ಪಕ್ಷದ ವಿಚಾರಗಳನ್ನು ಹೈಕಮಾಂಡ್ ತೀರ್ಮಾನ: ಸಚಿವ ಚೆಲುವರಾಯಸ್ವಾಮಿ

| Published : Nov 07 2025, 01:30 AM IST

ಸಾರಾಂಶ

ಬಾಳೆಹೊನ್ನೂರುಪಕ್ಷದ ವಿಚಾರಗಳನ್ನು ಹೈಕಮಾಂಡ್ ಹಾಗೂ ವರಿಷ್ಠರು ಗಮನಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ ನವೆಂಬರ್‌ನಲ್ಲಿ ಏನೂ ಕ್ರಾಂತಿ ಇಲ್ಲ. ಖಂಡಿತವಾಗಿಯೂ ಏನೂ ಕ್ರಾಂತಿಯಾಗಲ್ಲ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದರು.

ರಂಭಾಪುರಿ ಪೀಠಕ್ಕೆ ಭೇಟಿ । ಜಗದ್ಗುರುಗಳ ಆಶೀರ್ವಾದಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಪಕ್ಷದ ವಿಚಾರಗಳನ್ನು ಹೈಕಮಾಂಡ್ ಹಾಗೂ ವರಿಷ್ಠರು ಗಮನಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ ನವೆಂಬರ್‌ನಲ್ಲಿ ಏನೂ ಕ್ರಾಂತಿ ಇಲ್ಲ. ಖಂಡಿತವಾಗಿಯೂ ಏನೂ ಕ್ರಾಂತಿಯಾಗಲ್ಲ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಒಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ನಾನೂ ಕೂಡ ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದಲೇ ವಿವಿಧ ಕಡೆಗಳಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಪಕ್ಷದ ವಿಚಾರಗಳನ್ನು ಪಕ್ಷದ ಹೈಕಮಾಂಡ್ ಹಾಗೂ ವರಿಷ್ಠರು ಗಮನಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ರಂಭಾಪುರಿ ಪೀಠದಲ್ಲಿ ಗುರುವಾರ ಸುದ್ದಿಗಾರರಿಗೆ ಹೇಳಿದರು. ಕಳೆದ ಬಜೆಟ್‌ನಲ್ಲಿ ಭತ್ತದ ಬೆಳೆಗೆ ಪ್ರೋತ್ಸಾಹ ಧನ ನೀಡಬೇಕು ಎಂದು ಪ್ರಸ್ತಾವನೆ ಮಾಡಿದ್ದೆ. ಮಡಿಕೇರಿ ಸನ್ನಿವೇಶದಲ್ಲಿಯೇ ಪ್ರೋತ್ಸಾಹ ಧನ ನೀಡುವ ಬಗ್ಗೆ ಮುಖ್ಯಮಂತ್ರಿಗಳಿಗೆ ಹೇಳಿದ್ದೆ. ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ ಜಿಲ್ಲೆಗೂ ವಿಸ್ತರಿಸಬೇಕು ಎಂಬುದು ನನ್ನ ಅಶಯ. ಆದರೆ ಕೇವಲ ಒಂದು ಜಿಲ್ಲೆಗೆ ನೀಡುವುದು ಸೂಕ್ತವಲ್ಲ ಎಂದು ಮುಖ್ಯಮಂತ್ರಿಗಳೂ ಹೇಳಿದ್ದರು. ಬಹುಶಃ ಈ ಬಾರಿ ಈ ಭಾಗದ ಅನೇಕ ಶಾಸಕರ ಒತ್ತಡವಿದ್ದು, ಪ್ರೋತ್ಸಾಹ ಧನ ನೀಡಬೇಕು ಎಂಬುದು ನನ್ನ ಆಶಯ. ಅದನ್ನು ಈ ಬಾರಿ ಬಜೆಟ್‌ನಲ್ಲಿ ಪ್ರಸ್ತಾವಿಸಲಾಗುವುದು ಎಂದರು.ಕೃಷಿ ಸುಣ್ಣ ರೈತರಿಗೆ ನೀಡುವುದು ಸಮಸ್ಯೆಯಾಗಿರುವುದು ಗಮನಕ್ಕೆ ಬಂದಿದ್ದು, ಅದನ್ನು ಜಾರಿಗೊಳಿಸಬಹುದು. ದಿಶಾಂಕ್ ಆ್ಯಪ್‌ನಲ್ಲಿ ಕೆಲವು ಸಮಸ್ಯೆಗಳಿದ್ದು, ಅದನ್ನು ಕಂದಾಯ ಇಲಾಖೆಯವರು ಗಮನಿಸಿ ಸರಿಪಡಿಸಲಿದ್ದಾರೆ ಎಂದರು. ಎಪಿಎಂಸಿ ಮಾರುಕಟ್ಟೆಗಳು ಹಲವು ಕಡೆಗಳಲ್ಲಿ ಸಾರ್ವಜನಿಕರ ಸೇವೆಗೆ ಲಭ್ಯವಾಗದೆ ಹಾಳು ಬಿದ್ದಿದ್ದು ಹಾಗೂ ಕಾಳು ಮೆಣಸಿನ ಮೇಲೆ ರಾಜ್ಯ ಸರ್ಕಾರ ಶೇ.೫ ಹೆಚ್ಚುವರಿಗೆ ತೆರಿಗೆ ಹಾಕುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಸಂಬಂಧಿಸಿದ ಸಚಿವರ ಬಳಿ ಮಾತನಾಡಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.-- (ಬಾಕ್ಸ್) --

ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದ ಸಚಿವರಂಭಾಪುರಿ ಪೀಠಕ್ಕೆ ಕುಟುಂಬ ಸಮೇತ ಭೇಟಿ ನೀಡಿದ ಸಚಿವ ಚೆಲುವರಾಯಸ್ವಾಮಿ ಕ್ಷೇತ್ರನಾಥ ವೀರಭದ್ರಸ್ವಾಮಿ ದೇವಾಲಯ, ಭದ್ರಕಾಳಿ ಅಮ್ಮನವರ ದೇವಾಲಯ ಹಾಗೂ ಜಗದ್ಗುರು ರೇಣುಕಾಚಾರ್ಯ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳ ದರ್ಶನ ಪಡೆದು ಫಲ ಸಮರ್ಪಿಸಿ ಆಶೀರ್ವಾದ ಪಡೆದರು. ಸಚಿವರಿಗೆ ರೇಶ್ಮೆ ಶಾಲು, ಹಾರ, ಮಂತ್ರಾಕ್ಷತೆ ನೀಡಿ ಜಗದ್ಗುರುಗಳು ಶುಭ ಹಾರೈಸಿದರು.ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಸಚಿವರೊಂದಿಗೆ ಈ ಸಂದರ್ಭದಲ್ಲಿ ಮಾತನಾಡಿ, ರಂಭಾಪುರಿ ಪೀಠದ ಧ್ವಜ ಹಸಿರು ಬಣ್ಣದಾಗಿದ್ದು, ರಂಭಾಪುರಿ ಪೀಠ ಕೃಷಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ.ಮೈಸೂರು ಮಹಾರಾಜರ ಕಾಲದಲ್ಲಿ ರಂಭಾಪುರಿ ಪೀಠಕ್ಕೆ ದೊರೆತ ಕೃಷಿ ಭೂಮಿಯಲ್ಲಿ ಇಂದಿಗೂ ೪೦ಕ್ಕೂ ಅಧಿಕ ಎಕರೆ ಜಾಗದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಉತ್ತಮ ಕಾಫಿ ಕೃಷಿ ಸಹ ಮಾಡಲಾಗುತ್ತಿದೆ. ಕೃಷಿ ಇಲಾಖೆಯಿಂದ ಅಗತ್ಯವಿರುವ ಯೋಜನೆಗಳನ್ನು ಶ್ರೀಪೀಠಕ್ಕೆ ನೀಡಬೇಕು ಎಂದು ಸಚಿವರಲ್ಲಿ ತಿಳಿಸಿದರು.ಸಚಿವ ಚೆಲುವರಾಯಸ್ವಾಮಿ ಪ್ರತಿಕ್ರಿಯಿಸಿ, ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರು ಶ್ರೀಪೀಠಕ್ಕೆ ಭೇಟಿ ನೀಡಿ ಅಗತ್ಯವಿರುವ ಯೋಜನೆ ನೀಡಲು ಸೂಚಿಸುತ್ತೇನೆ ಎಂದು ತಿಳಿಸಿದರು.ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯರಯ, ಶಾಸಕ ಟಿ.ಡಿ.ರಾಜೇಗೌಡ, ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್. ಚನ್ನಕೇಶವ, ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ, ಸದಸ್ಯ ಬಿ.ಕೆ.ಮಧುಸೂದನ್, ಇಬ್ರಾಹಿಂ ಶಾಫಿ, ಎಂ.ಜೆ.ಮಹೇಶ್ ಆಚಾರ್ಯ, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಅರುಣ್‌ಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ತಿರುಮಲೇಶ್, ಡಿಡಿಎ ವೆಂಕಟೇಶ್ ಚೌಹಾಣ್ ಮತ್ತಿತರರು ಹಾಜರಿದ್ದರು.೦೬ಬಿಹೆಚ್‌ಆರ್ ೧:

ಬಾಳೆಹೊನ್ನೂರು ರಂಭಾಪುರಿ ಪೀಠಕ್ಕೆ ಭೇಟಿ ನೀಡಿದ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರನ್ನು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಆಶೀರ್ವದಿಸಿದರು. ಟಿ.ಡಿ.ರಾಜೇಗೌಡ, ಎಂ.ಎಸ್.ಚನ್ನಕೇಶವ, ರವಿಚಂದ್ರ, ಮಧುಸೂದನ್, ಇಬ್ರಾಹಿಂ ಶಾಫಿ, ಮಹೇಶ್ ಆಚಾರ್ಯ ಇದ್ದರು.