅನ್ನಪೂರ್ಣ ಆಯ್ಕೆ ವಿಚಾರದಲ್ಲಿ ಅನೇಕರು ಇವರು ಶಿಕ್ಷಕರ ಸಂಘದ ಪದಾಧಿಕಾರಿ, ಅವರಿಗೆ ಹೇಗೆ ಪುರಸ್ಕಾರ ಕೊಡ್ತೀರಿ? ಎಂದು ದೂರವಾಣಿ ಮಾಡಿ ಆಕ್ಷಪಿಸಿದ್ದಕ್ಕೆ ಈ ವಿಷಯ ಸಿಇಓ, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಅವರ ಹೆಸರು ಕೈಬಿಡಲಾಗಿದೆ ಎಂದರು.

ಡಿಡಿಪಿಐ ಮದಾನೆಯವರ ಸಮಜಾಯಿಷಿಗೆ ತೃಪ್ತರಾಗದ ಬಿಜಪಿ ಮುಖಂಡರು ಇದು ರಾಜಕೀಯ ಪ್ರೇರಿತವಾಗಿದೆ. ಸಚಿವರು ಅನ್ನಪೂರ್ಣ ಬಾನರ್‌ಗೆ ಪುರಸ್ಕಾರ ಬೇಡವೆಂದು ಹೇಳಿದ್ದರಿಂದಲೇ ನೀವು ಕೈಬಿಟ್ಟಿದ್ದೀರಿ. ನೀವು ಕಾಂಗ್ರೆಸ್‌ ಕಾರ್ಯಕತ್ರರಾಗಿದ್ದೀರೆಂದು ಟೀಕಿಸಿದರು. ಮಧ್ಯಪ್ರವೇಶಿಸಿದ ಶಾಸಕ ಬಸವರಾಜ ಮತ್ತಿಮಡು ಮೊದಲಿನ ಪಟ್ಟಿಗೇ ಸಮ್ಮತಿಸಿದರೆ ಮಾತ್ರ ಇಲ್ಲಿಂದ ಹೋಗೋದು, ಇಲ್ಲದಿದ್ದರೆ ಧರಣಿ ಮಾಡುತ್ತೇವಂದು ತೇಲ್ಕೂರ್‌, ನಮೋಶಿ ಸೇರಿದಂತೆ ಎಲ್ಲರೂ ಹೇಳಿದಾಗ ಡಿಡಿಪಿಐ ಸೂರ್ಯಕಾಂತ ಮದಾೆಯವರು ಮೊದಲಿನ ಆಯ್ಕೆ ಪಟ್ಟಿಯಂತೆ ಅನ್ನಪೂರ್ಣ ಬಾನರ್‌, ಅವರಿಗೂ ಸೇಡಂನಿಂದ ಪುರಸ್ಕಾರ ನೀಡಲಾಗುತ್ತದೆ ಎಂದಾಗ ಬಿಜೆಪಿಗರು ಡಿಡಿಪಿಐ ಚೆಂಬರ್‌ ಖಾಲಿ ಮಾಡಿದರು.ಶಿಕ್ಷಕರ ಸಂಘದ ಪದಾಧಿಕಾರಿಗೇ ರಾಜ್ಯ ಪುರಸ್ಕಾರ!

ಕಲಬುರಗಿಯಲ್ಲಿ ಶಿಕ್ಷಕರ ಸಂಘದ ಪದಾಧಿಕಾರಿಯಾಗಿರುವ ಮಲ್ಲಿಕಾರ್ಜುನ ಎಂಬ ಶಿಕ್ಷಕರಿಗೆ ಕಳೆದ ಬಾರಿ ಜಿಲ್ಲಾ ಪುರಸ್ಕಾರ ಕೊಟ್ಟಿದ್ದಲ್ಲದೆ ಈ ಬಾರಿ ಇದೇ ಡಿಡಿಪಿಐ ಕಚೇರಿ ರಾಜ್ಯ ಪುರಸ್ಕಾರಕ್ಕೂ ಶಿಫಾರಸು ಮಾಡಿದ್ದು ಅವರು ಪುರಸ್ಕಾರಕ್ಕೂ ಆಯ್ಕೆಯಾಗಿದ್ದಾರೆ. ಮಲ್ಲಿಕಾರ್ಜುನಗೆ ಅನ್ವಯವಾಗದ ಸಂಘದ ಪದಾಧಿಕಾರಿ ನಿಯಮ ಅನ್ನಪೂರ್ಣ ಬಾನರ್‌ ಪ್ರಕರಣದಲ್ಲಿ ಯಾಕೆ ಅನ್ವಯಿಸುತ್ತೀರಿ? ಎಂಬ ಬಿಜೆಪಿ ಮುಖಂಡರ ಪ್ರಶ್ನೆಗೆ ಡಿಡಿಪಿಐ ನಿರುತ್ತರ, ದೂರವಾಣಿ ಆಕ್ಷೇಪಣೆ ಎಂದಷ್ಟೇ ಹೇಳುತ್ತ ಸಮಜಾಯಿಷಿ ನೀಡಲು ಯತ್ನಿಸಿದರು.