ಪಕ್ಷದ ಹೈಕಮಾಂಡ್‌ ತೀರ್ಮಾನ ಸ್ವಾಗತಿಸುವೆ: ಟೆಂಗಿನಕಾಯಿ

| Published : Jan 26 2024, 01:48 AM IST

ಸಾರಾಂಶ

ಈಗಾಗಲೇ ಕೇಂದ್ರ ಸಚಿವ ಹಾಗೂ ಸಂಸದ ಪ್ರಹ್ಲಾದ ಜೋಶಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ನಾನು ಪಕ್ಷದ ಶಿಸ್ತಿನ ಸಿಪಾಯಿ.ಈ ವಿಷಯವಾಗಿ ವರಿಷ್ಠರು ತೆಗೆದುಕೊಳ್ಳುವ ಯಾವುದೇ ತೀರ್ಮಾನಗಳಿರಲಿ ಅವುಗಳಿಗೆ ಬದ್ಧವಾಗಿರುತ್ತೇನೆ

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ, ವಿಪ ಸದಸ್ಯ ಜಗದೀಶ ಶೆಟ್ಟರ್‌ ಮರಳಿ ಬಿಜೆಪಿ ಸೇರ್ಪಡೆಯಾಗಿದ್ದು, ಪಕ್ಷದ ಹೈಕಮಾಂಡ್‌ ತೆಗೆದುಕೊಂಡಿರುವ ತೀರ್ಮಾನವನ್ನು ಸ್ವಾಗತಿಸುವುದಾಗಿ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಸುದ್ದಿಗಾರರೊಂದಿಗೆ ಈ ಕುರಿತು ಮಾತನಾಡಿ, ಶೆಟ್ಟರ್‌ ಬಿಜೆಪಿಗೆ ಮರಳುವುದರಿಂದ ನಮ್ಮಲ್ಲಿ ಯಾವುದೇ ಮುನಿಸಿಲ್ಲ. ಪಕ್ಷದ ತತ್ವ, ಸಿದ್ಧಾಂತ ಒಪ್ಪಿ ಕಾಂಗ್ರೆಸ್, ಜೆಡಿಎಸ್ ಪಕ್ಷದ ಅನೇಕ ನಾಯಕರು ಈಗಾಗಲೇ ಬಿಜೆಪಿಗೆ ಬಂದಿದ್ದಾರೆ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುತ್ತೇವೆ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸುವುದೇ ನಮ್ಮೆಲ್ಲರ ಮುಂದಿನ ಗುರಿ ಅದರ ಮುಂದೆ ಇವುಗಳೆಲ್ಲವೂ ನಗಣ್ಯ ಎಂದರು.

ಪಕ್ಷದ ತೀರ್ಮಾನಕ್ಕೆ ಬದ್ಧ: ಧಾರವಾಡ ಲೋಕಸಭಾ ಕ್ಷೇತ್ರದಿಂದ ಜಗದೀಶ ಶೆಟ್ಟರ್ ಅಭ್ಯರ್ಥಿಯಾಗುತ್ತಾರೆಯೇ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಟೆಂಗಿನಕಾಯಿ, ಈಗಾಗಲೇ ಕೇಂದ್ರ ಸಚಿವ ಹಾಗೂ ಸಂಸದ ಪ್ರಹ್ಲಾದ ಜೋಶಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ನಾನು ಪಕ್ಷದ ಶಿಸ್ತಿನ ಸಿಪಾಯಿ.ಈ ವಿಷಯವಾಗಿ ವರಿಷ್ಠರು ತೆಗೆದುಕೊಳ್ಳುವ ಯಾವುದೇ ತೀರ್ಮಾನಗಳಿರಲಿ ಅವುಗಳಿಗೆ ಬದ್ಧವಾಗಿರುತ್ತೇನೆ ಎಂದರು.

ಯಾರೂ ಅನಿವಾರ್ಯವಲ್ಲ: ಗುರುವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಶಾಸಕ ಮಹೇಶ ಟೆಂಗಿನಕಾಯಿ, ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ. ಬಿಜೆಪಿ ಸದೃಢವಾಗಿದೆ. ಜಗದೀಶ ಶೆಟ್ಟರ್ ಅವರಿಗೆ ಕಾಂಗ್ರೆಸ್ ಬೇಸರವಾದ ಕುರಿತು ನನಗೆ ಗೊತ್ತಿಲ್ಲ. ಅವರನ್ನೇ ಕೇಳಿ ಎಂದು ತಿಳಿಸಿದ್ದರು.